ಮತ್ತೊಂದು ಸೈಬರ್‌ ವಂಚನೆ, ಪ್ರಾಂಶುಪಾಲೆಯಿಂದ 24 ಲಕ್ಷ ಸುಲಿಗೆ ಮಾಡಿದ ಸೈಬರ್‌ ವಂಚಕರು

Most read

ಬೆಂಗಳೂರು: ಸಿಬಿಐ ಅಧಿಕಾರಿ ಹೆಸರಿನಲ್ಲಿ ಬೆಂಗಳೂರಿನ ಕಾಲೇಜೊಂದರ
ಪ್ರಾಂಶುಪಾಲೆಯೊಬ್ಬರಿಂದ ಸೈಬರ್‌ ವಂಚಕರು ರೂ. 24 ಲಕ್ಷ ರೂ. ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆಗೀಡಾದ ಪ್ರಾಂಶುಪಾಲರು ವೈಟ್‌ ಪೀಲ್ಡ್‌ ವಿಭಾಗದ ಎಸ್‌ ಇ ಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ವಂಚಕ ತಾನು ಸಿಬಿಐ ಅಧಿಕಾರಿ ಅಶೀಶ್ ಶರ್ಮಾ ಎಂದು ಪರಿಚಯಿಸಿಕೊಂಡಿದ್ದಾನೆ. ನವೆಂಬರ್ 22 ರಂದು ಪ್ರಾಂಶುಪಾಲೆ ಮೊಬೈಲ್‌ಗೆ ಕರೆ ಮಾಡಿ ನಿಮ್ಮ ಮೊಬೈಲ್ ನಂಬರ್ ಅನ್ನು ಬಳಸಿ ಮಾನವ ಕಳ್ಳಸಾಗಣಿಕೆ ಮತ್ತು ಅಕ್ರಮ ಹಣ ಸಾಗಣಿಕೆ ನಡೆಯುತ್ತಿದೆ. ಸುಮಾರು 80 ಮಕ್ಕಳು
ಸಿಂಗಪುರದಲ್ಲಿ ಸಿಲುಕಿರುವ ವರದಿ ಬಂದಿದೆ ಎಂದು ಬೆದರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನಂತರ ಈತ ಭಯಪಡಬೇಡಿ, ನಿಮಗೆ ನಾನು ಸಹಾಯ ಮಾಡುತ್ತೇನೆ ಎಂದು ಸಂತ್ರಸ್ತೆಗೆ ಧೈರ್ಯ ತುಂಬಿದ್ದಾನೆ. ಈ ಪ್ರಕರಣ ಕುರಿತು ನಿಮ್ಮೊಂದಿಗೆ ದೆಹಲಿ ಪೊಲೀಸರು ಮಾತನಾಡಲಿದ್ದಾರೆ ಎಂದು ಕರೆಯನ್ನು ಸ್ಥಗಿತಗೊಳಿಸಿದ್ದಾನೆ. ಕೆಲ ನಿಮಿಷಗಳ ನಂತರ ಪ್ರಾಂಶುಪಾಲೆಯ ವಾಟ್ಸ್ ಆ್ಯಪ್‌ಗೆ ದೆಹಲಿ ಪೊಲೀಸರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಕಳುಹಿಸಲಾಗಿದೆ. ನಂತರ ಅಪರಿಚಿತನೊಬ್ಬ ಮತ್ತೆ ಕರೆ ಮಾಡಿ ಪ್ರಕರಣದ ಕುರಿತು ವಿಚಾರಣೆಗೆ ಹಾಜರಾಗಬೇಕು
ಎಂದು ಸೂಚನೆ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಂತರ ಅಕ್ರಮ ಹಣ ಸಾಗಾಣಿಕೆ ಆರೋಪ ಸಂಬಂಧ ಬ್ಯಾಂಕ್ ಖಾತೆ ಪರಿಶೀಲಿಸಬೇಕಿದೆ ಎಂದು ಪ್ರಾಂಶುಪಾಲರ ಬ್ಯಾಂಕ್ ವಿವರಗಳನ್ನು ಸಂಗ್ರಹಿಸಿದ್ದಾನೆ. ಬ್ಯಾಂಕ್‌ ನಲ್ಲಿರುವ ನಿಮ್ಮ ಹಣವನ್ನು ಸರ್ಕಾರದ ಖಾತೆಗೆ ವರ್ಗಾಯಿಸಬೇಕು. ವಿಚಾರಣೆ ಪೂರ್ಣಗೊಂಡ ನಂತರ ನಿಮ್ಮ ಹಣವನ್ನು ಮರಳಿಸಲಾಗುವುದು ಎಂದು ನಂಬಿಸಿದ್ದಾನೆ. ಈತನನ್ನು ನಂಬಿದ ಅವರು
24.36 ಲಕ್ಷ ರೂ. ಹಣವನ್ನು ಆರ್‌ ಟಿಜಿಎಸ್‌ ಮೂಲಕ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ನಂತರ ಕರೆ ಸ್ತಗಿತಗೊಂಡಿದೆ ನಂತರ ಇವರಿಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

More articles

Latest article