ಬೆಂಗಳೂರು: ತಮ್ಮ ಕಂಪನಿಯ ಲೋಗೊ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಪೋಟೊವನ್ನು ವ್ಯಾಟ್ಸ್ ಆಪ್ ಡಿಪಿಯಲ್ಲಿ ಹಾಕಿಕೊಂಡು ವ್ಯಾಟ್ಸ್ ಆಫ್ ನಂಬರ್ನಿಂದ ಕಂಪನಿಯ ಯೋಜನೆಯೊಂದಕ್ಕೆ ಆಡ್ವಾನ್ಸ್ ಸೆಕ್ಯೂರಿಟಿ ಡಿಪಾಜಿಟ್ಗಾಗಿ 5 ಲಕ್ಷ 60 ಸಾವಿರ ಹಣವನ್ನು ವರ್ಗಾವಣೆ ಮಾಡುವಂತೆ ವ್ಯಾಟ್ಸ್ ಆಫ್ ಮೇಸೆಜ್ ಮೂಲಕ ಸಂದೇಶ ಬಂದಿರುತ್ತದೆ. ಇದನ್ನು ನಂಬಿದ ಕಂಪನಿಯ ಉದ್ಯೋಗಿ, ಮೇಸೆಜ್ನಲ್ಲಿ ತಿಳಿಸಿದ್ದ ಖಾತೆಗೆ ಹಣವನ್ನು ಜಮೆ ಮಾಡಿರುತ್ತಾರೆ. ನಂತರ ಮೋಸ ಹೋಗಿರುವುದು ತಿಳಿದು ಬರುತ್ತದೆ. ಕೊನೆಗೆ ಅವರು ಆಗ್ನೆಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ತನಿಖೆಯನ್ನು ಕೈಗೊಂಡ ಸಿ.ಇ.ಎನ್ ಪೊಲೀಸರು ಆರೋಪಿಗಳ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಹಣ ಹೈದರಬಾದ್ ಮೂಲದ ಆರೋಪಿಯ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದ್ದು, ಆತನನ್ನು ಹೈದರಬಾದ್ನಲ್ಲಿಯೇ ಬಂಧಿಸಲಾಗಿರುತ್ತದೆ. ಈತನ ವಿಚಾರಣೆ ಮಾಡಿದಾಗ ತಪ್ಪನ್ನು ಒಪ್ಪಿಕೊಂಡು ಇತರೆ ಐವರು ಸಹಚರರಿಗೆ ಹಣವನ್ನು ವರ್ಗಾಯಿಸಿರುವುದಾಗಿ ತಿಳಿಸಿರುತ್ತಾನೆ.
ಆರೋಪಿಗಳಿಂದ ಮೊಬೈಲ್ ಹಾಗೂ ವಂಚನೆ ಹಣದಿಂದ ಖರೀದಿಸಿದ್ದ ಆಡಿ ಕಾರು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿದ್ದ 5 ಲಕ್ಷ ರೂ. ಹಣವನ್ನು ದೂರುದಾರರಿಗೆ ಹಿಂತಿರುಗಿಸಲಾಗಿದೆ.