ಸಂಸ್ಕೃತವಂತರ ಸಂಸ್ಕೃತಿ ಹೀನ ಮಾತು

Most read

ಉಡುಪಿಯ ಕಾರ್ಯಕ್ರಮವೊಂದರಲ್ಲಿ ಅಲ್ಲಿನ ಸ್ವಾಮಿಗಳೊಬ್ಬರು ಸಂಸ್ಕೃತ ಕಲಿತವರಷ್ಟೇ ಸ್ವರ್ಗವಾಸಿಗಳಾಗಲು ಅರ್ಹರು ಎಂಬಂತಹ ಮಾತುಗಳನ್ನಾಡಿದ್ದಾರೆ. ಬೇರೆ ಯಾವ ಸ್ವಾಮಿಗಳಾದರೂ ಇಂತಹ ಮಾತುಗಳನ್ನಾಡಿದ್ದರೆ ಅವರುಗಳ ಯೋಚನೆಯೇ ಅಂತದ್ದೆಂದು ಸುಮ್ಮನಿದ್ದಿರಬಹುದಿತ್ತು ಆದರೆ ಸುಗುಣೇಂದ್ರ ತೀರ್ಥರಂತವರ ಬಾಯಿಂದ ಇಂತಹ ಮಾತುಗಳು ಖಂಡಿತ ಬರಬಾರದಿತ್ತು. ಜಿಗುಟುತನದ ಸ್ವಾಮೀಜಿಗಳೆಂದೇ ಪರಿಭಾವಿಸಲ್ಪಟ್ಟ (ಪಂಕ್ತಿಭೇದ, ಕನಕಗೋಪುರ ವಿವಾದ ಇತ್ಯಾದಿ ಅನೇಕ ಜಿಗುಟು ಕಾರಣಗಳಿಗಾಗಿ) ಉಡುಪಿ ಮಠದ ಸ್ವಾಮೀಜಿಗಳು ಸುಗುಣೇಂದ್ರರು ಕೇವಲ ವಿದೇಶಕ್ಕೆ ಹೋದರು ಎಂಬ ಕಾರಣಕ್ಕಾಗಿ ಅವರಿಗೆ ಕೊಟ್ಟಂತಹ ಕಾಟ ಎಲ್ಲರಿಗೂ ತಿಳಿದದ್ದೇ. ಸ್ವಾಮೀಜಿಗಳಿಗೆ ಮದುವೆಯಾಗದೆಯೂ ಮಕ್ಕಳಿರಲೂಬಹುದು ಅಥವಾ ಮತ್ತೊಂದರ ಅಭ್ಯಾಸವೂ ಇರಬಹುದು ಆದರೆ ಜುಜುಬಿ ಸಮುದ್ರೋಲ್ಲಂಘನ ಮಾತ್ರ ಮಾಡಲೇ ಬಾರದಂತೆ. ಅವರ ಕಥೆಯ ಪ್ರಕಾರ ಉಡುಪಿಯ ಸ್ವಯಂ ಶ್ರೀಕೃಷ್ಣನ ಮೂರ್ತಿಯೇ ಬಂದದ್ದು ಸಮುದ್ರದ (ಹಡಗಿನ) ಮೂಲಕ. ಆದರೂ ಸಮುದ್ರದ ಮೇಲೆ ಇವರಿಗೆ ಅದೆಂತದೋ ಕೋಪ.

ಅಷ್ಟಕ್ಕೂ ಈ ಸ್ವಾಮೀಜಿ ಹೋದದ್ದು ಮಧ್ವ ಪರಂಪರೆಯ ವಿಸ್ತಾರಕ್ಕೇ ವಿನಹ ವೈಯುಕ್ತಿಕ ಕಾರಣಗಳಿಗಲ್ಲ. ಹೀಗಿದ್ದೂ ಕೂಡ ಅವರ ಪೀಠಾರೋಹಣಕ್ಕೆ ಮಠದ ಇನ್ನಿತರರಿಂದಲೇ ವಿರೋಧ ಎದುರಾಗಿ ಕೊನೆಗೆ ಮೂರ್ತಿಯ ಸ್ಪರ್ಷ ಮಾಡದೇ ಪೂಜಿಸಬಹುದೆಂಬ ಕರಾರನ್ನು ಅವರಿಗೆ ಹಾಕಲಾಗಿತ್ತಂತೆ. ಒಟ್ಟಾರೆ ಜಿಗುಟುತನದ ತಾರತಮ್ಯದ ನೋವನ್ನು ಸ್ವತಃ ಉಂಡಂತಹ ವ್ಯಕ್ತಿಯೇ ಒಂದು ಭಾಷೆಯ ನೆಪದಲ್ಲಿ ತಾರತಮ್ಯಕ್ಕೆ ನೀರೆರೆಯುವಂತಹ ಮಾತನಾಡುತ್ತಾರೆಂದರೆ ರೂಢಿಯಲ್ಲಿರುವ ’ಬ್ರಾಹ್ಮಣ ಬ್ರಾಹ್ಮಣ್ಯವನ್ನು ಬಿಟ್ಟರೂ ಬ್ರಾಹ್ಮಣ್ಯ ಬ್ರಾಹ್ಮಣನನ್ನು ಬಿಡಲಾರದು” ಎಂಬ ನಾಣ್ನುಡಿ ನೆನಪಿಗೆ ಬರುತ್ತದೆ. ಒಂದೆರಡು ವರ್ಷಗಳ ಹಿಂದೆ ದೇವಭಾಷೆಯೆಂಬ ಆರೋಪವುಳ್ಳ ಸಂಸ್ಕೃತವನ್ನು ಬಿಟ್ಟು ಕನ್ನಡದಲ್ಲೇ ದೇವರಿಗೆ ಪೂಜೆ ನಡೆಸಿ ಮಹಾ ’ರೆಬೆಲ್”ಎನ್ನಿಸಿ ಕೊಂಡಂತಹ ವ್ಯಕ್ತಿಯೊಬ್ಬರು ಬ್ರಾಹ್ಮಣ್ಯದ ಪರ ಮಾತನಾಡಿ ಉಗಿಸಿಕೊಂಡಿದ್ದೂ ಕೂಡ ಇಂತಹದೇ ಕೆಟಗರಿಗೆ ಸೇರುತ್ತದೆ.

ಇಂತವರದ್ದು ಒಂದು ಚಾಳಿಯಿದೆ. ಅದೆಂದರೆ, ಸಂಸ್ಕೃತ ಹೇಳಿ ಕೇಳಿ ದೇವ ಭಾಷೆ. (ಅವರ ಪ್ರಕಾರ). ಅದು ಮಹಾನ್ ಹಾಗೂ ಎಲ್ಲಾ ಭಾಷೆಗಳಿಗೂ ಮಿಗಿಲಾದಂತದ್ದು ಜೊತೆಗೆ ಪ್ರಪಂಚದ ಭಾಷೆಗಳೆಲ್ಲ ಹುಟ್ಟಿದ್ದೇ ಈ ಸಂಸ್ಕೃತದಿಂದ ಅನ್ನೋದು. ಕನ್ನಡದ ದಿನ ಪತ್ರಿಕೆಯಲ್ಲಿ ಹಿಂದೊಮ್ಮೆ ಒಂದು ಸಣ್ಣ ಕಾಲಂ ಬರುತ್ತಿತ್ತು. ಕನ್ನಡದ ಪದವೊಂದನ್ನು ಕೊಟ್ಟು ಅದರ ಸಂಸ್ಕೃತ ಮೂಲ ವಿವರಿಸೋದು. ಶಾಲಾ ಪಾಠಗಳಲ್ಲಿ ನೀವೇ ಗಮನಿಸಿದ್ದಿರಬಹುದು ತತ್ಸಮ ತದ್ಭವ ಎಂಬ ಸಂಗತಿಯನ್ನು. ಅಂದರೆ ಇದರರ್ಥ ಹೀಗಿದ್ದದ್ದು (ತತ್ ಸಮ) ಹೀಗಾಗಿದೆ (ತತ್ ಭವ) ಎಂದು. ಎಲ್ಲಕ್ಕೂ ಸಂಸ್ಕೃತವೇ ಮೂಲ ಎಂಬ ಭಾವವನ್ನು ಇಲ್ಲೂ ಕೂಡ ಕಾಣಬಹುದು. ಆದರೆ ಸಂಸ್ಕೃತವೇ ಎಲ್ಲಕ್ಕೂ ಮೂಲ ಎನ್ನುವುದಾಗಲೀ, ಸರ್ವ ಭಾಷೆಗಳ ತಾಯಿ ಎನ್ನುವುದಾಗಲೀ, ಮಹಾನ್ ಅಥವಾ ಸ್ವರ್ಗಕ್ಕೇ ವೀಸಾ ಒದಗಿಸುವಂತಹ ದೇವ ಭಾಷೆ ಎನ್ನುವುದಾಗಲೀ ತೀರಾ ಬಾಲಿಶವಾದ ಕಲ್ಪನೆಯಷ್ಟೆ.

ಸಂಸ್ಕೃತ ಒಂದು ಹಳೆಯ ಹಾಗೂ ಉತ್ತಮವಾದ ಭಾಷೆ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಸಂಸ್ಕೃತಕ್ಕೂ ಹಳೆಯದಾದ ಹೀಬ್ರೂ, ಗ್ರೀಕ್ ನಂತಹ ಅನೇಕ ಭಾಷೆಗಳು ವಿಶ್ವದಲ್ಲಿ ಸಾಕಷ್ಟಿವೆ. ಅಷ್ಟೇ ಅಲ್ಲದೇ ಭಾರತದಲ್ಲೂ ಕೂಡ ಸಂಸ್ಕೃತದ ಹಿರಿಮೆಗೂ ಮೀರಿದ ಭಾಷೆಗಳಿವೆ. ತಮಿಳಾಗಲೀ ಕನ್ನಡವೇ ಆಗಲೀ ಸಂಸ್ಕೃತಕ್ಕಿಂತ ಯಾವ ರೀತಿಯಲ್ಲೂ ಕಡಿಮೆಯಿಲ್ಲ ಎನ್ನುವುದು ವಾಸ್ತವ. ಕನ್ನಡ ತಮಿಳಿನಂತಹ ಇಲ್ಲಿನ ನೆಲಮೂಲದ ಪ್ರಾಚೀನ ಭಾಷೆಗಳಾಗಲೀ ಅದರಲ್ಲಿನ ಸಾಹಿತ್ಯದ ಮೌಲ್ಯಗಳಾಗಲೀ ಎಲ್ಲವಕ್ಕೂ ಅದರದ್ದೇ ಆದ ಹಿರಿಮೆಯಿದೆ. ಶರಣರ ವಚನ ಪರಂಪರೆ, ಜನಪದರ ಜನಪದದ ಸೊಗಡು, ತುಳು ಭಾಷೆಯ ಪಾಡ್ದನ ಮೊದಲಾದವುಗಳಿಗೆಲ್ಲ ಬೇರೆ ಹೋಲಿಕೆಗಳಿಲ್ಲ.  

ಪುರಾಣದ ಕಥೆಗಳಲ್ಲಿ ಬರುವ ಕಾಲಮಾನ ಸಹಸ್ರ ವರ್ಷ, ಲಕ್ಷ ವರ್ಷಗಳ ಲೆಕ್ಕದಲ್ಲಿ ಇದೆಯೆಂಬ ಮಾತ್ರಕ್ಕೆ ಸಂಸ್ಕೃತವೂ ಕೂಡ ಅಷ್ಟೆ ಹಳೆಯದು ಎನ್ನುವುದು ಕೇವಲ ಹಾಸ್ಯಾಸ್ಪದ. ಅಸಲಿಗೆ ದೇಶದಲ್ಲಿ ಪ್ರಾಕೃತ, ಪಾಳಿಯಲ್ಲಿರುವ ಪ್ರಾಚೀನ ಶಾಸನಗಳ ಬಳಿಕ ಮೊದಲಿಗೆ ಸಂಸ್ಕೃತ ಶಾಸನದ ದಾಖಲೆಯಿರುವುದು ಪುಷ್ಯಮಿತ್ರ ಶುಂಗನ ಕಾಲದ ಬಳಿಕವಷ್ಟೆ. ಇಂಗ್ಲಿಷ್ ಭಾಷೆಗೆ ಲಿಪಿಯಿಲ್ಲದ ರೀತಿಯಲ್ಲಿ ದೇವಭಾಷೆ ಸಂಸ್ಕೃತಕ್ಕೂ ಕೂಡ ಸ್ವಂತದ್ದೆನ್ನುವ ಲಿಪಿಯಿಲ್ಲ. ಇಂಗ್ಲಿಷರು ರೋಮನ್ ಲಿಪಿಯನ್ನು ಬಳಸಿದಂತೆ ಸಂಸ್ಕೃತಿವಂತರು ನಾಗರಿ (ದೇವನಾಗರಿ) ಲಿಪಿಯನ್ನು ತಮ್ಮದೆಂಬಂತೆ ಬಳಸಿದರು. ಅಂದಹಾಗೆ, ಮಹಾಭಾರತ ಬರೆದ ಗಣಪತಿ ಬಳಸಿದ ಲಿಪಿ ಯಾವುದೋ..!!

ವಿಶ್ವದ ಯಾವುದೇ ಭಾಷೆಗಳೇ ಆಗಲಿ ಆ ಭಾಷೆಯ ಹಿಂದೆ ಒಂದು ಸಂಸ್ಕೃತಿಯ ಹಿನ್ನೆಲೆಯಿರುತ್ತದೆ. ತಮ್ಮ ಭಾಷೆಯನ್ನು ಹೊಗಳುವ ಭರದಲ್ಲಿ ಇನ್ನುಳಿದ ಭಾಷೆಗಳ ಪರೋಕ್ಷ ಕೆಳಗಿಳಿಸುವಿಕೆ ಯಾವತ್ತೂ ಒಳ್ಳೆಯದಲ್ಲ. ಪ್ರತಿಯೊಂದು ಭಾಷೆಯೂ ಅದರದ್ದೇ ಆದಂತಹ ಮಹತ್ವವನ್ನು ಹೊಂದಿರುತ್ತದೆ. ಇಂಗ್ಲಿಷ್ ಜಗತ್ತಿನ ಸರ್ವ ಶ್ರೇಷ್ಠ ಭಾಷೆ ಎಂದೇನೂ ಖಂಡಿತ ಅಲ್ಲ. ಮಡಿವಂತಿಕೆ ಇಲ್ಲದ ಎಲ್ಲದರ ಒಳಗೊಳ್ಳುವಿಕೆ (ಆಕ್ಸ್‌ಫರ್ಡ್ ನಿಘಂಟಿನಲ್ಲಿ ಪ್ರತಿ ವರ್ಷವೂ ಪರದೇಸಿ ಪದಗಳನ್ನು ಸೇರಿಸಿಕೊಳ್ಳಲಾಗುತ್ತದೆ. ಆ ರೀತಿಯಲ್ಲಿ ಹಿಂದಿಯಿಂದ ಹೋದ ಪ್ರಸಿದ್ಧ ಪದ ಜಂಗಲ್ ಅರ್ಥಾತ್ ಕಾಡು, ಅದೇ ರೀತಿ ಮಲಯಾಳಂ ನ ಇಂಜಿವೇರ್ ಅರ್ಥಾತ್ ಶುಂಠಿ ಇಂಗ್ಲಿಷ್ ನಲ್ಲಿ ಜಿಂಜರ್ ಆಯಿತು. ಇದೇ ರೀತಿಯಲ್ಲಿ ಸಾಕಷ್ಟು ಪದಗಳನ್ನು ಮುಕ್ತವಾಗಿ ಅದು ಎರವಲು ಪಡೆದದ್ದಲ್ಲದೇ ಕನ್ನಡದಂತಹ ಭಾಷೆಗಳೂ ಕೂಡ ’ಟ್ಯಾಂಕ್ ಫುಲ್ ತುಂಬಿತಾ..”, ’ಸ್ಪೀಡಾಗಿ ಬಾ..” ಎಂದು ಇಂಗ್ಲಿಷನ್ನೂ ಕೂಡ ಕನ್ನಡವಾಗೇ  ತಮ್ಮ ಭಾಷೆಯಲ್ಲಿ ಅಳವಡಿಸಿಕೊಂಡವು. ಆದರೆ ಇದಕ್ಕೆ ತದ್ವಿರುದ್ಧವಾಗಿ ದೇವಭಾಷೆಯೆಂಬ ಕಿರೀಟ ತೊಡಿಸಿ ತೀರಾ ಮಡಿವಂತಿಕೆಯಲ್ಲಿ ಬಂಧಿಯಾಗಿಟ್ಟ ಸಂಸ್ಕೃತ ತನಗೆ ತಾನೇ ಸ್ವರ್ಗಕ್ಕೆ ವೀಸಾವನ್ನ ಪಡೆದುಕೊಂಡು ಸ್ವರ್ಗಸ್ಥ ಅರ್ಥಾತ್ ದಿವಂ-ಗತವಾಯಿತು. ಯಾರನ್ನು ದೂರಿ ಏನು ಪ್ರಯೋಜನ..?

ಶಂಕರ್ ಸೂರ್ನಳ್ಳಿ.

ಸಾಮಾಜಿಕ ಚಿಂತಕರು

ಇದನ್ನೂ ಓದಿಕನ್ನಡ ಚಿತ್ರ ರಂಗದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ?

More articles

Latest article