ಬೆಂಗಳೂರಿನಲ್ಲಿ ಜುಲೈ 28 & 29ರಂದು ತೇಜಸ್ವಿ ಸಾಹಿತ್ಯ, ಸಾಂಸ್ಕೃತಿಕ ಹಬ್ಬ

Most read

ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಜು.28 ಮತ್ತು 29ರಂದು ಎರಡು ದಿನಗಳ ಕಾಲ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ, ಛಾಯಾಗ್ರಹಣ, ವರ್ಣಚಿತ್ರಗಳು ಮತ್ತು ಅವರ ವಿಚಾರಧಾರೆಯನ್ನು ಒಳಗೊಂಡಿರುವ ಕೃತಿಗಳನ್ನು ಬಿಡುಗಡೆ ಮಾಡವ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ.

ಮೆ.ಮುನಿಸ್ವಾಮಿ ಅಂಡ್‌ ಸನ್ಸ್‌, ಎಂ. ಚಂದ್ರಶೇಖರ್‌ ಪ್ರತಿಷ್ಠಾನ ಬೆಂಗಳೂರು, ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಜು.28ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಸಾಹಿತಿ ಪ್ರೊ. ಬಿ.ಎನ್‌.ಶ್ರೀರಾಮ್‌ ಉದ್ಘಾಟಿಸುವರು. ಮಾಜಿ ಉಪಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂನ ಹಾಲಿ ಶಾಸಕರಾದ ಡಾ ಸಿ.ಎನ್.ಅಶ್ವತ್ಥ್‌ ನಾರಾಯಣ್ ಅವರು ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ ಮಾಡಲಿದ್ದಾರೆ.

ಜು.29ರಂದು ಸೋಮವಾರ ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 14 ಸಂಪುಟಗಳ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಮಗ್ರ ಕೃತಿ ಜಗತ್ತು ಲೋಕಾರ್ಪಣೆ ಮಾಡುವರು. ಬೆಂಗಳೂರಿನ ಎಂ. ಚಂದ್ರಶೇಖರ್‌ ಪ್ರತಿಷ್ಠಾನದ ಸದಸ್ಯೆ ಸರೋಜ ಎಂ.ಚಂದ್ರಶೇಖರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಈ ಆಚರಣೆಯ ಸಂದರ್ಭದಲ್ಲಿ ಮಾಧ್ಯಮ ಅನೇಕ ನಿರ್ಮಾಣದ ಪೂರ್ಣಚಂದ್ರ ತೇಜಸ್ವಿಯವರ ಜೀವನ ಮತ್ತು ಕೃತಿಗಳ ಕುರಿತು ಬೃಹತ್ ಸಾಕ್ಷ್ಯಚಿತ್ರ ಸರಣಿ “ತೇಜಸ್ವಿ ಎಂಬ ವಿಸ್ಮಯ” ಲೋಕಾರ್ಪಣೆಯಾಗಲಿದೆ. ಅದರೊಂದಿಗೆ ಎಂಎಂ ಪಬ್ಲಿಕೇಷನ್ಸ್ ಅವರು ಪ್ರಕಟಿಸಿರುವ 14 ಸಂಪುಟಗಳ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸಮಗ್ರ ಕೃತಿಜಗತ್ತು ಸಂಪೂರ್ಣ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು.

ಎರಡು ದಿನಗಳ ಹಬ್ಬದಲ್ಲಿ ‘ಪೂರ್ಣಚಂದ್ರ’ ಚಿತ್ರ ಸಂಪುಟ ಬಿಡುಗಡೆ, ಅಣ್ಣನ ನೆನಪು ಸಾಕ್ಷ್ಯ ನಾಟಕ ಸೇರಿದಂತೆ ತೇಜಸ್ವಿ ಸಾಹಿತ್ಯ, ಅವರ ರಾಜಕೀಯ ಮತ್ತು ಸಾಮಾಜಿಕ ಚಿಂತನೆ ಕುರಿತಂತೆ ಗೋಷ್ಠಿಗಳು ನಡೆಯಲಿವೆ. ಇದೇ ವೇಳೆ ಪಕ್ಷಿಗಳ ಅಂಚೆಚೀಟಿ ಪ್ರದರ್ಶನ, ತೇಜಸ್ವಿ ಪುಸ್ತಕಗಳ ಪ್ರದರ್ಶನ, ತೇಜಸ್ವಿ ಅವರು ಸೆರೆಹಿಡಿದ ಫೋಟೋಗಳ ಪ್ರದರ್ಶನ ನಡೆಯಲಿದೆ.

More articles

Latest article