Sunday, September 8, 2024

ಮಾವಿಲನ್ ಮತ್ತು ಮಲೆ ವೆಟ್ಟು ಬುಡಕಟ್ಟು ಜನರ ಸಾಂಸ್ಕೃತಿಕ ಆಚರಣೆ ಮತ್ತು ಜೀವನ ವಿಧಾನ

Most read

ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಎಕರೆಗಟ್ಟಲೆ ಭೂಮಿ ಮತ್ತು ಹಣಕಾಸಿನ ನೆರವು ನೀಡುವ  ಕರ್ನಾಟಕ ಸರಕಾರ ಕೂಡ ಬುಡಕಟ್ಟು ಪರವಾದ ಕೇರಳ ಸರಕಾರದ ಮಾದರಿಯಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೊಂಡು  ಅರಣ್ಯ ಮೂಲ ಬುಡಕಟ್ಟು ವಸತಿ ರಹಿತ, ಭೂ ರಹಿತ ಬುಡಕಟ್ಟುಗಳಿಗೆ ದೊಡ್ಡ ಮಟ್ಟದ ಪುನರ್ವಸತಿ ಕಲ್ಪಿಸಿ ಮಾದರಿ ರಾಜ್ಯವಾಗಲಿ- ಡಾ. ಸಬಿತಾ, ಮಂಗಳೂರು ವಿವಿ

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳ ಮತ್ತು ಸಮಗ್ರ ಗ್ರಾಮೀಣ ಆಶ್ರಮದ ಪಯಣವು ಕಾಸರಗೋಡು ಜಿಲ್ಲೆಯ ಕೊಯ್ಯಲಟ್ಟು ಎನ್ನುವ ಗ್ರಾಮಕ್ಕೆ ಭೇಟಿ ನೀಡಿ ಮಾವಿಲನ್ ಮತ್ತು ಮಲೆ ವೆಟ್ಟು ಬುಡಕಟ್ಟು ಜನರ ಸಾಂಸ್ಕೃತಿಕ ಆಚರಣೆ ಮತ್ತು ಜೀವನ ವಿಧಾನದ ಬಗ್ಗೆ ತಿಳಿಯುವ  ಅವಕಾಶವನ್ನು ಕಲ್ಪಿಸಿದವರು ನಮ್ಮ ತಂಡದ ಹಿರಿಯರಾದ ಅಶೋಕ್ ಶೆಟ್ಟಿ ಯವರು. ಸುಮಾರು 40 ವರ್ಷಕ್ಕೂ ಹೆಚ್ಚು ಸಮಯ ಬುಡಕಟ್ಟು ಸಮುದಾಯಗಳ ಜೊತೆಗೆ ಕೆಲಸದ ಅನುಭವವಿದ್ದು ತಾವು ಕಂಡ ಬುಡಕಟ್ಟು ಚಹರೆ ಮತ್ತು ಅಸ್ಮಿತೆಗಳು ಇಂದಿನ ಯುವ ಪೀಳಿಗೆಗಳಲ್ಲಿ ನಾಶವಾಗುತ್ತಿದೆ ಮತ್ತು ಅದನ್ನು ಯುವ ಬುಡಕಟ್ಟು ಜನರು ಉಳಿಸಿಕೊಳ್ಳ ಬೇಕು ಎಂಬ ಕಾಳಜಿ ಯಿಂದ ಸುಮಾರು 20 (ಅಶೋಕ್ ಶೆಟ್ಟಿ, ನರಸಿಂಹ, ಶೀನ, ಉಮೇಶ, ರೋಹಿತ್, ಕೃಷ್ಣ, ಪುತ್ರನ್, ಬೊಗ್ರ, ಶಶಿಕಲಾ, ವಿನುತಾ, ಸುರೇಖಾ, ದೀಪಿಕಾ, ವಿಜಯ, ಡಾ. ದಿನಕರ್, ಕು. ದೃಶಿಕಾ ಡಿ. ಎಸ್, ಡಾ. ಸಬಿತಾ, ವಿನಯ, ಗೋಪಾಲಣ್ಣ, ಅಂಬಿಕಾ, ಗೀತಾ ) ಬುಡಕಟ್ಟು ಯುವಕ ಯುವತಿಯರನ್ನು ಜೊತೆಗೂಡಿಸಿಕೊಂಡು ನೆರೆಯ ರಾಜ್ಯ ವಾದ ಕೇರಳದ ಬುಡಕಟ್ಟು ಹಾಡಿಗಳಿಗೆ ಅಧ್ಯಯನ ಪ್ರವಾಸ ಕೈ ಗೊಂಡೆವು.

ಮುಂದಕ್ಕೆ ಹೆಜ್ಜೆ ಇಡುತ್ತಿದ್ದರೆ ಪಕ್ಕದಲ್ಲಿ ಒಂದು ಸಮುದಾಯದ ಭವನ. ನಮ್ಮ ಜೊತೆಗಿದ್ದ ಸಮುದಾಯದ ಮುಖಂಡರು ಭವನಕ್ಕೆ ಮತ್ತೆ ಹೋಗೋಣ ಮುಂದಕ್ಕೆ ಬನ್ನಿ ಎಂದು ಹೇಳಿದರೂ ಕುತೂಹಲ ತಡೆಯಲಾರದೆ ಭವನದ ಕಿಟಿಕಿ ಇಣುಕಿ ನೋಡಿದೆ. ದೊಡ್ಡದಾದ ಅಂಬೇಡ್ಕರ್ ಫೋಟೋ ಗೋಡೆಯ ಮೇಲೆ ಚಿತ್ರಿಸಿದ್ದಾರೆ. ಪಕ್ಕದ ಇನ್ನೊಂದು ಕೊಠಡಿಯಲ್ಲಿ ಬುದ್ಧ ಧ್ಯಾನದಲ್ಲಿದ್ದಾನೆ. ಹೀಗೆ ನಮ್ಮ ತಂಡದ ಮುಖಂಡರು ಕರೆದುಕೊಂಡು ಹೋಗುವ ದಾರಿ ಅನುಸರಿಸಿ ಮುಂದಕ್ಕೆ ಹೋದೆವು. ಮೊದಲಿಗೆ ಮಾವಿಲನ್ ಮತ್ತು ಮಲೆ ವೆಟ್ಟು ಹಾಡಿ ಯ ಸುಮಾರು 43 ಕುಟುಂಬಗಳಿಗೆ ಭೇಟಿ ನೀಡಿದೆವು.

ನಮ್ಮಲ್ಲಿ ಇವತ್ತೊಂದು ಮದುವೆ ನಡೆಯುತ್ತಿದೆ ಎಂದು ಹೇಳುತ್ತಿದ್ದಂತೆ ನಮ್ಮ ಗಮನ ಅತ್ತ ಹೋಯಿತು. ಓಹೋ! ಎಷ್ಟು ಚಂದದ ಮುಳಿಯ ಹುಲ್ಲಿನ ವೃತ್ತಾಕಾರದ ಗುಡಿಸಲು. ಅದು ಮಾವಿಲ ಮತ್ತು ಮಲೆವೆಟ್ಟು ಬುಡಕಟ್ಟು ಸಮುದಾಯಗಳ ಪತ್ತೇರ್ ಕೂಟ ಸಂವಿಧಾನವಂತೆ! ಸಮುದಾಯದ ಎಲ್ಲಾ ಕ್ರಿಯಾವಿಧಿಗಳು ಅಲ್ಲಿಯೇ ನಡೆಯುವ ಸ್ಥಳವಂತೆ. ಅಕ್ಕಪಕ್ಕದಲ್ಲಿ ಹಣೆಮರ, ಸಂಪಿಗೆ ಮರ, ಕಾಸರಕ ಮರ, ಕಹಿಬೇವಿನ ಮರ ಸಾಲಾಗಿ ಬೆಳೆದು ನಿಂತಿದ್ದವು. ಇವುಗಳ ಕೆಳಗೆ ಸಣ್ಣ ಸಣ್ಣ ಗುಂಡು ಕಲ್ಲು ಮತ್ತು ದೀಪದ ಹಣತೆಗಳನ್ನು ಇಡಲಾಗಿತ್ತು. ಅವುಗಳು ಅವರ ಗುಳಿಗ, ಅಜ್ಜ ಮತ್ತು ಅಮ್ಮನವರ ಸ್ಥಾನವಂತೆ. ಇತ್ತ ಕಡೆ ಮದುವೆಯ ಸಂಪ್ರದಾಯಗಳು ಬಹಳ ಶ್ರದ್ಧೆಯಿಂದ ನಡೆಯುತ್ತಿದ್ದವು. ಆ ವೃತ್ತಾಕಾರದ ಗುಡಿಸಿಲಿಗೆ ಸುತ್ತ ಬರುತ್ತ ಫೋಟೋ ಕ್ಲಿಕ್ಕಿಸಿ ಕೊಂಡೆವು.

ಅಲ್ಲಿಯ ಒಬ್ಬ ವಿಶೇಷ ವ್ಯಕ್ತಿಯು ನಮ್ಮ ಗಮನ ಸೆಳೆದರು. ಒಂದು ಕಪ್ಪಗಿನ ಮುಂಡು ಮತ್ತು ಶರ್ಟ್, ಜೊತೆಗೆ  ತಲೆ ಮೇಲೆ ಮುಟ್ಟಾಳೆ ಧರಿಸಿದ್ದರು. ಅವರು ಆ ಮದುವೆ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವುದನ್ನು ಗಮನಿಸಿ ಪಕ್ಕದಲ್ಲಿ ಇದ್ದ ವ್ಯಕ್ತಿಯಲ್ಲಿ ಅವರು ಯಾರು ಎಂದು ಕೇಳಿದೆವು. ಅವರು ಈ ಕೂಟದ ಮುಪಾನರ್(ಗುರಿಕಾರ ) ಎಂದು ಅವರು ಹೇಳಿದರು. ಅವರ ಪಕ್ಕದಲ್ಲಿಯೇ ಉಪ ಮುಪಾನರ್ ಕೂಡ ಇದ್ದರು. ಜನರೆಲ್ಲರೂ ಸಾಮಾನ್ಯ ಉಡುಪು ಧರಿಸಿಕೊಂಡು ಮದುವೆಯಲ್ಲಿ ಭಾಗಿಯಾಗಿದ್ದರು.

ಪಕ್ಕದಲ್ಲಿ ಇದ್ದ ಮಣ್ಣಿನ ಗುಡಿಯ ಬಗ್ಗೆ ಕುತೂಹಲದಿಂದ ಕೇಳಿದೆವು. “ಇದು ನಮ್ಮ ಅಜ್ಜನ ಗುಡಿ.  ಪಕ್ಕದಲ್ಲಿ ನೀಲಿಯಮ್ಮ  ಸ್ಥಳ ಇದೆ” ಎಂದು ಹೇಳಿ ತಮ್ಮ ತಮ್ಮ ಪೂರ್ವಿಕರಿಗೆ ಮದಿಪು ಹೇಳುವುದರಲ್ಲಿ ಮಗ್ನರಾದರು. ಮದುವೆ ಕ್ರಿಯೆ ಮುಗಿಯಿತು. ಅವರೆಲ್ಲ ತಮ್ಮ ತಮ್ಮ ಮನೆಗೆ ಹೋದರು. ಇತ್ತ ನಮ್ಮ ಪ್ರವಾಸ ತಂಡಕ್ಕೆ ಆ ಮದುವೆ ಕ್ರಿಯೆಯಲ್ಲಿ ಭಾಗಿಯಾಗಿದ್ದ ಓರ್ವ ವ್ಯಕ್ತಿ ಕುಡಿಯಲು ನೀರು ಮತ್ತು ಹಣ್ಣು ಗಳನ್ನು ನೀಡಿ ಆ ಕೂಟದ ಒಳಗಡೆ ಕುಳಿತು ಕೊಳ್ಳುವ ವ್ಯವಸ್ಥೆ ಮಾಡಿದರು. ನಮ್ಮ ತಂಡದ ಇಪ್ಪತ್ತು ಜನರು ಅವರ ಮಾತಿಗಾಗಿ ಕಾಯುತ್ತ ಅವರ ಹಿರಿಯರನ್ನು ಮಾತನಾಡಿಸಲು ಪ್ರಾರಂಭಿಸಿದೆವು. ನಮ್ಮ ತಂಡದ ವಿನಯ ಕಾಸರಗೋಡು ಮತ್ತು ಗೋಪಾಲಣ್ಣ ರವರು ಮಲೆಯಾಳಂ ನಿಂದ ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದರು. ಮಾತಿಗೆ ಮೊದಲು ಅವರು ತಮ್ಮ ತುಡಿ ವಾದ್ಯವನ್ನು ಬಾರಿಸಿದರು. ಅವರು ತುಡಿ ಬಾರಿಸುವಾಗ ತಮ್ಮ ಜೀವನದ ಹುಟ್ಟಿನಿಂದ ಅಂತ್ಯದ ತನಕದ  ಭಾವ ಒಳಗೊಂಡ ಹಾಡುಗಳನ್ನು ಹಾಡುತಿದ್ದರು. ತಮ್ಮ ಪರಿಚಯ ಮಾಡಿಕೊಂಡು ತಮ್ಮ ಪತ್ತೇರ್ ಕೂಟದ ಇತಿಹಾಸ ವನ್ನು ನಮ್ಮ ಮುಂದೆ ಬಿಚ್ಚಿಟ್ಟರು.

ಪತ್ತೇರ್ ಕೂಟವನ್ನು ಗೋತ್ರ ಎಂದು ಕರೆಯುತ್ತಾರೆ. ಇಲ್ಲಿ ಸುಮಾರು 43 ಮಾವಿಲನ್ ಮತ್ತು ಮಲೆ ವೆಟ್ಟು ಬುಡಕಟ್ಟುಗಳು ಒಟ್ಟು ಸೇರಿ ಈ ಗೋತ್ರವಾಗಿದೆ. ಇದನ್ನು ಮುಂದುವರಿಸುವ ವ್ಯಕ್ತಿ ʼಮುಪಾನರ್ʼ ಎಂದು ತಿಳಿಸಿದರು. ಇಂತಹ 8 ಗೋತ್ರಗಳ ಮುಖ್ಯಸ್ಥರು ಉರಾಳಿಗಳು ಮತ್ತು ಉರಾಳಿಗಳ ಮುಖ್ಯಸ್ಥರು ಗುಳಿಗ ಎನ್ನುವ ಸ್ತರ ವ್ಯವಸ್ಥೆಯ ಬಗ್ಗೆ ಹೇಳಿದರು. ಹಾಗಾಗಿ ಹಿಂದೆ ನಮ್ಮ ಕೇರಳದಲ್ಲಿ ಹಣೆ ಮರಗಳು ಹೆಚ್ಚಾಗಿದ್ದವು ಅದಕ್ಕೂ ಕಾರಣವಿದೆ. ನಮ್ಮ ಬುಡಕಟ್ಟು ಪದ್ಧತಿಯಲ್ಲಿ ಮುಪಾನರ್ ಮತ್ತು ಗುಳಿಗ ಮರಣ ಹೊಂದಿದರೆ ಅವರನ್ನು ದಫನ ಮಾಡಿದ ಜಾಗದಲ್ಲಿ ಹಣೆಮರ ಸಸಿ ಹಾಕಬೇಕು. ಹಾಗಾಗಿ ಹೆಚ್ಚು ಹೆಚ್ಚು ಹಣೆಮರ ಕಂಡು ಬಂದ ಜಾಗಗಳು ಅದು ನಮ್ಮ ಗುಳಿಗ ಸ್ಥಾನ. ಆದರೆ ಇವತ್ತು ಆ ಸ್ಥಳದಲ್ಲಿ ತೆಂಗು ಹಾಗೂ ಇತರ ಮರಗಳು ಬಂದಿವೆ ಎಂದು ನೋವಿನಿಂದ  ಹೇಳಿದರು. ಹಾಗಾಗಿ ಈ ಗೋತ್ರ ವ್ಯವಸ್ಥೆಯಲ್ಲಿ ಕೊರಗ, ಮಾವಿಲ ಮತ್ತು ಮಲೆವೆಟ್ಟು ಸಮುದಾಯಗಳ ಸಾಂಸ್ಕೃತಿಕ ಸಮೀಕರಣ ಮತ್ತು ಐಕ್ಯತೆ ಇರುವುದು ಕಂಡು ಬಂತು. ಹೀಗೆ ಗುರು, ದೈವ, ಆಚರಣೆ, ಭಾಷೆ ಮತ್ತು ಉಡುಗೆ ತೊಡುಗೆಯೊಂದಿಗೆ ವಿಶಿಷ್ಟ ಜೀವನ ಶೈಲಿಯನ್ನು ಹೊಂದಿರುವ ಬಗ್ಗೆ ಅವರು ಮಾಹಿತಿ ನೀಡಿದರು.

ಮಾವಿಲನ್ ಹಾಗೂ ಮಲೆವೆಟ್ಟು ಬುಡಕಟ್ಟು ಸಮುದಾಯಗಳ ಎರಡು ಆವಾಸಗಳನ್ನು (habitat) ಒಂದೇ ಆವಾಸವಾಗಿ ಸುಸ್ಥಿರವಾಗಿ ಬೆಳೆಸುವ ಪ್ರಯತ್ನ ಹಾಗೆಯೇ ಬುಡಕಟ್ಟು ಸಮುದಾಯಗಳ ಆದಿ ಧರ್ಮದ ಪರಿಕಲ್ಪನೆಗಳಾದ ಸರ್ವಚೇತನವಾದ, ಕುಲದೇವತಾವಾದ, ತೀರಿಕೊಂಡ ಗುರುಹಿರಿಯರು, ಗುರಿಕಾರರುಗಳ ಜೀವನಾನುಭವ, ಸುಖದುಃಖಗಳಲ್ಲಿ ಜೋಗ, ಮಾಯೆಗಳ ರೂಪದಲ್ಲಿ ಸಮಾನ ಸಹಭಾಗಿಗಳಾಗಿ ಬದುಕುವ ಅನುಭವಗಳನ್ನು ತಿಳಿದೆವು. ಬೇರೆ ಪ್ರಭಾವಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಪ್ರಯತ್ನದೊಂದಿಗೆ ಮತ್ತು ಪ್ರಕೃತಿಯೊಂದಿಗೆ ಸಮ್ಮಿಳಿತಗೊಂಡ ಸರ್ವಜೀವಿಗಳೊಂದಿಗಿನ ಸರಳ ಸಹಬಾಳ್ವೆಯ ವಿಧಾನಗಳನ್ನು ಅಂತರ್ಗತ ಮಾಡಿಕೊಂಡಿರುವುದು ನಮಗೆಲ್ಲರಿಗೂ ಹೊಸ ಮೌಲ್ಯ, ಹೊಸ ಕಲಿಕೆ.

ಧಾರ್ಮಿಕ, ಸಾಂಸ್ಕೃತಿಕ ಮತ್ತು ಭಾಷಿಕವಾಗಿ ಸ್ವಚ್ಛಂದವಾಗಿ ಬದುಕು ಸಾಗಿಸುವ ಬುಡಕಟ್ಟು ಸಮುದಾಯಗಳು ದೇಶದ ಅಭಿವೃದಿಯ ಪ್ರಕ್ರಿಯೆಗೆ ಒಳಗೊಳ್ಳದೆ ಅವರನ್ನು ತಮ್ಮ ಪಾಡಿಗೆ ಬಿಟ್ಟು ಬಿಡುವ ಪ್ರವೃತ್ತಿಯಲ್ಲಿ ಸಮುದಾಯವು ತನ್ನ ಅನನ್ಯತೆ ಯನ್ನು ಮತ್ತು ಅಸ್ಮಿತೆಯನ್ನು  ಕಳೆದು ಕೊಳ್ಳುತ್ತಿದೆ. ಕರ್ನಾಟಕದಲ್ಲಿ ಸುಮಾರು 50ಕ್ಕೂ ಹೆಚ್ಚು ಬುಡಕಟ್ಟುಗಳಿದ್ದು ಅದರಲ್ಲಿಯೂ PVTGs ಸಮುದಾಯಗಳು ಇನ್ನಷ್ಟು ಸಂಕಷ್ಟಕ್ಕೆ ಒಳಾಗಿರುವುದನ್ನು ದಿನ ನಿತ್ಯವೂ ಪತ್ರಿಕೆ, ಮಾಧ್ಯಮಗಳಲ್ಲಿ ಕಾಣುತ್ತೇವೆ. ಆದರೆ ಅದಕ್ಕೆ ಯಾವುದೇ ರಚನಾತ್ಮಕ ವಾದ ಪರಿಹಾರವನ್ನು ಕೈಗೊಂಡಿರುವ ಉದಾಹರಣೆಗಳು ಕಡಿಮೆ.

ಅರಲಂ ಬುಡಕಟ್ಟು ಪುನರ್ವಸತಿ ಯೋಜನೆಯು ಕೇರಳ  ಸರಕಾರ ಬುಡಕಟ್ಟು ಗಳಿಗಾಗಿ ಮಾಡಿರುವ ಒಂದು ರಚನಾತ್ಮಕ ಅಭಿವೃದ್ಧಿ ಕಾರ್ಯಕ್ರಮ. ಆ ಯೋಜನೆಯನ್ನು ಅನುಷ್ಠಾನ ಮಾಡುವ ಅಧಿಕಾರಿಗಳು ಮತ್ತು ಪುನರ್ವಸತಿಯ ಬುಡಕಟ್ಟು ನಿವಾಸಿ ಗಳ ಅಭಿಪ್ರಾಯ ದಂತೆ ಈ ಯೋಜನೆಯು 2014ರಲ್ಲಿ ಅನುಷ್ಠಾನ ಗೊಂಡು ಏಶ್ಯದಲ್ಲಿಯೇ ಅತ್ಯಂತ ದೊಡ್ಡ ಪುನರ್ವಸತಿ ಯೋಜನೆಯಾಗಿದೆ. 2014 ರಿಂದ 2018 ರ ವರೆಗೆ ಸುಮಾರು 9 ಬುಡಕಟ್ಟು ಗುರುತಿಸಲಾಯಿತು. ಈ ಯೋಜನೆಯ ಮುಖ್ಯ ಉದ್ದೇಶವು ಕಣ್ಣೂರು ಜಿಲ್ಲೆಯ ಉದ್ಯೋಗ ರಹಿತ, ಜಾಗ ರಹಿತ ಮತ್ತು ಅರಣ್ಯ ಮೂಲ ಬುಡಕಟ್ಟುಗಳನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಗೊಳಿಸುವುದು. ಅದಕ್ಕಾಗಿ ಸುಮಾರು 7,000 ಎಕರೆ ಭೂಮಿಯನ್ನು ಕೇಂದ್ರ ಸರಕಾರದಿಂದ ಖರೀದಿಸಿ ಆ ಭೂಮಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಿಕೊಂಡು ಅಂದರೆ ಸುಮಾರು 3,500ಎಕರೆ ಭೂಮಿಯಲ್ಲಿ 1,500ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳಿಗೆ ತಲಾ ಒಂದೊಂದು ಎಕರೆ ಹಂಚಿ ವಸತಿ, ಭೂಮಿ, ನೀರು, ಇತರ ಮೂಲಭೂತ ಸೌಕರ್ಯ ಗಳನ್ನು ಒದಗಿಸಿದೆ. ಜೊತೆಗೆ ಸಮುದಾಯವಾಗಿ ಬದುಕಲು ಶಾಲೆ ಕಾಲೇಜು, ಅರೋಗ್ಯ ಕೇಂದ್ರ, ಸಮುದಾಯ ಭವನ ನಿರ್ಮಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಗೆ ಪೂರಕವಾದ ವಾತಾರಣ ಕಲ್ಪಿಸಿದೆ.

ಇನ್ನು ಉಳಿದ ಸುಮಾರು 3,500 ಎಕರೆ ಜಮೀನನ್ನು ಆರ್ಥಿಕ ಚಟುವಟಿಕೆಗೆ ಮೀಸಲಿಟ್ಟು ಅದರಲ್ಲಿ ಆ ಒಂಬತ್ತು ಬುಡಕಟ್ಟು ಸಮುದಾಯಗಳಿಗೆ ಔದ್ಯೋಗಿಕ ಭದ್ರತೆಯನ್ನು ಒದಗಿಸುವ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ. ದೊಡ್ಡ ಮಟ್ಟದ ಗೇರು, ರಬ್ಬರ್ ಮತ್ತು ತೆಂಗು ವಾಣಿಜ್ಯ ಉತ್ಪಾದನೆ ಕೈಗೊಂಡಿದೆ. ತೋಟಗಾರಿಕೆ ಗೆ ಸಂಬಂಧಿಸಿದ ಸಸ್ಯ ಗಳ ನರ್ಸರಿ ಯನ್ನು ಬುಡಕಟ್ಟು ಜನರಿಂದಲೇ ನಿರ್ವಹಿಸುತ್ತಿದೆ. ಮತ್ತು ಆ ಪುನರ್ವಸತಿ ಕೇಂದ್ರದ ಪ್ರತಿ ಮನೆಯ ಇಬ್ಬರಿಗೆ ಉದ್ಯೋಗ ನೀಡಿದೆ. ಇತ್ತ ಕೃಷಿಯಿಂದ  ಉತ್ಪತ್ತಿಯಾದ ಉತ್ಪನ್ನಗಳಿಗೆ ತಕ್ಕ ಮಾರುಕಟ್ಟೆ ವ್ಯವಸ್ಥೆ ಯನ್ನು ಮಾಡಿಕೊಂಡಿದ್ದಾರೆ. ಜೊತೆಗೆ ಬೇರೆ ಮಾದರಿಯ ಕೃಷಿ ಘಟಕಗಳನ್ನು ಇಟ್ಟುಕೊಂಡು ತಮ್ಮ ಕೃಷಿ ಕಾರ್ಯಗಳಿಗೆ ಸುಸ್ಥಿರ ವಾದ ಯೋಜನೆಗಳು ಬಡಕಟ್ಟು ಜನರಿಂದಲೇ ಸ್ವತ: ಕಾರ್ಯಗತ ಗೊಂಡಿರುವುದು ಮಾದರಿಯಾಗಿದೆ.

ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಎಕರೆಗಟ್ಟಲೆ ಭೂಮಿ ಮತ್ತು ಹಣಕಾಸಿನ ನೆರವು ನೀಡುವ  ಕರ್ನಾಟಕ ಸರಕಾರ ಕೂಡ ಬುಡಕಟ್ಟು ಪರವಾದ ಈ ತರಹದ ಅಭಿವೃದ್ಧಿ ಕಾರ್ಯವನ್ನು ಕೈಗೊಂಡು  ಅರಣ್ಯ ಮೂಲ ಬುಡಕಟ್ಟು ವಸತಿ ರಹಿತ, ಭೂ ರಹಿತ ಬುಡಕಟ್ಟು ಸಮುದಾಯ ಗಳಿಗೆ ದೊಡ್ಡ ಮಟ್ಟದ ಪುನರ್ವಸತಿ ಕಲ್ಪಿಸಿ ಮಾದರಿ ರಾಜ್ಯವಾಗಲಿ.

ಡಾ ಸಬಿತಾ ಕೊರಗ

ಸಹಾಯಕ ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ, ಮಂಗಳೂರು ವಿವಿ

More articles

Latest article