ಹೆಣ್ಣಿನ ಮೇಲೆ ಕ್ರೌರ್ಯ: ಬಿಜೆಪಿ ರಾಜ್ಯಗಳೇ ಮೇಲುಗೈ!

Most read

ಎನ್‍ಸಿಆರ್ ಬಿ ಬಿಡುಗಡೆ ಮಾಡಿರುವ 2023 ರ ವರದಿಯಲ್ಲಿ ದೇಶದಲ್ಲಿ  ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಹೆಣ್ಣುಮಕ್ಕಳ ಮೇಲಿನ ಹಲ್ಲೆ, ಹತ್ಯೆ, ಅತ್ಯಾಚಾರ ಪ್ರಕರಣ 2023 ರಲ್ಲಿ ಶೇ. 4 ರಷ್ಟು  ಹೆಚ್ಚಳ ಗೊಂಡಿದೆ. ಬಿಜೆಪಿ ಆಡಳಿತದ ಉತ್ತರ ಪ್ರದೇಶ ಹೆಣ್ಮಕ್ಕಳ  ಹತ್ಯೆ, ಅತ್ಯಾಚಾರ, ದೌರ್ಜನ್ಯಗಳಲ್ಲಿ ಇಡೀ ದೇಶದಲ್ಲೆ ಮೊದಲ ಸ್ಥಾನ ಗಳಿಸಿದೆ – ಎನ್.ರವಿಕುಮಾರ್ ಟೆಲೆಕ್ಸ್‌, ಪತ್ರಕರ್ತರು.

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಹಿನ್ನಡೆ ಅನುಭವಿಸುವ ಸೂಚನೆಗಳಿಂದ ಕಂಗಾಲಾಗಿರುವ  ಬಿಜೆಪಿ ಇದೀಗ ನೇಹಾ ಹಿರೇಮಠ ಅವರ ಹತ್ಯೆ  ಪ್ರಕರಣವನ್ನು ಮುಂದಿಟ್ಟುಕೊಂಡು ಹಿಂದೂ ಮತಕ್ರೋಢೀಕರಣ ರಾಜಕಾರಣವನ್ನು ಬಿರುಸು ಗೊಳಿಸಿದೆ.

ರಾಜ್ಯದ ಆಡಳಿತಾರೂಢ  ಕಾಂಗ್ರೇಸ್ ನ  ಈಗಾಗಲೆ ಅನುಷ್ಠಾನದಲ್ಲಿರುವ ಗ್ಯಾರಂಟಿ ಯೋಜನೆಗಳು ಮತ್ತು ಇದೀಗ  ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನೀಡಿರುವ “ಪಂಚ  ನ್ಯಾಯ, 25 ಗ್ಯಾರಂಟಿಗಳ”  ವಾಗ್ದಾನದ ಅಲೆಯಲ್ಲಿ  ಕೊಚ್ಚಿಹೋಗುತ್ತಿರುವ ಬಿಜೆಪಿಗೆ ನೇಹಾ ಹಿರೇಮಠಳ ಹತ್ಯೆ ಪ್ರಕರಣ ಆಸರೆಗೆ ಸಿಕ್ಕ ಹುಲ್ಲುಕಡ್ಡಿಯಂತಾಗಿದೆ.

ನೇಹಾ ಹಿರೇಮಠ ಮತ್ತು ರುಕ್ಸಾನಾ

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಮುಂದೆ ಬಿಜೆಪಿಯ ಹಿಂದೂತ್ವ ಮತ್ತು ರಾಮಮಂದಿರಗಳು ನಿಷ್ಪ್ರಯೋಜಕ ವಾಗಿದ್ದು, ಹಿಂದೂತ್ವ, ರಾಮಮಂದಿರ ಸಂಗತಿಗಳೇ ಜನರಿಗೆ ಅಲರ್ಜಿಯಾದಂತೆ ಜನರೇ ಅವುಗಳ ಕಡೆಗೆ ಕಿರುಗಣ್ಣು ಹಾಯಿಸದಷ್ಟು ಗ್ಯಾರಂಟಿಗಳ ಬಲದಲ್ಲಿ ಬದುಕನ್ನು ಕಟ್ಟಿಕೊಳ್ಳುವತ್ತ ಮಗ್ನರಾಗಿದ್ದಾರೆ.

ಬಿಜೆಪಿಯ ಬತ್ತಳಿಕೆಯಲ್ಲಿ ಮತದಾರರನ್ನು ಸೆಳೆಯುವ ಅಸ್ತ್ರ, ಆಮಿಷಗಳು ಈಗಾಗಲೆ ಖಾಲಿಯಾಗಿವೆ. ಅದರ ಪ್ರಣಾಳಿಕೆಗಳು ಬಡವರ ಬದುಕನ್ನು ಕಟ್ಟುವಲ್ಲಿ ಕನಿಷ್ಠ ಭರವಸೆಯನ್ನು ಮೂಡಿಸುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಬಿಜೆಪಿ ರಾಜಕೀಯವಾಗಿ ಎಷ್ಟೊಂದು ದಿವಾಳಿಯಾಗಿದೆಯೆಂದರೆ ಕಳೆದ 10 ವರ್ಷ ಈ ದೇಶವನ್ನು ಆಳಿದ ಬಿಜೆಪಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಜನರಿಗೆ ಮಾಡಿದ ಒಂದೇ ಒಂದು ಸಾಧನೆಯನ್ನು ಸಾರಿಕೊಳ್ಳಲಾಗದೆ ಕೇವಲ ಧರ್ಮಾಧಾರಿತ, ಭಾವನಾತ್ಮಕ ಸಂಗತಿಗಳನ್ನು ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹೀರಾತು ಕೊಟ್ಟು ಮತಸೆಳೆಯಲು ಮುಂದಾಗಿ ಬೆತ್ತಲಾಗಿದೆ. 

ಇಂತಹ ಹೊತ್ತಿನಲ್ಲಿ ನಡೆದಿರುವ ನೇಹಾಳ ಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಹೆಣದ ಮೇಲೆ  ಮತರಾಜಕಾರಣಕ್ಕೆ ತಹತಹಿಸುತ್ತಿದೆ. ನೇಹಾಳ ಹತ್ಯೆ ವೈಯುಕ್ತಿಕ ಸಂಬಂಧದ ಕಾರಣದಿಂದ ಸಂಭವಿಸಿದೆ ಎಂದು ಸ್ಪಷ್ಟವಾಗಿದೆ. ಕೊಲೆಗಾರ ಮುಸ್ಲಿಂ ಆಗಿದ್ದ ಎನ್ನುವುದನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡು ಈ ಚುನಾವಣೆಯ ದಿಕ್ಕನ್ನೆ ತನ್ನತ್ತ ತಿರುಗಿಸಿಕೊಳ್ಳಲು ಹೊರಟಿರುವ ಬಿಜೆಪಿ ಕೋಮು ರಾಜಕಾರಣವನ್ನು  ಬಡಿದೆಬ್ಬಿಸುವ ತನ್ನ ಹಳೆಯ ಚಾಳಿಯ ಪ್ರಯೋಗ ನಡೆಸಿದೆ.

ಪ್ರವೀಣ್‌ ಚೌಗಲೆ ಮತ್ತು ಹಸೀನಾ ಕುಟುಂಬ

ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ವ್ಯಕ್ತಿಗತ  ಪ್ರಕರಣಗಳಿಗೂ ಮತೀಯ ಬಣ್ಣ ಕೊಟ್ಟು ಬೇಳೆ ಬೇಯಿಸಿಕೊಳ್ಳಲು  ಪರದಾಡಿದ  ಬಿಜೆಪಿ ಮತ್ತದರ ಪರಿವಾರಗಳು ಹಿಂದೂ ಸಮುದಾಯಗಳಲ್ಲೆ ನಡೆಯುತ್ತಿರುವ ಜಾತಿ ಆಧಾರಿತ ಕ್ರೌರ್ಯೌದ ಬಗ್ಗೆ ಸೊಲ್ಲೆತ್ತುವುದೇ ಇಲ್ಲ ಎಂಬುದಕ್ಕೆ  ಡಜನ್ ಗಟ್ಟಲೆ ಸಾಕ್ಷಿಗಳಿವೆ.

ಚಾಮರಾಜನಗರ ತಾಲ್ಲೂಕಿನ ಹೆಗ್ಗೋರಾಠ ಗ್ರಾಮದಲ್ಲಿ  ದಲಿತ ಮಹಿಳೆ ಗ್ರಾಮದ ನೀರಿನ ತೊಟ್ಟಿಯಲ್ಲಿ ನೀರು ಕುಡಿದಳೆಂಬ ಕಾರಣಕ್ಕೆ ತೊಟ್ಟಿಯನ್ನು  ಗೋಮೂತ್ರದಿಂದ ಶುದ್ಧೀಕರಿಸಲಾಯಿತು.

ರಾಮನಗರದ ಹೇಮಾಪುರದಲ್ಲಿ ದಲಿತ ಶಿಕ್ಷಕರೊಬ್ಬರು  ಗ್ರಾಮದೇವತೆಯ ಉತ್ಸವದಲ್ಲಿ ದೇವರ ಆರತಿ ತಟ್ಟೆ ಮುಟ್ಟಿದರೆಂದು ಹಲ್ಲೆ ನಡೆಸಲಾಯಿತು.

ಕೋಲಾರದಲ್ಲಿ ದೇವರ ಗೊಜ್ಜುಗೋಲು ಮುಟ್ಟಿದ ದಲಿತ ಬಾಲಕನನ್ನು ಮನಬಂದಂತೆ ಥಳಿಸಲಾಯಿತು.

ಕೋಲಾರದಲ್ಲಿ ದಲಿತರು-ಮೇಲ್ಜಾತಿಗಳ ನಡುವೆ ಹೊಡೆದಾಟವೇ  ನಡೆದು ಹೋಯಿತು.

ಜಾತಿ ಕಾರಣಕ್ಕಾಗಿ ಪೋಷಕರೆ ಮಕ್ಕಳನ್ನು  ನಿರ್ದಯವಾಗಿ ಮರ್ಯಾದಾಹತ್ಯೆ ಮಾಡಿದ ಪ್ರಕರಣಗಳು  ಗದಗ, ರಾಮನಗರ ಜಿಲ್ಲೆಗಳಲ್ಲಿ ನಡೆದವು.

ಅಷ್ಟೇ ಏಕೆ? ಧರ್ಮಸ್ಥಳದಲ್ಲಿ  ಸೌಜನ್ಯ ಎಂಬ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಈಗಲೂ ನ್ಯಾಯಕ್ಕಾಗಿ  ಹೋರಾಟ ನಡೆಯುತ್ತಿದೆ. ಈ ಎಲ್ಲಾ ಪ್ರಕರಣಗಳು ಹಿಂದೂ ಸಮುದಾಯದೊಳಗೆ ನಡೆದಂತ ಜಾತಿ ದ್ವೇಷದ ಕ್ರೌರ್ಯಗಳು.

ಇವುಗಳ ಬಗ್ಗೆ ತುಟಿಬಿಚ್ಚದ ಬಿಜೆಪಿ, ಮುಸ್ಲಿಂ ವ್ಯಕ್ತಿಗಳು ಆರೋಪಿಗಳಾದ ವ್ಯಕ್ತಿಗತ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸಮಾಜದ ಸೌಹಾರ್ದ ಸ್ವಾಸ್ಥ್ಯವನ್ನ ಹಾಳುಗೆಡಹುವ, ಅಧಿಕಾರ ಸಾಧಿಸಿಕೊಳ್ಳುವ  ತನ್ನ ದೇಶಾವರಿತನವನ್ನು ಪ್ರದರ್ಶಿಸುತ್ತಲೆ ಬಂದಿದೆ.

ತಥಾಗತ ಬುದ್ಧ ಪ್ರತಿಪಾದಿಸಿದ ‘ಹಸಿದ ಹೊಟ್ಟೆಗೆ ಧರ್ಮ ಅರ್ಥವಾಗಲಾರದು’ ಎಂಬ ಲೋಕಜ್ಞಾನವೇ ಮೈದಳೆದಂತೆ ರಾಜ್ಯದ ಬಹುಸಂಖ್ಯಾತ  ಬಡವರು, ದುರ್ಬಲರು ಗ್ಯಾರಂಟಿಗಳೆಂಬ“ಅನ್ನಧರ್ಮ”ವೇ ಶಾಶ್ವತ ಮತ್ತು ಸತ್ಯ ಎಂಬ ಅರಿವಿನ ಕಡೆಗೆ ಮುಖಮಾಡಿರುವುದು  ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಎದೆ ತಟ್ಟಿಕೊಳ್ಳುತ್ತಿರುವ ಬಿಜೆಪಿಯನ್ನು ಕಂಗಾಲಾಗಿಸಿದೆ. ಇದುವರೆಗೂ ಆಗಿರುವ ಸಮೀಕ್ಷೆಗಳನ್ನೆ ನೋಡಿದಾಗ ಬಿಜೆಪಿ ರಾಜ್ಯದಲ್ಲಿ 9 ರಿಂದ 13 ಕ್ಷೇತ್ರಗಳಲ್ಲಿ ಗೆದ್ದರೆ ಅದು ದೊಡ್ಡ ಸಾಧನೆಯೇ. ಆದರೆ  ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ ನ ಕೈ ಹಿಡಿಯುತ್ತಿದ್ದು,  ಹಿಂದೂ ಮತಗಳ ಕ್ರೋಢೀಕರಣಕ್ಕೆ ಮುಂದಾಗಿರುವ ಬಿಜೆಪಿಗೆ ನೇಹಾ ಪ್ರಕರಣ ಹುಲ್ಲು ಕಡ್ಡಿಯಷ್ಟೆ ಆಗಿದೆ. ಅದು ಬಿಜೆಪಿಯನ್ನು ದಡ ಸೇರಿಸುವುದಿಲ್ಲ.  

ಬಿಜೆಪಿ ಆಡಳಿತ ರಾಜ್ಯಗಳಲ್ಲೆ ಹೆಣ್ಣಿಗೆ ರಕ್ಷಣೆ ಇಲ್ಲ!

‘ಬೇಟಿ ಪಡಾವೋ, ಬೇಟಿ ಬಚಾವೋ’ ಎಂದು ಘೋಷಣೆ ಮೊಳಗಿಸುತ್ತಿರುವ ಬಿಜೆಪಿ ತನ್ನ  ಆಡಳಿತ ರಾಜ್ಯಗಳಲ್ಲೆ ಹೆಣ್ಮಕ್ಕಳ ಮೇಲೆ   ಎಗ್ಗಿಲ್ಲದೆ ಅಪರಾಧಗಳು ನಡೆಯುತ್ತಿರುವುದಕ್ಕೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಇದಕ್ಕೆ ನ್ಯಾಷನಲ್ ಕ್ರೈಂ ರೆಕಾರ್ಡ್ಸ್‌ ಬ್ಯೂರೂ (NCRB)  ದ 2023 ನೇ ಸಾಲಿನ ವರದಿಯೇ ಸಾಕ್ಷಿ.

2023 ರಲ್ಲಿ ಉತ್ತರ ಪ್ರದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದ ಅಪರಾಧ ಪ್ರಕರಣಗಳ ಸಂಖ್ಯೆ 65,743 ಆಗಿದ್ದರೆ. ಮಹಾರಾಷ್ಟ್ರದಲ್ಲಿ 45,331, ರಾಜಾಸ್ತಾನದಲ್ಲಿ 45,058, ಮಧ್ಯಪ್ರದೇಶದಲ್ಲಿ 32,765 ರಷ್ಟು ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ ದೇಶದಲ್ಲಿ ಹೆಣ್ಣುಮಕ್ಕಳ ಮೇಲಿನ ಎಲ್ಲಾ ಬಗೆಯ  ಅಪರಾಧ ಕೃತ್ಯಗಳು ಶೇ. 50.2 ರಷ್ಟು ಆಗಿರುವುದು ದೇಶದ ಆಡಳಿತದ ವೈಫಲ್ಯವಾಗಿದೆ.

ಇದನ್ನೂ ಓದಿ-ಸೋಲಿನ ಭೀತಿಯಿಂದ ಹತಾಶರಾಗಿದ್ದಾರಾ ಮೋದಿ?

ಕರ್ನಾಟಕದ ಹುಬ್ಬಳ್ಳಿಯ ನೇಹಾಳ ಹತ್ಯೆ ಪ್ರಕರಣ ನಡೆದ ದಿನವೇ ಗದಗದಲ್ಲಿ ಒಂದೇ ಕುಟುಂಬದ ನಾಲ್ವರ ಘೋರ ಹತ್ಯೆ ಆಗಿದೆ. ಹತ್ಯೆಯಾದವರೆಲ್ಲರೂ ಹಿಂದೂಗಳೇ ಆಗಿದ್ದಾರೆ. ಕೊಲೆಗಡುಕರು ಹಿಂದೂಗಳೇ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ನಾಲ್ವರು ಹತ್ಯೆಗಳ ಬಗ್ಗೆ ತುಟಿ ಬಿಚ್ಚದ ಬಿಜೆಪಿ ಕೇವಲ ನೇಹಾ ಪ್ರಕರಣವನ್ನು ಮಾತ್ರ ಮುಂದಿಟ್ಟುಕೊಂಡು ಕೋಮು ರಾಜಕಾರಣಕ್ಕಿಳಿದಿದೆ. ಇದು ಬಿಜೆಪಿಯ ರಾಜಕೀಯ ದಿವಾಳಿತನದ  ಪ್ರದರ್ಶನ.

ಎನ್.ರವಿಕುಮಾರ್ ಟೆಲೆಕ್ಸ್

ಪತ್ರಕರ್ತರು

More articles

Latest article