ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಸೇರಿದಂತೆ ಏಳು ಸಚಿವರ ಪೈಕಿ ಐವರು ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಇವರೇ ತಮ್ಮ ಚುನಾವಣಾ ಅಫಿಡೆವಿಟ್ ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮಾಹಿತಿ ನೀಡಿದೆ. ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಗೆ ಮುನ್ನ ಸಚಿವರು ಸಲ್ಲಿಸಿದ ಪ್ರಮಾಣ ಪತ್ರಗಳನ್ನು ಅಧ್ಯಯನ ನಡೆಸಿದ ನಂತರ ಎಡಿಆರ್ ವರದಿ ಮಾಡಿದೆ.
ಇಂದು ಪ್ರಮಾಣವಚನ ಸ್ವೀಕರಿಸಿರುವ ಏಳು ಸಚಿವರ ಪೈಕಿ ಐವರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಸಚಿವ ಆಶಿಶ್ ಸೂದ್ ಗಂಭೀರ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಹಣಕಾಸು ವಿಷಯದಲ್ಲಿ ಇಬ್ಬರು ಸಚಿವರು ಕೋಟ್ಯಧಿಪತಿಗಳಾಗಿದ್ದಾರೆ. ರಾಜೌರಿ ಗಾರ್ಡನ್ ಕ್ಷೇತ್ರದ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅತಿ ಹೆಚ್ಚು (ರೂ.248.85 ಕೋಟಿ) ಆಸ್ತಿ ಘೋಷಣೆ ಮಾಡಿದ್ದಾರೆ. ಕರವಾಲ್ ನಗರ ಕ್ಷೇತ್ರದ ಕಪಿಲ್ ಮಿಶ್ರಾ ಅವರು ಅತಿ ಕಡಿಮೆ (ರೂ.1.06 ಕೋಟಿ) ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಏಳು ಸಚಿವರ ಸರಾಸರಿ ಆಸ್ತಿ ರೂ.56.03 ಕೋಟಿ ಎಂದು ವಿಶ್ಲೇಷಿಸಲಾಗಿದೆ. ನವದೆಹಲಿ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಗೆಲುವು ಸಾಧಿಸಿರುವ ಪರ್ವೇಶ್ ವರ್ಮಾ ಅವರು ರೂ. 74.36 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಆರು ಸಚಿವರು ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ. ಆದರೆ ಒಬ್ಬ ಸಚಿವರು ಕೇವಲ 12 ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ. ಐದು ಸಚಿವರು 41ರಿಂದ 50 ವರ್ಷ ವಯಸ್ಸಿನವರಾಗಿದ್ದರೆ, ಉಳಿದ ಇಬ್ಬರು 51ರಿಂದ 60 ವರ್ಷ ವಯಸ್ಸಿನವರಾಗಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು (ಗುರುವಾರ) ನಡೆದ ಸಮಾರಂಭದಲ್ಲಿ ಶಾಲಿಮಾರ್ ಬಾಗ್ ಕ್ಷೇತ್ರದ ಶಾಸಕಿ ರೇಖಾ ಗುಪ್ತಾ ಅವರು ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಆರು ಸಚಿವರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರೇಖಾ ಗುಪ್ತಾ ಅವರು 32 ವರ್ಷಗಳ ದೆಹಲಿ ವಿಧಾನಸಭಾ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗಿರುವ ನಾಲ್ಕನೇ ಮಹಿಳೆಯಾಗಿದ್ದಾರೆ. ಬಿಜೆಪಿಯ ಸುಷ್ಮಾ ಸ್ವರಾಜ್, ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಹಾಗೂ ಎಎಪಿಯ ಆತಿಶಿ ಅವರು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದರು.