ಪುಣೆ: ಸಾವು ಯಾವಾಗ ಹೇಗೆ ಸಂಭವಿಸುತ್ತದೆ ಎಂದು ಹೇಳಲು ಬರುವುದಿಲ್ಲ. ಜೀವನಶೈಲಿ ಬದಲಾಗುತ್ತಿರುವ ಆಧುನಿಕ ಯುಗದಲ್ಲಿ ಬಾಲಕರು ಮತ್ತು ಯುವಕರೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.
ಕ್ರಿಕೆಟ್ ಆಡುತ್ತಿದ್ದ ಯುವಕೊನೊಬ್ಬ ಆಟದ ಮೈದಾನದಲ್ಲೇ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿದೆ. ನಿನ್ನೆ ಗುರುವಾರ ಪುಣೆಯ ಗರ್ವಾರೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುತ್ತಿದ್ದ 35 ವರ್ಷದ ಇಮ್ರಾನ್ ಪಟೇಲ್ ಹೃದಯಾಘಾತದಿಂದ ಮೈದಾನದಲ್ಲೇ ಅಸುನೀಗಿದ್ದಾರೆ.
ಆರಂಭಿಕ ಆಟಗಾರನಾಗಿ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದ ಪಟೇಲ್ ಪಿಚ್‌ನಲ್ಲಿ ಇರುವಾಗಲೇ ಎದೆನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಅಂಪೈರ್‌ಗಳಿಗೆ ಈ ವಿಷಯ ತಿಳಿಸಿ ಮೈದಾನದಿಂದ ಹೊರಹೋಗಲು ಅನುಮತಿ ಪಡೆದು ಪೆವಿಲಿಯನ್ ಗೆ ಹಿಂತಿರುಗುವಾಗ ಇಮ್ರಾನ್ ದಿಢೀರನೆ ಕುಸಿದು ಬಿದ್ದಿದ್ದಾರೆ. ಪಂದ್ಯವು ಯೂಟ್ಯೂಬ್ ಮೂಲಕ ನೇರಪ್ರಸಾರವಾಗುತ್ತಿತ್ತು.ಹೀಗಾಗಿ ಇವರು ಕುಸಿದು ಬೀಳುತ್ತಿದ್ದಂತೆ ಸಹ ಆಟಗಾರರು ಪಟೇಲ್ ರಕ್ಷಣೆಗೆ ಧಾವಿಸಿದ್ದಾರೆ. ಕೂಡಲೇ ಪಟೇಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಇಮ್ರಾನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇಮ್ರಾನ್ ಅವರಿಗೆ ವಿವಾಹವಾಗಿದ್ದು, ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಕಿರಿಯ ಪುತ್ರಿಗೆ ಕೇವಲ ನಾಲ್ಕು ತಿಂಗಳು. ಪುಣೆಯಲ್ಲಿ ಪಟೇಲ್ ಜನಪ್ರಿಯ ವ್ಯಕ್ತಿಯಾಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಜತೆಗೆ ಕ್ರಿಕೆಟ್ ತಂಡದ ಮಾಲೀಕರೂ ಆಗಿದ್ದರು.
ಆಲ್ ರೌಂಡರ್ ಆಗಿದ್ದ ಇಮ್ರಾನ್ ಪಟೇಲ್ ದೈಹಿಕವಾಗಿ ಸದೃಢರಾಗಿದ್ದರು. ಅವರಿಗೆ ಯಾವುದೇ ವೈದ್ಯಕೀಯ ಸಮಸ್ಯೆ ಇರಲಿಲ್ಲ. ಅವರ ಅಕಾಲಿಕ ಸಾವು ನೋವು ತಂದಿದೆ ಎಂದು ಸಹ ಆಟಗಾರರು ಹೇಳಿದ್ದಾರೆ.