ಕ್ರಿಕೆಟ್ ಕೇವಲ ಗಂಡಿಗಷ್ಟೇ ಅಲ್ಲ..

Most read

ಕ್ರಿಕೆಟ್ ಕೇವಲ ಗಂಡಿಗಷ್ಟೇ ಅಲ್ಲ. ಅದು ಹೆಣ್ಣಿಗೂ ಕೂಡ ಸಾಧ್ಯ. ಇತಿಹಾಸ ಸೃಷ್ಟಿಸುವಲ್ಲಿ ಹೆಣ್ಣು ಕೂಡ ಪರಿಣಿತಳು ಎಂಬುದು ಅರ್ಥವಾಗಬೇಕಿದೆ. ಗೊಂಬೆಗಳನ್ನು, ಅಡುಗೆ ಆಟಿಕೆಗಳನ್ನು ತಂದುಕೊಡುವ ಜಾಗವನ್ನು ಕ್ರಿಕೆಟ್ ವಾಲಿಬಾಲ್ ಹಾಕಿ ಮುಂತಾದ ಆಟಗಳ ಆಟಿಕೆಗಳು ತುಂಬಬೇಕಾಗಿದೆ – ಶೃಂಗ, ಉಪನ್ಯಾಸಕಿ


ಬಯಲಾಜಿಕಲೀ ಹೆಣ್ಣು ಮತ್ತು ಗಂಡಿನ ಹುಟ್ಟು ಸಹಜವಾಗಿದ್ದರೂ ಕೂಡ ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಹೆಣ್ಣು ಮತ್ತು ಗಂಡಿನ ಹುಟ್ಟನ್ನ ಇಡೀ ಅಸ್ತಿತ್ವವನ್ನ ಅಜಗಜಾಂತರ ವ್ಯತ್ಯಾಸವಿದೆಯೆಂಬಂತೆ ಸಮಾಜ ವ್ಯವಸ್ಥಿತವಾಗಿ ನಿರ್ಮಿಸಿಬಿಟ್ಟಿದೆ. ಅದಕ್ಕನುಗುಣವಾದಂತೆ ಗಂಡೆಂದರೆ ಅತಿಮಾನುಷ ಶಕ್ತಿ ಎಂಬಂತೆ ಬಿಂಬಿಸಿ ಗಂಡೆಂದರೆ ಸ್ಟ್ರಾಂಗ್, ಫಿಸಿಕಲಿ ಫಿಟ್ ಅದೇ ಹೆಣ್ಣೆಂದರೆ  ಫಿಸಿಕಲೀ ಮತ್ತು ಎಮೋಷನಲೀ ವೀಕ್‌, ಸಾಫ್ಟ್, ನಾಜೂಕಿನ, ಸೂಕ್ಷ್ಮ ದೇಹದ ದುರ್ಬಲ ಎಂಬಂತೆ ಹೆಣ್ಣನ್ನ ಗುರುತಿಸಲಾಗಿದೆ.

ಈ ಆಧಾರದ ಮೇಲೆ ಹೆಣ್ಣು ಮಾಡಬೇಕಾದ ಕೆಲಸಗಳನ್ನು, ಕಾರ್ಯಗಳನ್ನು ಸೂಚಿಸಲಾಗುತ್ತದೆ. ಬಾಲ್ಯದಿಂದಲೂ ಕೂಡ ಹೆಣ್ಣಿಗೆ ಗೊಂಬೆಯನ್ನೇ, ಅಡಿಗೆ ಮಾಡುವ ಆಟಿಕೆಗಳನ್ನೇ ತಂದುಕೊಡುವುದರ ಹಿಂದಿನ ಉದ್ದೇಶ ಅವಳನ್ನ ಅಡುಗೆ ಮನೆಗೆ ಸೀಮಿತ ಮಾಡುವುದೇ ಆಗಿದೆ. ಹೆಚ್ಚಿನ ಪೋಷಕರು ಕ್ರಿಕೆಟ್, ವಾಲಿಬಾಲ್, ಫೂಟ್ ಬಾಲ್, ಹಾಕಿ ಹಾಗೂ ಇನ್ನಿತರ ಆಟಗಳ ವಸ್ತುಗಳನ್ನು ತಂದು ಕೊಡುವುದೇ ಇಲ್ಲ.

ಇದರರ್ಥ ಹೆಣ್ಣಿಗೆ ಈ ಯಾವ ಆಟಗಳನ್ನೂ ಆಡುವುದಕ್ಕೆ ಸಾಧ್ಯವಿಲ್ಲ ಎಂಬಂತೆ ಬಿಂಬಿಸಿರುವುದು ರಾಜಕೀಯ ಹುನ್ನಾರವಲ್ಲದೆ ಮತ್ತೇನಲ್ಲ. ಇದನ್ನೇ ನಂಬಿದ ಎಷ್ಟೋ ಹೆಣ್ಣು ಮಕ್ಕಳು ತಮ್ಮಷ್ಟಕ್ಕೆ ತಾವೇ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಕೊಂದುಕೊಂಡದ್ದೂ ಇದೆ. ಅದರಲ್ಲೊಂದಷ್ಟು ಜನ ವ್ಯವಸ್ಥೆಯನ್ನು ವಿರೋಧಿಸಿಕೊಂಡೇ ವಿಜಯ ಸಾಧಿಸಿದ ಉದಾಹರಣೆಗಳೂ ಇವೆ.

ಅಂತೆಯೇ ನಮ್ಮ ಹೆಮ್ಮೆಯ RCB ತಂಡದ ವನಿತೆಯರು ಕಪ್ ಗೆದ್ದಿದ್ದಾರೆ. ಈ ಸಂಭ್ರಮವನ್ನು ಹೆಚ್ಚು ಸಂಭ್ರಮಿಸ್ತಿರೋದು ಗಂಡ್ಮಕ್ಳೆ. ಕಪ್ ಗೆದ್ದಾಗ ಸಂಭ್ರಮಿಸೋ ಎಷ್ಟೋ ಜನ ಅದೇ ಹೆಣ್ಣು ಕ್ರಿಕೆಟ್ ಆಡುವಾಗ ಅವರನ್ನು ಹೀಯಾಳಿಸಿ ಅಪಹಾಸ್ಯಕ್ಕೆ ಗುರಿ ಮಾಡುತ್ತಾರೆಯೇ ವಿನಃ ಸಪೋರ್ಟ್ ಮಾಡಿ ಹುರಿದುಂಬಿಸುವುದಿಲ್ಲ.

ಮಹಿಳೆಯರ ನಡುವಿನ ಮೊದಲ ದಾಖಲಿತ ಕ್ರಿಕೆಟ್ ಪಂದ್ಯವನ್ನು 26 ಜುಲೈ 1745 ರಂದು ಇಂಗ್ಲೆಂಡ್‌ನಲ್ಲಿ ನಡೆಸಲಾಯಿತು. 1800 ರ ದಶಕದ ಅಂತ್ಯದಲ್ಲಿ ಮಹಿಳೆಯರಿಗಾಗಿ ಕ್ಲಬ್‌ಗಳನ್ನು ರಚಿಸಲಾಯಿತು. 1926 ರಲ್ಲಿ, ಇಂಗ್ಲೆಂಡ್‌ನಲ್ಲಿ ಮಹಿಳಾ ಕ್ರಿಕೆಟ್ ಅಸೋಸಿಯೇಷನ್ ರಚನೆಯು ಆಟವನ್ನು ಔಪಚಾರಿಕಗೊಳಿಸುವ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಆದರೆ ಈ ಎಲ್ಲಾ ಪ್ರಯತ್ನಗಳಿಗೆ ನೂರಕ್ಕೆ ನೂರು ಪ್ರತಿಫಲ ಸಿಗಲಿಲ್ಲ. ಇವತ್ತಿಗೂ ಕೂಡ ಪುರುಷರ ಕ್ರಿಕೆಟ್ ಗೆ ಸಿಕ್ಕಷ್ಟು ಬೆಂಬಲ, ಒಲವು ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಸಿಗಲಿಲ್ಲ.

ಆದರೆ ಮೊನ್ನೆ ನಡೆದ IPL ಮಹಿಳಾ ಪ್ರೀಮಿಯರ್  ಲೀಗ್ ನಲ್ಲಿ RCB  ತಂಡವು ಟ್ರೋಫಿ ಗೆಲ್ಲುವ ಮೂಲಕ  ಫ್ರಾಂಚೈಸಿ  ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕ್ರಿಕೆಟ್ ಕೇವಲ ಗಂಡಿಗಷ್ಟೇ ಸೀಮಿತ ಅಂತ ನಿರ್ಧರಿಸಿರೋ ಎಷ್ಟೋ ಜನರಿಗೆ ಇವತ್ತಿನ ಈ ವಿಜಯೋತ್ಸವ ಸರಿಯಾದ ಎಚ್ಚರಿಕೆ ಮತ್ತು ತಕ್ಕನಾದ ಉತ್ತರವಾಗಲಿದೆ.

ಇನ್ನಾದರೂ ಜನರ ಮನಸ್ಥಿತಿ ಬದಲಾಗಬೇಕಿದೆ. ಕ್ರಿಕೆಟ್ ಕೇವಲ ಗಂಡಿಗಷ್ಟೇ ಅಲ್ಲ. ಅದು ಹೆಣ್ಣಿಗೂ ಕೂಡ ಸಾಧ್ಯ. ಇತಿಹಾಸ ಸೃಷ್ಟಿಸುವಲ್ಲಿ ಹೆಣ್ಣು ಕೂಡ ಪರಿಣಿತಳು ಎಂಬುದು ಅರ್ಥವಾಗಬೇಕಿದೆ. ಗೊಂಬೆಗಳನ್ನು, ಅಡುಗೆ ಆಟಿಕೆಗಳನ್ನು ತಂದುಕೊಡುವ ಜಾಗವನ್ನು ಕ್ರಿಕೆಟ್ ವಾಲಿಬಾಲ್ ಹಾಕಿ ಮುಂತಾದ ಆಟಗಳ ಆಟಿಕೆಗಳು ತುಂಬಬೇಕಾಗಿದೆ.

ಇದನ್ನೂ ಓದಿ- http://“ಸಂಗಾತ-ಸಂಘರ್ಷಗಳ ನಡುವೆ” https://kannadaplanet.com/metro-life-16/

More articles

Latest article