ನವದೆಹಲಿ: ಗುರುವಾರ ರಾತ್ರಿ ನಿಧನ ಹೊಂದಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಅವರು ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಶನಿವಾರ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಡಿಸೆಂಬರ್ 28 ರಂದು ನಡೆಯಲಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನ ಸೇರಿದಂತೆ ಏಳು ದಿನಗಳ ಕಾಲ ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಅವರು ಎಕ್ಸ್ ನಲ್ಲಿ ಹೇಳಿದ್ದಾರೆ. ಇವರ ಅಂತ್ಯಕ್ರಿಯೆ ರಾಜಾಘಾಟ್ ನಲ್ಲಿ ನಡೆಯಲಿದೆ.
ಮೋತಿಲಾಲ್ ನೆಹರು ಮಾರ್ಗದಲ್ಲಿರುವ ನಿವಾಸದಲ್ಲಿ ಡಾ.ಸಿಂಗ್ ಅವರ ಪಾರ್ಥೀವ ಶರೀರವನ್ನು ಇರಿಸಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅಂತಿಮ ದರ್ಶನ ಪಡೆದಿದ್ದಾರೆ. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೂ ಮೃತರ ಅಂತಿಮ ದರ್ಶನ ಪಡೆದರು. ಅನೇಕ ಕೇಂದ್ರ ಸಚಿವರು, ಸಂಸದರು, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಪದಾಧಿಕಾರಿಗಳು ಅಂತಿಮ ದರ್ಶನ ಪಡೆದರು.
ದೇಶಾದ್ಯಂತ 7 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದ್ದು, ಯಾವುದೇ ಅಧಿಕೃತ ಕಾರ್ಯಕ್ರಮಗಳು ನಡೆಯುವುದಿಲ್ಲ. ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಿ ಗೌರವ ಸಲ್ಲಿಸಲಾಗುತ್ತದೆ.