ಬೆಂಗಳೂರು: ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ಜಾತಿಗಣತಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಒಳ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಎಲ್ಲರೂ ತಮ್ಮ ಹೋರಾಟಗಳನ್ನು ಸ್ಥಗಿತಗೊಳಿಸಿ ಪರಿಶಿಷ್ಟರು ವಾಸಿಸುವ ಕೇರಿ, ಕಾಲೊನಿ, ಹಟ್ಟಿಗಳಲ್ಲಿ , ಜಾಗೃತಿ ಮೂಡಿಸಿ ಜಾತಿಗಣತಿಗೆ ಆಗಮಿಸುವ ನೌಕರರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸಮುದಾಯದ ಜನರಿಗೆ ಮಾಜಿ ಸಚಿವ ಎಚ್. ಆಂಜನೇಯ ಮನವಿ ಮಾಡಿಕೊಂಡಿದ್ದಾರೆ.
ಜಾತಿಗಣತಿ ಎರಡು ತಿಂಗಳಲ್ಲಿ ಪೂರ್ಣಗೊಂಡು ಜೂನ್ ಮೊದಲ ವಾರ ಒಳ ಮೀಸಲಾತಿ ಜಾರಿಗೆ ಬರಲಿದೆ. ಅದುವರೆಗೂ ಬ್ಯಾಕ್ ಲಾಗ್, ಸುಮಾರು 35 ಸಾವಿರ ಹುದ್ದೆಗಳು, ಬಡ್ತಿಯಲ್ಲಿ ಮೀಸಲು ಸೇರಿದಂತೆ ಯಾವುದೇ ನೇಮಕಾತಿ ನಡೆಯುವುದಿಲ್ಲ. ಜೂನ್ ತಿಂಗಳಲ್ಲಿ ಒಳ ಮೀಸಲಾತಿ ಅನುಷ್ಠಾನಕ್ಕೆ ಬರುವ ಕಾರಣ, ಅಂದು ಯುಗಾದಿ ಹಬ್ಬ ಆಚರಿಸೋಣ ಎಂದು ಅವರು ಹೇಳಿದ್ದಾರೆ.
ಮನೆ ಬಾಗಿಲಿಗೆ ಜನಗಣತಿದಾರರು ಬಂದಾಗ ಆಧಾರ್ ಸಂಖ್ಯೆ ಜೊತೆಗೆ ತಮ್ಮ ಜೀವನ ಪರಿಸ್ಥಿತಿ, ಶಿಕ್ಷಣ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಯನ್ನು ದಾಖಲಿಸಬೇಕು. ಈ ನಿಟ್ಟಿನಲ್ಲಿ ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ಮುಖಂಡರು, ಹೋರಾಟಗಾರರು ಮುಂದಾಗಬೇಕು ಎಂದೂ ಮಾಜಿ ಸಚಿವ ಆಂಜನೇಯ ತಿಳಿಸಿದ್ದಾರೆ.
‘ಪರಿಶಿಷ್ಟ ಜಾತಿ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಸರ್ಕಾರ ದಿಟ್ಟ ನಡೆ ಇಟ್ಟಿದೆ. ಏಪ್ರಿಲ್, ಮೇ ತಿಂಗಳಲ್ಲಿ ಈ ಸಮೀಕ್ಷೆ ನಡೆಯಲಿದೆ. 30 ವರ್ಷಗಳ ಹೋರಾಟದ ಫಲ ಹಾಗೂ ಒಳ ಮೀಸಲು ಜಾರಿಗೊಳಿಸುವ ಅಧಿಕಾರ ರಾಜ್ಯಗಳಿಗಿದೆ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕಾನೂನು ತೊಡಕು ಆಗದ ರೀತಿಯಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ. ಆದರೆ, ದತ್ತಾಂಶ ಸಂಗ್ರಹ ಸ್ಪಷ್ಟವಾಗಿ ದೊರೆಯದ ಕಾರಣ ಒಳ ಮೀಸಲಾತಿ ಜಾರಿ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲು ಕಷ್ಟಸಾಧ್ಯವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗ ಮಧ್ಯಂತರ ವರದಿಯಲ್ಲಿ ಹೇಳಿದೆ’ ಎಂದಿದ್ದಾರೆ.