ಚೆನ್ನೈ: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಸಾಯಿನಾಥ್ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ ಭಾರೀ ಸ್ಫೋಟ ಸಂಭವಿಸಿ ಆರು ಮಂದಿ ಸಾವನ್ನಪ್ಪಿ, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಪಟಾಕಿ ಸಿಡಿತದ ರಭಸಕ್ಕೆ ಕಾರ್ಮಿಕರು ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದರು. ಸ್ಫೋಟದಿಂದ ನಾಲ್ಕು ಕಟ್ಟಡಗಳು ನಾಶವಾಗಿವೆ ಎಂದು ತಿಳಿದು ಬಂದಿದೆ.
ಅವಶೇಷಗಳಡಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪಟಾಕಿ ಕಾರ್ಖಾನೆಯ ಕಚ್ಚಾ ವಸ್ತುಗಳ ಸಂಗ್ರಹ ಕೊಠಡಿಯಲ್ಲಿ ಸ್ಫೋಟ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ನಂತರ ಅಪಘಾತಕ್ಕೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿಯೂ ತಿರುವೂರು ಜಿಲ್ಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು.