ಚನ್ನಪಟ್ಟಣ: ರಾಮನಗರ ತಾಲೂಕಿನ ಕೂಡ್ಲೂರು ರಸ್ತೆಯಲ್ಲಿರುವ ಶಿಶಿರ ರೆಸಾರ್ಟ್ ನಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಚುನಾವಣಾ ನೀತಿ ಸಂಹಿತೆ ಕಾರಣಕ್ಕಾಗಿ ಬಾಡೂಟ ಸಿಗದೆ ಕಾರ್ಯಕರ್ತರು ನಿರಾಶೆಗೊಳ್ಳಬೇಕಾಯಿತು.
ಬಿಜೆಪಿ ಜೆಡಿಎಸ್ ಮೈತ್ರಿ ಕೂಟದ ಟಿಕೆಟ್ ಆಕಾಂಕ್ಷಿಯಾಗಿರುವ ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮಧ್ಯಾಹ್ನ ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ವಿಷಯ ತಿಳಿದು ಚುನಾವಣಾ ಅಧಿಕಾರಿ ಪಿ.ಕೆ.ಬಿನೋಯ್ ನೇತೃತ್ವದ ತಂಡ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿತ್ತು. ಅಡುಗೆ ತಯಾರಿಸಲಾಗುತ್ತಿದ್ದ ಅಡುಗೆ ಮನೆಗೆ ತೆರಳಿ ಪರಿಶೀಲನೆ ನಡೆಸಿದರು. ಅಡುಗೆ ಮನೆ ಮತ್ತು ಊಟದ ಕೋಣೆಯನ್ನು ಮುಚ್ಚಿಸಿ ಊಟ ಮತ್ತು ಎಲ್ಲ ಪರಿಕರಗಳನ್ನು ವಶಕ್ಕೆ ಪಡೆದರು.
ಸಭೆ ಮುಗಿಯುತ್ತಿದ್ದಂತೆ ಬಾಡೂಟಕ್ಕೆ ಕಾರ್ಯಕರ್ತರು ಮುಗಿ ಬಿದ್ದರು. ಏಕಕಾಲಕ್ಕೆ ಎಲ್ಲರೂ ಅಡುಗೆ ಮನೆಯತ್ತ ದೌಡಾಯಿಸಿದರು. ಆದರೆ ಪೊಲೀಸರು ಎಲ್ಲರನ್ನೂ ನಿಯಂತ್ರಿಸಿದರು. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಊಟವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕರ್ತರೋ ವಾಸನೆ ಕುಡಿದಿದ್ದೇ ಲಾಭ ಎಂದು ನಿರಾಶೆಯಿಂದ ಮರಳಬೇಕಾಯಿತು.