ನವದೆಹಲಿ: ದೇಶದಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5ಸಾವಿರ ಗಡಿ ದಾಟಿದೆ. ಕೇರಳದಲ್ಲಿ ದೇಶದಲ್ಲೇ ಅತಿ ಹೆಚ್ಚು ಅಂದರೆ 1,679 ಪ್ರಕರಣಗಳು ದಾಖಲಾಗಿವೆ. ಗುಜರಾತ್ ನಲ್ಲಿ 615, ಪಶ್ಚಿಮ ಬಂಗಾಳದಲ್ಲಿ 596 ಮತ್ತು ದೆಹಲಿಯಲ್ಲಿ 592 ಪ್ರಕರಣಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ, ಐಸೋಲೇಷನ್ ಬೆಡ್ ಗಳು, ವೆಂಟಿಲೇಟರ್ ಗಳು ಮತ್ತು ಅಗತ್ಯ ಔಷಧಿಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸದ್ಯಕ್ಕೆ ಭಾರತದಲ್ಲಿ 5,364 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಸೋಂಕಿನ ತೀವ್ರತೆ ಕಡಿಮೆ ಇದ್ದು,. ಬಹುತೇಕ ಸೋಂಕಿತರು ಮನೆಯಲ್ಲೇ ಆರೈಕೆಯಲ್ಲಿದ್ದಾರೆ. ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
2025ರ ಜನವರಿಯಿಂದ ಇದುವರೆಗೆ ಕೋವಿಡ್–19 ಗೆ ದೇಶದಲ್ಲಿ 55 ಮಂದಿ ಬಲಿಯಾಗಿದ್ದಾರೆ. ಮೇ 22 ರಂದು ದೇಶದಲ್ಲಿ ಒಟ್ಟು 257 ಸಕ್ರಿಯ ಪ್ರಕರಣಗಳಿದ್ದವು. ಮೇ 26ರ ಹೊತ್ತಿಗೆ 1,010ಕ್ಕೆ ಏರಿಕೆ ಕಂಡಿತ್ತು.