ಬೆಂಗಳೂರು: ಕೊಲೆ ಪ್ರಕರಣದ ಪ್ರಮುಖ ಆರೋಪಿಗೆ ಸಹಾಯ, ಕರ್ತವ್ಯಲೋಪ ಮತ್ತು ಡ್ರಗ್ ಪೆಡ್ಲರ್‌ನಿಂದ ಹಣ ವಸೂಲಿ ಮಾಡಿದ ಗಂಭೀರ ಆರೋಪಗಳ ಅಡಿಯಲ್ಲಿ ರಾಮಮೂರ್ತಿನಗರ ಠಾಣೆ ಇನ್ಸ್ಪೆಕ್ಟರ್ ಎಚ್. ಮುತ್ತುರಾಜು ಸೇರಿದಂತೆ ಆರು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಪೊಲೀಸ್ ಸಬ್ಇನ್ಸ್ಪೆಕ್ಟರ್ ಉಮೇಶ್, ಎಎಸ್ಐಗಳಾದ ಫೈರೋಜ್ ಖಾನ್, ಮಹೇಶ್, ಹೆಡ್ಕಾನ್ಸ್ಟೆಬಲ್ ಮಂಜುನಾಥ್, ಕಾನ್ಸ್ಟೆಬಲ್ ಬಸವರಾಜ್ ಅಳ್ಳೊಳ್ಳಿ ಅವರನ್ನು ಹೆಚಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಎಲ್ಲ ಆರು ಮಂದಿ ಕರ್ತವ್ಯ ಲೋಪ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಇಲಾಖಾ ವಿಚಾರಣೆ ಮುಂದುರೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಲೆ ಆರೋಪಿ ಗೌತಮ್ ಎಂಬಾತನನ್ನು ವಿಚಾರಣೆಗೆ ಒಳಪಡಿಸದೆ. ಮೇಲಾಧಿಕಾರಿಗಳ ಗಮನಕ್ಕೂ ತಾರದೆ ದೋಷಾರೋಪ ಪಟ್ಟಿಯಿಂದ ಈತನ ಹೆಸರನ್ನು ಕೈಬಿಟ್ಟಿದರು. ಬೀಟ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳಾದ ವಿಷ್ಣು ದೀಪು ಮೊದಲಾದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದೆ ಹಣ ಪಡೆದು ಬಿಟ್ಟು ಕಳುಹಿಸಿದ್ದರು. ಠಾಣೆಯ ಪೊಲೀಸ್ ಸಿಬ್ಬಂದಿ ಡ್ರಗ್ ಪೆಡ್ಲರ್ ಟೋನಿ ಎಂಬಾತನನ್ನು ಹಿಡಿದು ತಂದಿದ್ದರೂ ಪ್ರಕರಣ ದಾಖಲಿಸದೆ ಹಣ ಪಡೆದು ಆತನನ್ನೂ ಬಿಟ್ಟು ಕಳುಹಿಸಿದ್ದು ಸೇರಿದಂತೆ ಅನೇಕ ಆರೋಪಗಳನ್ನು ಎದುರಿಸುತ್ತಿದ್ದರು. ಈ ಎಲ್ಲ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದು, ಅಮಾನತ್ತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ ಸ್ಪೆಕ್ಟರ್ ಮುತ್ತುರಾಜ್ ಪೊಲೀಸ್ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಆರೋಪಿಗಳ ಪರವಾಗಿ ನಿಲ್ಲುತ್ತಿದ್ದಾರೆ ಎಂಬ ಅನಾಮಧೇಯ ಪತ್ರವೊಂದು ಆಯುಕ್ತರಿಗೆ ರವಾನೆ ಮಾಡಲಾಗಿತ್ತು. ಆಯುಕ್ತರು ತನಿಖೆಗೆ ಆದೇಶಿಸಿದ್ದರು. ರಾಜಾತಿಥ್ಯ ನೀಡಿರುವುದು ಸಾಬೀತಾಗಿತ್ತು. ಈ ವರದಿಯನ್ನು ಆಯುಕ್ತರು ಪರಿಶೀಲಿಸಿ ಆರು ಮಂದಿಯನ್ನು ಅಮಾನತುಗೊಳಿಸಿ ಮಂಗಳವಾರ ಆದೇಶಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.