ಇಸ್ಲಾಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿಯನ್ನು ದೋಷಿ ಎಂದು ಪರಿಗಣಿಸಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹಾಗೆಯೇ ಬುಶ್ರಾ ಬೀಬಿಗೆ 7 ಲಕ್ಷ ರೂ. ಇಮ್ರಾನ್ ಖಾನ್ ಗೆ 10 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ಇಬ್ಬರೂ ದಂಡ ಪಾವತಿಸಲು ಸಾಧ್ಯವಾಗದಿದ್ದರೆ ಇಮ್ರಾನ್ ಆರು ತಿಂಗಳ ಜೈಲು ಶಿಕ್ಷೆ ಮತ್ತು ಬುಶ್ರಾ ಮೂರು ತಿಂಗಳ ಜೈಲು ಶಿಕ್ಷೆಯನ್ನು ಹೆಚ್ಚುವರಿಯಾಗಿ ಅನುಭವಿಸಬೇಕಾಗುತ್ತದೆ. ರಾವಲ್ಪಿಂಡಿಯಲ್ಲಿರುವ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವು ತೀರ್ಪನ್ನು ಪ್ರಕಟಿಸಿದೆ.
ಅಲ್-ಖಾದಿರ್ ಯೂನಿವರ್ಸಿಟಿ ಪ್ರಾಜೆಕ್ಟ್ ಟ್ರಸ್ಟ್ ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ದಂಪತಿಗೆ ಈ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಇಮ್ರಾನ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಡಾನ್ ಪತ್ರಿಕೆಯ ವರದಿ ಪ್ರಕಾರ, ಇಮ್ರಾನ್ ಖಾನ್ ಮತ್ತು ಬೀಬಿ ಅವರನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿದೆ. ತೀರ್ಪು ಹೊರಬೀಳುತ್ತಿದ್ದಂತೆ ಬುಶ್ರಾ ಬೀಬಿಯನ್ನು ಬಂಧಿಸಲಾಯಿತು. ಇಮ್ರಾನ್ ಖಾನ್ ಈಗಾಗಲೇ ಜೈಲಿನಲ್ಲಿದ್ದಾರೆ.
ಇಮ್ರಾನ್ ಖಾನ್ ಅವರನ್ನು 2023ರ ಮೇ 9ರಂದು ಬಂಧಿಸಲಾಗಿತ್ತು. ಅಲ್ ಖಾದಿರ್ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯದ ಕೋಟ್ಯಂತರ ರೂ ಬೆಲೆ ಬಾಳುವ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದರು ಎಂದು ಉದ್ಯಮಿ ಮಲ್ಲಿಕ್ ರಿವಾಜ್ ಆಪಾದಿಸಿದ್ದರು.