Sunday, September 8, 2024

ಹಕ್ಕುಗಳಿಗಾಗಿ ಭಾರತೀಯ ಸೊಸೆಯಂದಿರ ನಿರಂತರ ಹೋರಾಟಗಳು

Most read

ವಿಧವೆಯರನ್ನು ಗೌರವದಿಂದ ನಡೆಸುವುದು, ಅವರ ಹಕ್ಕುಗಳನ್ನು ಒಪ್ಪಿಕೊಳ್ಳುವುದು, ಮತ್ತು ಸಾಮಾಜಿಕ ಮಾನದಂಡಗಳನ್ನು ಸವಾಲು ಮಾಡುವುದು ಸಹಾನುಭೂತಿಯ, ನ್ಯಾಯಯುತ ಸಮಾಜದ ಅತೀ ಅಗತ್ಯವಾದ ಹೆಜ್ಜೆಗಳಾಗಿವೆ – ಸುಚಿತ್ರಾ, ರಾಜಕೀಯ ವಿಶ್ಲೇಷಕರು ಮತ್ತು ವಕೀಲರು.

ಜುಲೈ 2023 ರಲ್ಲಿ, 23 ವರ್ಷ ಹರೆಯದ ಸೇನಾ ವೈದ್ಯ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರು ಸಿಯಾಚಿನ್ ಗ್ಲೇಸಿಯರ್‌ನಲ್ಲಿ ನಡೆದ ಬೆಂಕಿ ಅನಾಹುತವೊಂದರಲ್ಲಿ ಹಲವಾರು ಜನರ ಪ್ರಾಣ ರಕ್ಷಿಸುತ್ತಾ ತಮ್ಮ ಪ್ರಾಣ ತ್ಯಾಗ ಮಾಡಿದ್ದು, ದೇಶವನ್ನು ತಲ್ಲಣ ಗೊಳಿಸಿತು. ಈ ದುರಂತವು ಯುವ ಸೇನಾನಿಯ ಪ್ರಾಣವನ್ನು ಕಸಿದು ಕೊಂಡಿತ್ತು. ಅವರ ತ್ಯಾಗವನ್ನು ಮರಣೋತ್ತರವಾಗಿ ಕೀರ್ತಿ ಚಕ್ರ ನೀಡುವುದರೊಂದಿಗೆ ಗೌರವಿಸಲಾಯಿತು. ಆದರೆ, ಈ ಶ್ರದ್ಧಾಂಜಲಿ ಮತ್ತು ಗೌರವದ ನಡುವೆ, ನಮ್ಮ ಸಮಾಜದಲ್ಲಿ ಹರಡಿರುವ ದುಷ್ಟ ವಿಚಾರವನ್ನೂ ಈ ಘಟನೆ  ಬಹಿರಂಗಗೊಳಿಸಿತು. ದೇಶದ ಸೇನಾನಿಯ ವಿಧವೆಯಾಗಲಿ ಅಥವಾ ಸಾಮಾನ್ಯ ವ್ಯಕ್ತಿಯ ವಿಧವೆಯಾಗಲಿ ಈ ಬವಣೆ ಮಹಿಳೆಗೆ ಅದರಲ್ಲೂ ವಿಧವೆಯರಿಗೆ ತಪ್ಪಿದ್ದಲ್ಲ ಎನ್ನುವುದು ಮತ್ತೊಮ್ಮೆ ಮನದಟ್ಟು ಮಾಡಿಕೊಟ್ಟಿತು. ನಮ್ಮ ಸಮಾಜದಲ್ಲಿ ಸೊಸೆಯಂದಿರಿಗೆ ದಕ್ಕುವ ಹಕ್ಕುಗಳು ಮತ್ತು ಅವರನ್ನು ಕುಟುಂಬದ ಅಂಗಾಂಗವೆಂದು ಕಾಣುವ ದೃಷ್ಟಿಯು ನಮ್ಮ ಸಮಾಜದಲ್ಲಿ ಅಷ್ಟೇನೂ ಬದಲಾಗಿಲ್ಲ ಎಂಬುದನ್ನು ಈ ಘಟನೆಯು ತೋರಿಸಿತು.

ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಸಾವಿನ ನಂತರ ಅವರ ಕುಟುಂಬವು ಅಗಾಧ ದುಃಖದ ಸಾಗರದಲ್ಲಿ ಮುಳುಗಿತ್ತು. ಈ ದುಃಖದ ಬಿರುಗಾಳಿಯ ಕೇಂದ್ರದಲ್ಲಿ ಸ್ಮೃತಿ ಸಿಂಗ್, ಯೌವ್ವನದಲ್ಲೇ ವಿಧವೆ ಆದ ಯುವತಿ, ಆಳವಾದ ನೋವಿನ ಮಧ್ಯೆಯೂ ಅವರು ಕುಟುಂಬ ಮತ್ತು ಸಮಾಜದಿಂದ ತೀವ್ರ ಪರಿಶೀಲನೆಗೆ ಒಳಗಾದರು. ಮದುವೆಯಾಗಿ ಕೇವಲ ಐದು ತಿಂಗಳ ಅವಧಿಯಲ್ಲಿಯೇ ಸ್ಮೃತಿ ಸಿಂಗ್, ತಮ್ಮ ಪತಿಯ ಬಲಿದಾನದ ನಂತರದ ಹಕ್ಕುಗಳು ಮತ್ತು ಕೌಟುಂಬಿಕ ಬಂಧಗಳ ಬಗ್ಗೆ ವಿವಾದಾತ್ಮಕ ಚರ್ಚೆಯ ಕೇಂದ್ರದಲ್ಲಿ ಸಿಕ್ಕಿಬಿದ್ದರು.

ಸ್ಮೃತಿ ಸಿಂಗ್ ಮತ್ತು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರದ್ದು ಪ್ರೇಮ ವಿವಾಹ. ತಮ್ಮದೊಂದು ಇಂಟರ್ವ್ಯೂನಲ್ಲಿ ಸ್ಮೃತಿ ಸಿಂಗ್ ವ್ಯಕ್ತ ಪಡಿಸಿರುವಂತೆ ಅವರದ್ದು ಮೊದಲ ಭೇಟಿಯ ಪ್ರೇಮ. ಇಬ್ಬರೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭೇಟಿಯಾಗಿ, ಬಳಿಕ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರು Armed Forces Medical College (AFMC) ಗೆ ಸೆಲೆಕ್ಟ್ ಆಗಿದ್ದರಿಂದ ಮೆಡಿಕಲ್ ಕಾಲೇಜಿಗೆ ಸೇರ್ಪಡೆಯಾಗಿದ್ದರು. ಆದರೂ ಇಬ್ಬರೂ ಕೂಡ ಸರಿ ಸುಮಾರು ಎಂಟು ವರ್ಷಗಳ ಕಾಲ ಪರಸ್ಪರ ಪ್ರೇಮಿಗಳಾಗಿ, ಬಳಿಕ ವಿವಾಹವಾಗಿದ್ದರು. ವಿವಾಹವಾದ ಎರಡು ತಿಂಗಳ ಬಳಿಕ ಅಂಶುಮಾನ್ ಅವರಿಗೆ ಸಿಯಾಚಿನ್ ಗ್ಲೇಸಿಯರ್ ನಲ್ಲಿ ಪೋಸ್ಟಿಂಗ್ ಆಗಿತ್ತು. ವಿವಾಹವಾದ ನಾಲ್ಕು ತಿಂಗಳುಗಳಲ್ಲೇ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಬೆಂಕಿ ಅನಾಹುತದಲ್ಲಿ ಪ್ರಾಣ ತ್ಯಾಗ ಮಾಡಿದ್ದರು. ಇದನ್ನು ಗಮನಿಸಿದಾಗ ಎಂಥವರಿಗೂ ಸ್ಮೃತಿ ಸಿಂಗ್ ಅವರ ಸಂಕಷ್ಟ ಅರಿವಾಗುವುದು ಕಷ್ಟವೇ?.

ಸ್ಮೃತಿ ಸಿಂಗ್ ಮತ್ತು ಕ್ಯಾಪ್ಟನ್ ಅಂಶುಮಾನ್ ಸಿಂಗ್

ಇದರ ಮಧ್ಯೆಯೂ, ಸ್ಮೃತಿ ಅವರು ತಮ್ಮ ಪ್ರೇಮಿ, ಪತಿಯನ್ನು ಕಳೆದುಕೊಂಡ ಸಂಕಷ್ಟವನ್ನು ಎದುರಿಸುತ್ತಿರುವಾಗ, ಅವರ ವೈಯಕ್ತಿಕ ನೋವು ಮತ್ತು ಅವಮಾನಗಳು ಜನರ ಚರ್ಚೆ ಮತ್ತು ತೀರ್ಪಿನ ವಿಷಯವಾಯಿತು. ಸ್ಮೃತಿಯವರ ಮಾವ ಮತ್ತು ಅತ್ತೆಯಾದ ರವಿ ಪ್ರತಾಪ್ ಸಿಂಗ್ ಮತ್ತು ಮಂಜು ಸಿಂಗ್ (ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಂದೆ ತಾಯಿ) ಅವರು, ನೆಕ್ಸ್ಟ್ ಆಫ್ ಕಿನ್ (ಎನ್ಒಕೆ) ನಿಯಮಗಳ ಮೇಲೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು, ಸ್ಮೃತಿಗೆ ನೀಡಲಾದ ಹಕ್ಕುಗಳು ಮತ್ತು ಪ್ರಯೋಜನಗಳ ಪ್ರಮಾಣವನ್ನು ಪ್ರಶ್ನಿಸಿದರು. ಈ ನಿಯಮಗಳನ್ನು ಮರು ಪರಿಶೀಲಿಸಬೇಕೆಂದು ಇವರೀರ್ವರೂ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದರು. ಕಾರಣ ಇಷ್ಟೇ: ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರು ತಮ್ಮ ದಾಖಲೆಗಳಲ್ಲಿ ತಮ್ಮ ಪತ್ನಿಯಾದ ಸ್ಮೃತಿಯವರನ್ನು ನೆಕ್ಸ್ಟ್ ಆಫ್ ಕಿನ್ (ಎನ್ಒಕೆ) ಎಂದು ನಮೂದಿಸಿದ್ದರು. ಇದರಿಂದಾಗಿ ಅವರಿಗೆ ಸಲ್ಲಬೇಕಾದ ಮರಣೋತ್ತರ ಸವಲತ್ತುಗಳು, ಪಿಂಚಣಿಗೆ ಪತ್ನಿಯಾದ ಸ್ಮೃತಿಯವರು ವಾರಸುದಾರರಾಗಿದ್ದರು. ಇದು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಂದೆ ತಾಯಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಸರ್ಕಾರಿ ದಾಖಲೆಗಳ ಹಾಗೂ ನ್ಯೂಸ್ ವರದಿಗಳ ಪ್ರಕಾರ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಂದೆ ತಾಯಿ ಮತ್ತು ಪತ್ನಿಗೆ 65 ಲಕ್ಷ/ ಮತ್ತು ಪತ್ನಿಗೆ 50 ಲಕ್ಷ ಪರಿಹಾರ ಧನ ದೊರಕಿದ್ದರೂ, ಅವರ ತಂದೆ ತಾಯಿ ಇಲ್ಲ ಸಲ್ಲದ ಅಪವಾದಗಳನ್ನು ಸ್ಮೃತಿಯವರ ಮೇಲೆ ಮಾಡಹೊರಟರು. ಪೋಷಕರು 65 ಲಕ್ಷ ರೂ. ಪರಿಹಾರದ ಅರ್ಧವನ್ನು ಪಡೆದಿದ್ದರೂ, ಈ ವಿವಾದಾತ್ಮಕ ಸನ್ನಿವೇಶವು ಇನ್ನೂ ಮುಂದುವರಿಯಿತು. ರವಿ ಪ್ರತಾಪ್ ಸಿಂಗ್ ಅವರು ತಮ್ಮ ಕಿರಿಯ ಮಗನನ್ನು ಸ್ಮೃತಿಗೆ ಮದುವೆ ಮಾಡಿಕೊಡುವ ಪ್ರಸ್ತಾವನೆಯನ್ನೂ ಮುಂದಿಟ್ಟರು. ಇಂತಹ ಮದುವೆ ಉತ್ತರ ಭಾರತದಲ್ಲಿ ಸರ್ವೇ ಸಾಮಾನ್ಯ, ಆದ್ದರಿಂದ ತಮ್ಮ ಕಿರಿಯ ಮಗನನ್ನು ಸ್ಮೃತಿ ಸಿಂಗ್ ಮದುವೆ ಆಗಬಹುದು ಎಂದು ಪ್ರಸ್ತಾಪಿಸಿದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ಈ ನಡುವೆ, ಸ್ಮೃತಿಯವರು ಒಂದೇ ಒಂದು ಮಾತನ್ನೂ ಮಾಧ್ಯಮದ ಮುಂದಾಗಲೀ, ಸಾಮಾಜಿಕ ಜಾಲತಾಣದಲ್ಲಾಗಲೀ ಆಡಲಿಲ್ಲ.

ಈ ಇಡೀ ಘಟನೆ ಭಾರತದ ಕೆಲವು ಭಾಗಗಳಲ್ಲಿ ವ್ಯಾಪಿಸಲ್ಪಟ್ಟಿರುವ ಸಾಮಾಜಿಕ ವರ್ತನೆಗಳನ್ನು ತೋರಿಸುತ್ತದೆ.

ಮೊದಲನೆಯದಾಗಿ ಸೊಸೆಯೂ ತಮ್ಮ ಕುಟುಂಬದ ಭಾಗ, ತಮ್ಮ ಮಗನ ಬಾಳ ಸಂಗಾತಿ ಅನ್ನುವುದು ಎಷ್ಟೋ ಪೋಷಕರಿಗೆ ಒಪ್ಪಿಕೊಳ್ಳಲು ಅಸಾಧ್ಯವಾದ ಸಂಗತಿ ಎಂದರೆ ಅಚ್ಚರಿ ಏನಿಲ್ಲ. ಅವಳನ್ನು ನೆಕ್ಸ್ಟ್ ಆಫ್ ಕಿನ್ (ಎನ್ಒಕೆ) ಮಾಡಿರುವುದು ಸರಿಯಲ್ಲ ಎನ್ನುವ ಧೋರಣೆ ಇನ್ನೂ ಈ ಸಮಾಜದಲ್ಲಿ ವ್ಯಾಪಕವಾಗಿದೆ.

ಎರಡನೆಯದಾಗಿ ವಿಧವೆಯರಿಗೆ ಸ್ವಾಯತ್ತತೆಯೇ ಇಲ್ಲ ಎನ್ನುವ ಮನಸ್ಥಿತಿ. ಅವಳ ಗುರುತನ್ನು ಅವಳ ವೈವಾಹಿಕ ಸ್ಥಿತಿಯಿಂದ ಮಾತ್ರ ವ್ಯಾಖ್ಯಾನಿಸಲಾಗುತ್ತದೆ. ಒಬ್ಬ ಗಂಡನನ್ನು ಕಳೆದುಕೊಂಡರೆ, ಇನ್ನೊಬ್ಬನನ್ನು ಮದುವೆಯಾದರೆ ಮಾತ್ರ ಅವಳಿಗೊಂದು ಅಸ್ತಿತ್ವ ಸಿಗುವುದು ಅನ್ನುವ ಮನಸ್ಥಿತಿ ಇನ್ನೊಂದೆಡೆ. ಇಲ್ಲಿ ಮಹಿಳೆಯ ಮನಸಿನಲ್ಲಿ ಏನಿದೆ ಅನ್ನುವುದು ಯಾರಿಗೂ ಬೇಡವಾದ ವಿಷಯ. ತಾನು ಎಂಟು ವರ್ಷಗಳ ಕಾಲ ಪ್ರೇಮಿಸಿ ಮದುವೆಯಾದ ಗಂಡ ನಾಲ್ಕೇ ತಿಂಗಳಲ್ಲಿ ಇಲ್ಲವೆಂದಾಗ ಆಗುವ ಆಘಾತ ಬಹುಷ: ಊಹಿಸಲಸಾಧ್ಯ. ಈ ದುಃಖದ ನಡುವೆ, ಗಂಡನ ತಮ್ಮನನ್ನೇ ಮದುವೆಯಾಗು ಎನ್ನುವ ಪ್ರಸ್ತಾಪ ಮಾನವೀಯ ಕಾಳಜಿಯುಳ್ಳ ವ್ಯಕ್ತಿಗಳಿಂದ ಬರಬಾರದು.

ಮರಣೋತ್ತರವಾಗಿ ಕೀರ್ತಿ ಚಕ್ರ ನೀಡುತ್ತಿರುವುದು

ಈಗಾಗಲೇ ಕೌಟುಂಬಿಕ ಒತ್ತಡದ ಬಳ್ಳಿಯಲ್ಲಿ ಸಿಲುಕಿರುವ ಸ್ಮೃತಿಗೆ ಸಂಬಂಧಿಸಿದಂತೆ ಆಧಾರ ರಹಿತ ವದಂತಿಗಳೂ ಹರಡುತ್ತಿವೆ. ಸ್ಮೃತಿ ಪರಿಹಾರದ ಹಣದೊಂದಿಗೆ ಓಡಿಹೋದರು ಎಂಬ ವದಂತಿಗಳು ತ್ವರಿತವಾಗಿ ತಳ್ಳಿಹಾಕಲ್ಪಟ್ಟಿದ್ದರೂ, ಅವುಗಳ ಹಾನಿ ತಡೆಯಲಾಗಿಲ್ಲ. ರವಿ ಪ್ರತಾಪ್ ಸಿಂಗ್ ಅವರಂತಹ ಹಿರಿಯ ವ್ಯಕ್ತಿಯು ತನ್ನ ಹಿರಿಯ ಮಗನನ್ನು ಸ್ಮೃತಿ ಎಂದಿಗೂ ಪ್ರೀತಿಸಲಿಲ್ಲ ಮತ್ತು ಸ್ಮೃತಿ ಅವರು ತಮ್ಮ ಮಗ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರನ್ನು ಪ್ರೀತಿಯ ನೆಪದಲ್ಲಿ ವಂಚಿಸಿದರು ಎಂಬುದಾಗಿ ಕೂಡ ಆರೋಪಿಸಿದರು. ಈ ಕಠಿಣ ಪರಿಸ್ಥಿತಿಯಲ್ಲಿ, ಸ್ಮೃತಿ ಅವರು ಘನತೆಯ ಮೌನವನ್ನು ಕಾಪಾಡಿಕೊಂಡಿದ್ದು, ಅವರ ಸ್ಥಿತಪ್ರಜ್ಞ ಮನಸ್ಥಿತಿಗೆ, ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿದೆ. ಈ ಸಂಕಷ್ಟದ ಘಟನೆಯು ನಮ್ಮ ಸಮಾಜದಲ್ಲಿ ವಿಶಾಲವಾಗಿ ಹಬ್ಬಿಕೊಂಡಿರುವ, ಸೊಸೆಯಂದಿರು ತಮ್ಮ ಸ್ವಂತ ಕುಟುಂಬಗಳಲ್ಲಿ ಹೊರಗಿನವರು ಎಂಬ ದೃಷ್ಟಿಕೋನದ ಸಾಮಾಜಿಕ ಸಮಸ್ಯೆಯನ್ನು ತೋರಿಸುತ್ತದೆ. ಅವರ ಕಾನೂನು ಮತ್ತು ಭಾವನಾತ್ಮಕ ಬಂಧಗಳ ಹೊರತಾಗಿಯೂ, ಅವರನ್ನು ಸಾಮಾನ್ಯವಾಗಿ “ತಾತ್ಕಾಲಿಕ ಸದಸ್ಯ” ರಂತೆ ಪರಿಗಣಿಸಲಾಗುತ್ತದೆ. ಮರಣಿಸಿದ ಪತಿಯ ಸವಲತ್ತುಗಳ ಹಕ್ಕುಯುದ್ಧದಲ್ಲಿ, ವಿಧವೆಯ ನ್ಯಾಯಸಮ್ಮತಿ ಮತ್ತು ಪಾತ್ರವನ್ನು “ಹೊರಗಿನವರು” ಎಂಬಂತೆ ಪರಿಶೀಲಿಸಲಾಗುತ್ತದೆ. ಅವರಿಗೆ ದಕ್ಕ ಬೇಕಾದ ಸವಲತ್ತುಗಳು, ಅವರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿಸಲು ನೀಡುವ ಬೆಂಬಲವಾಗಿ ನೋಡಲಾಗುವುದಿಲ್ಲ, ಬದಲಿಗೆ ಅದು ಕೌಟುಂಬಿಕ ನಿಯಂತ್ರಣಕ್ಕೆ ಒಡಕು ಮತ್ತು ಸಂಪ್ರದಾಯಸ್ಥ ಸಮಾಜಕ್ಕೆ ಬೆದರಿಕೆಯೇನೋ ಎನ್ನುವಂತೆ ಪರಿಗಣಿಸಲಾಗುತ್ತದೆ. ಭಾರತೀಯ ಸಮಾಜದಲ್ಲಿ, ಸೊಸೆಯರು ತಮ್ಮ ಹಕ್ಕುಗಳನ್ನು ಕೇಳಿದಾಗ ಅವರನ್ನು “ಅಮಾನವೀಯಗೊಳಿಸುವುದನ್ನು (dehumanise )” ಸ್ಪಷ್ಟವಾಗಿ ಕಾಣಬಹುದು. ಮರುಮದುವೆಗೆ ತಕ್ಷಣದ ಒತ್ತಾಯ, ವಿಶೇಷವಾಗಿ ವಿವಾದಾತ್ಮಕ ಪದ್ಧತಿಗಳ ಅಡಿಯಲ್ಲಿ ಅಂತಹ ವಿವಾಹ ಜರುಗುವುದು ನಮ್ಮ ಸಾಮಾಜಿಕ ಅಸ್ವಸ್ಥತೆಯನ್ನು ತೋರಿಸುತ್ತದೆ. ಭಾರತದಲ್ಲಿ ಮರಣೋತ್ತರವಾಗಿ ಸೊಸೆಯಂದಿರು ತಮ್ಮ ಪತಿಯ ಹಕ್ಕುಗಳನ್ನು ಪಡೆಯಲು ಹೊರಟರೆ, ಮೊತ್ತ ಮೊದಲಾಗಿ ಅವರ ಅರ್ಹತೆಯನ್ನು ಪ್ರಶ್ನೆ ಮಾಡುತ್ತಾರೆ; ಅವರಿಗೆ ಹಣದ ವ್ಯಾಮೋಹ ಜಾಸ್ತಿ ಎನ್ನುವಂತೆ ಬಿಂಬಿಸಲಾಗುತ್ತದೆ. ಇನ್ನು, ಅವರೇನಾದರೂ ತಮ್ಮ ಸ್ವ-ಇಚ್ಛೆಯಂತೆ ಕುಟುಂಬಸ್ಥರನ್ನು ವಿರೋಧಿಸಿ ಇನ್ನೊಂದು ಮದುವೆಯಾದರೆ ಅಂತಹ ಮಹಿಳೆಯರನ್ನು ದೂಷಿಸುವ ಪರಿಯೇ ಬೇರೆ.

ಸುಚಿತ್ರಾ

ರಾಜಕೀಯ ವಿಶ್ಲೇಷಕರು ಮತ್ತು ವಕೀಲರು.

ಇದನ್ನೂ ಓದಿಮನೆಯನೇನೋ ಕಟ್ಟಬಹುದು..ಆದರೆ ಮನಸು?

More articles

Latest article