ವಿಶೇಷ | ಸೌತಡ್ಕ ಗಣಪತಿ ಗುಡಿ ಕಬಳಿಸಲು ನಡೆಯುತ್ತಿದೆ ಸಂಚು

Most read

ಸೌತಡ್ಕ ಶ್ರೀ ಮಹಾಗಣಪತಿ ಬಯಲು ಆಲಯ ಮಹಾವಂಚನೆಯೊಂದು ಬಯಲಾಗಿರುವ ಕಾರಣಕ್ಕೆ ಸುದ್ದಿಯಾಗುತ್ತಿದೆ.ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಮೂಲಕ ಕಳೆದ ಹಲವು ವರ್ಷಗಳಿಂದ ಕೋಟಿಗಟ್ಟಲೆ ಆದಾಯ ದೇಗುಲದ ಖಜಾನೆಗೆ ಸೇರಬೇಕಾಗಿರುವುದು ಟ್ರಸ್ಟ್ ನ ಖಜಾನೆ ಸೇರಿದೆ. ಟ್ರಸ್ಟ್ ತನ್ನ ಈ ಅಕ್ರಮ ಗಳಿಕೆಯಿಂದ ದೇಗುಲದಿಂದ 2 ಕಿ.ಮೀ ಅಂತರದಲ್ಲಿರುವ RSSನ ಪ್ರಭಾಕರ ಭಟ್ ಟ್ರಸ್ಟ್ ನ ಒಡೆತನದ ಖಾಸಗೀ ಶ್ರೀರಾಮ ಪ್ರೌಢ ಶಾಲೆಗೆ ಆರ್ಥಿಕ ಸಹಾಯ ನೀಡುತ್ತಿದೆಯೇ ಹೊರತು ಬಡ ಸರಕಾರೀ ಶಾಲೆಗಲ್ಲ. – ಶ್ಯಾಮರಾಜ್‌ ಪಟ್ರಮೆ,ಹೋರಾಟಗಾರರು.

ಸೌತಡ್ಕ ಶ್ರೀ ಮಹಾಗಣಪತಿ ಬಯಲು ಆಲಯ ಇದೀಗ ಸುದ್ದಿಯಾಗುತ್ತಿದೆ. ಆದರೆ ಧಾರ್ಮಿಕ ನೆಲೆಯಲ್ಲಿ ಅಲ್ಲ, ಕ್ಷೇತ್ರದಲ್ಲಾಗಿರುವ ಮಹಾವಂಚನೆಯೊಂದು ಬಯಲಾಗಿ ಸುದ್ದಿಯಾಗುತ್ತಿರುವುದಾಗಿದೆ. ಅದರಲ್ಲೂ ಈ ವಂಚನೆಯ ರೂವಾರಿಗಳಾಗಿ ಮೇಲ್ನೋಟಕ್ಕೇ ಹಿಂದೂ ಧರ್ಮ ರಕ್ಷಕರು, ಸಂಸ್ಕೃತಿ ರಕ್ಷಕರು, ದೇವಸ್ಥಾನ ರಕ್ಷಕರು ಎಂದೆಲ್ಲಾ ಸ್ವಯಂ ಘೋಷಿಸಿಕೊಳ್ಳುವವರೇ ಕಂಡುಬರುತ್ತಿದ್ದಾರೆ. ಈ ವಂಚನೆಯ ವಿರುದ್ಧ ಹೋರಾಟದ ವೇದಿಕೆಯೂ ರೂಪುಗೊಂಡಿದೆ. ದೇಗುಲಕ್ಕೆ ನ್ಯಾಯ ಸಿಗುವುದೋ ಇಲ್ಲವೋ ಎಂಬುದು ಮುಂದಿನ ದಿನಗಳಲ್ಲಷ್ಟೇ ಗೊತ್ತಾಗಬಹುದು.

ಏನಿದು ಪ್ರಕರಣ?

ಅತ್ಯಂತ ಶಾಂತವಾಗಿ, ಪ್ರಕೃತಿಯ ಮಡಿಲಲ್ಲಿ, ಗರ್ಭಗುಡಿ ರಹಿತವಾಗಿ ಎಲ್ಲರಿಗೂ ದರ್ಶನ ಒದಗಿಸುವ, ಕಳೆದ 20 ವರ್ಷಗಳಿಂದ ಭಕ್ತರ ಸಂಖ್ಯೆ ಹೆಚ್ಚಾಗಿ ಒಂದಷ್ಟು ಆಧುನಿಕತೆಯ ಸ್ಪರ್ಶಹೊಂದಿರುವ ʼಬಯಲು ಆಲಯ ಗಣಪʼ ಎಂದೇ ಪ್ರಸಿದ್ಧವಾಗಿರುವ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕ್ಷೇತ್ರವೇ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ. ಕಳೆದ 90 ರ ದಶಕದ ಪೂರ್ವಾರ್ಧದವರೆಗೂ ಜನ ವಿರಳತೆಯ, ಆಗೊಮ್ಮೆ ಈಗೊಮ್ಮೆ ಯಾರಾದರೂ ಪುರೋಹಿತರನ್ನು ಕರೆದುಕೊಂಡು ಹೋಗಿ ಹರಕೆ ತೀರಿಸುವ ಪದ್ಧತಿ ಅಷ್ಟೇ ಇತ್ತು. ಆ ನಂತರ ಸಮೀಪದ ಧರ್ಮಸ್ಥಳದ ಒಬ್ಬರು ಭಕ್ತರು ತನ್ನ ಸೇವೆಯ ಭಾಗವಾಗಿ ಅಲ್ಲಿಗೆ ಒಂದಷ್ಟು ಆಧುನಿಕತೆಯ ಸ್ಪರ್ಶ ನೀಡಿದ್ದರು.  ಆಗ ಪ್ರಾಕೃತಿಕ ಸೌಂದರ್ಯದ ಜೊತೆಗೆ ಆಧುನಿಕತೆಯ ಸೌಂದರ್ಯವನ್ನೂ ಹೊಂದುವಂತಾಗಿತ್ತು. ಆದರೂ ಆಗ ಆದಾಯ ಗಳಿಕೆಯಲ್ಲಿ ಕನಿಷ್ಟ ಮಟ್ಟದಲ್ಲಿದ್ದ ಅದನ್ನು ಮುನ್ನಡೆಸಲು ಯಾರೂ ಮುಂದೆ ಬಾರದೆ ಇದ್ದುದರಿಂದ 1995 ರಲ್ಲಿ ಮುಜುರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿಸಲ್ಪಟ್ಟಿತ್ತು.

ಸೌತಡ್ಕ ಶ್ರೀ ಮಹಾಗಣಪತಿ ಬಯಲು ಆಲಯ

ಕ್ರಮೇಣ ಅಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಏರತೊಡಗಿತು. ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳಲ್ಲಿ ಕೆಲವರು ಅಲ್ಲಿಗೆ ಭೇಟಿ ನೀಡಿಯೇ ಮರಳುವ ಪದ್ಧತಿ ಪ್ರಾರಂಭವಾಯ್ತು. ಇದರಿಂದಾಗಿ ಅಲ್ಲಿ ಭಕ್ತಾದಿಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಅಗತ್ಯ ಪೂಜಾ ಸಾಮಗ್ರಿಗಳ ಅಂಗಡಿಗಳು, ವಸತಿ ಗೃಹ ಇತ್ಯಾದಿಗಳೆಲ್ಲವನ್ನೂ ವ್ಯವಸ್ಥೆ ಮಾಡುವುದು ಅನಿವಾರ್ಯವಾಗಿತ್ತು. ಆದರೆ ಇದಕ್ಕೆ ಅಲ್ಲಿ ಸ್ಥಳಾವಕಾಶ ಇದ್ದಿರಲಿಲ್ಲ.

ಈ ಸಂದರ್ಭದಲ್ಲಿ ಅಂದರೆ 2004 ರ ಸುಮಾರಿಗೆ ದೇಗುಲದ ಜಮೀನಿಗೆ ತಾಗಿಕೊಂಡಿರುವ 3.46 ಎಕರೆ ಪಟ್ಟಾಸ್ಥಳ ಮಾರಾಟಕ್ಕಿದೆ ಎಂದು ತಿಳಿದು ಆಗಿನ ವ್ಯವಸ್ಥಾಪನಾ ಸಮಿತಿಯು ಆ ಜಮೀನು ಖರೀದಿಗೆ ಮುಂದಾದರೂ ದೇಗುಲದಲ್ಲಿ ಜಮೀನು ಖರೀದಿಸುವಷ್ಟು ಆರ್ಥಿಕ ಸಂಪನ್ಮೂಲ ಲಭ್ಯ ಇದ್ದಿರಲಿಲ್ಲ. ಹಾಗಂತ ಲಭ್ಯ ಆದ ಮೇಲೆ ಖರೀದಿ ಮಾಡೋಣವೆಂದರೆ ಈ ಜಮೀನು ಮಾರಾಟ ಆಗಿ ಹೋಗುತ್ತದೆ. ಇಂತಹಾ ಸಂದಿಗ್ಧತೆಯಲ್ಲಿ ವ್ಯವಸ್ಥಾಪನಾ ಸಮಿತಿಯು ತನ್ನ  ಮೂವರು ಸದಸ್ಯರ (ಅಧ್ಯಕ್ಷರು ಮತ್ತು ಈರ್ವರು ಸದಸ್ಯರು) ಖಾಸಗೀ ಜಮೀನುಗಳನ್ನು ಸಮೀಪದ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಅಡವಿಟ್ಟು ಸಾಲ ಮಾಡಿ  ಅವರ ಹೆಸರುಗಳಲ್ಲಿ ಸದ್ರಿ ಜಮೀನನ್ನು ಖರೀದಿಸಲು ಯೋಜನೆ ರೂಪಿಸಿದರು. ಮಾರಾಟಕ್ಕಿದ್ದ ಜಮೀನನ್ನು ಮೂರು ವಿಭಾಗ ಮಾಡಿ ಒಬ್ಬರ ಹೆಸರಲ್ಲಿ 1.23 ಎಕರೆ, ಮತ್ತೊಬ್ಬರ ಹೆಸರಲ್ಲಿ1.23 ಎಕರೆ ಮತ್ತು ಇನ್ನೋರ್ವರ ಹೆಸರಲ್ಲಿ1.00 ಎಕರೆಯಂತೆ ಖರೀದಿಸಲಾಗಿತ್ತು. ಆ ಸಾಲವನ್ನು ದೇವಸ್ಥಾನದ ಆದಾಯದಿಂದ ಸಂದಾಯ ಮಾಡಿದ ನಂತರ ಜಮೀನನ್ನು ದೇಗುಲದ ಹೆಸರಿಗೆ ವರ್ಗಾಯಿಸುವ ಷರತ್ತಿನ ಮೇಲೆ ಈ ಪ್ರಕ್ರಿಯೆ ನಡೆದಿತ್ತು.

ಆ ನಂತರದಲ್ಲಿ ಆ ಸಾಲವನ್ನು ದೇಗುಲದ ಖಜಾನೆಯಿಂದಲೇ ಮರುಪಾವತಿಸಿ ಚುಕ್ತಾ ಮಾಡಲಾಗಿತ್ತು. ಸುಮಾರು 2 ವರ್ಷಗಳಲ್ಲಿ ದೇವಸ್ಥಾನದ ಭಕ್ತರ ದೇಣಿಗೆಯಿಂದಲೇ ಆ ಬ್ಯಾಂಕ್ ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಲಾಗಿತ್ತು. ಆದರೆ ಆ ನಂತರವೂ ಸದ್ರಿ ಜಮೀನುಗಳನ್ನು ದೇಗುಲದ ಹೆಸರಿಗೆ ವರ್ಗಾಯಿಸದೇ ಇದ್ದುದರ ವಿರುದ್ಧ ಅಲ್ಲಲ್ಲಿ ದೇಗುಲದ ಭಕ್ತರ ಅಸಮಾಧಾನ ಭುಗಿಲೆದ್ದಿತ್ತು. ಯಾಕೆಂದರೆ ದೇಗುಲಕ್ಕೆಂದು ದೇಗುಲದ ಹಣದಲ್ಲಿ ಖರೀದಿಸಲಾದ ಜಮೀನುಗಳನ್ನು ಸಾಲ ಮರುಪಾವತಿ ನಂತರವೂ ಖಾಸಗೀ ಹೆಸರುಗಳಲ್ಲೇ ಬಾಕಿ ಇಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಆಗ ಆಗಿನ ವ್ಯವಸ್ಥಾಪನಾ ಸಮಿತಿಯು ಭಕ್ತರನ್ನೂ ಕರೆದು ಸಭೆ ನಡೆಸಲಾಗಿ ಸಭೆಯಲ್ಲಿ “ಸದ್ರಿ ಜಮೀನು ದೇಗುಲಕ್ಕಾಗಿಯೇ ಖರೀದಿಸಿದ್ದಾಗಿದ್ದು, ಅದೆಂದಿಗೂ ದೇಗುಲಕ್ಕೇ ಮೀಸಲು. ಸದ್ಯದಲ್ಲೇ ಅದನ್ನು ದೇಗುಲದ ಹೆಸರಿಗೆ ಗಿಫ್ಟ್ ಡೀಡ್ ಮಾಡಿಕೊಳ್ಳಲಾಗುತ್ತದೆ….” ಎಂದು ಸ್ಪಷ್ಟೀಕರಣ ನೀಡಲಾಗಿ ಸಮಾಧಾನಿಸಿದ್ದರು. ಇದು ಅಂದಿನ ಪತ್ರಿಕೆಗಳಲ್ಲೆಲ್ಲ ವರದಿಯೂ ಆಗಿತ್ತು.

 ಆ ನಂತರ ಬೆಳ್ತಂಗಡಿ ಸಬ್ ರಿಜಿಸ್ಟಾರ್ ಕಚೇರಿಗೆ ಜಮೀನುಗಳನ್ನು ದೇಗುಲದ ಹೆಸರಿಗೆ ಮಾಡಿಕೊಳ್ಳುವ ಉದ್ದೇಶಕ್ಕಾಗಿ ತೆರಳಿದಾಗ ” ಕೃಷಿ ಭೂಮಿಯನ್ನು ದೇಗುಲದ ಹೆಸರಿಗೆ ಬದಲಾಯಿಸಲು ಕಾನೂನಿನಲ್ಲಿ ಅವಕಾಶ ಇಲ್ಲ” ಎಂದಿದ್ದರು. ಇದರಿಂದಾಗಿ ವ್ಯವಸ್ಥಾಪನಾ ಸಮಿತಿಯು ಮತ್ತೆ ಸಂದಿಗ್ಧತೆಗೆ ಸಿಲುಕಿತ್ತು. ಖರೀದಿಸಲಾಗಿದ್ದ ಜಮೀನಿನಲ್ಲಿ ದೇಗುಲದ ಅಗತ್ಯಕ್ಕೆ ತಕ್ಕಂತೆ ದೇಗುಲದ ಹಣದಲ್ಲಿ ಅಂಗಡಿ ಕಟ್ಟಡಗಳು, ವಸತಿಗೃಹ, ಪಾರ್ಕಿಂಗ್ ವ್ಯವಸ್ಥೆ ಎಲ್ಲವನ್ನೂ ಮಾಡಲಾಗಿತ್ತು. ಸ್ವಲ್ಪ ರಬ್ಬರ್ ಕೃಷಿ ಜಮೀನಿನಲ್ಲಿತ್ತು, ಅದರ ಆದಾಯವೂ ದೇಗುಲಕ್ಕೆ ಸಿಗುತ್ತಿತ್ತು.  ಆದರೆ ದೇಗುಲದ ಹೆಸರಿಗೆ ವರ್ಗಾಯಿಸಿಕೊಳ್ಳಲು ಕಾನೂನಿನ ತೊಡಕು ಎದುರಾಗಿತ್ತು.

ಆ ನಂತರ ಅಂದರೆ 2009 ರ ಸುಮಾರಿಗೆ “ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ” ಒಂದನ್ನು ರಚಿಸಿಕೊಂಡು, ಅದಕ್ಕೆ 7 ಜನ ಟ್ರಸ್ಟಿಗಳನ್ನೂ ಮಾಡಿ, ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಅಧ್ಯಕ್ಷರನ್ನಾಗಿ ಸ್ಥಳೀಯ RSS ಪ್ರಮುಖರೊಬ್ಬರನ್ನು ಮಾಡಲಾಗಿತ್ತು. ಟ್ರಸ್ಟಿಗಳಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ, ಕೆಲವು ಸದಸ್ಯರೂ ಸೇರಿದ್ದರು. ಹೊರಗಿನವರೂ ಇದ್ದರು.

ಈ ಟ್ರಸ್ಟನ್ನು ಬೆಳ್ತಂಗಡಿ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೊಂದಾವಣೆ ಮಾಡಿಸಲಾಗಿತ್ತು ಮತ್ತು ಅದೇ ದಿನವೇ ಜಮೀನು ಖರೀದಿಯಲ್ಲಿನ ಮೂವರಲ್ಲಿ ಒಬ್ಬರು ತನ್ನ ಹೆಸರಿನ ಜಮೀನು ತನ್ನ ಮರಣಾ ನಂತರ ಸದ್ರಿ ಟ್ರಸ್ಟ್ ಗೆ ಸೇರತಕ್ಕದ್ದು ಎಂದು ಮರಣಶಾಸನವನ್ನೂ ರಿಜಿಸ್ಟರ್ ಮಾಡಿಸಿದ್ದರು.

ಆ ನಂತರ ವ್ಯವಸ್ಥಾಪನಾ ಸಮಿತಿ ಬದಲಾಯಿತು, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿದ್ದವರೇ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿಯೂ ಆಯ್ಕೆ ಆದರು. ಆಗ ಅವರು ಮಾಡಿದ್ದ ಆವಾಂತರವೆಂದರೆ  ಸದ್ರಿ ಟ್ರಸ್ಟನ್ನು ದೇಗುಲದಿಂದ ಪ್ರತ್ಯೇಕಿಸಿ ಖಾಸಗೀ ಟ್ರಸ್ಟನ್ನಾಗಿ ಮಾಡಿ, ದೇವಸ್ಥಾನದ ಆಡಳಿತಕ್ಕೂ ಟ್ರಸ್ಟಿಗೂ ಸಂಬಂಧ ಇಲ್ಲದಂತೆ ಮಾಡಿದ್ದು. ಇದರಿಂದಾಗಿ ಟ್ರಸ್ಟ್ ಸ್ವಾಧೀನದಲ್ಲೇ ಬಾಕಿ ಉಳಿದಿದ್ದ ಖರೀದಿಸಲ್ಪಟ್ಟಿದ್ದ ಜಮೀನಿನಲ್ಲಿ ದೇಗುಲದ ಹಣದಲ್ಲಿ ನಿರ್ಮಿಸಲಾಗಿದ್ದ ಅಂಗಡಿಗಳ ಬಾಡಿಗೆ, ವಸತಿಗೃಹ ಬಾಡಿಗೆ, ಜಮೀನಿನಲ್ಲಿದ್ದ ರಬ್ಬರ್ ಕೃಷಿ ಆದಾಯ ಎಲ್ಲವೂ ಟ್ರಸ್ಟ್ ಖಾತೆಗೆ ಸೇರುವಂತಾಗಿತ್ತು ಮತ್ತು ದೇಗುಲಕ್ಕೆ ನಷ್ಟ ಆಗುವಂತಾಯಿತು.

 2014 ರ ಅಕ್ಟೋಬರ್ ನಲ್ಲಿ ತನ್ನ ಹೆಸರಿನಲ್ಲಿ ಖರೀದಿಸಿದ್ದ ಜಮೀನಿಗೆ ಮರಣ ಶಾಸನ ಬರೆದಿಟ್ಟವರು ಮೃತಪಟ್ಟರು. ಆಗ ಅವರ ಹೆಸರಿನಲ್ಲಿದ್ದ 1.23 ಎಕರೆ ಜಮೀನನ್ನು ಮರಣಶಾಸನದ ಅನುಸಾರ ನೇರವಾಗಿ ಟ್ರಸ್ಟ್ ಹೆಸರಿಗೆ ವರ್ಗಾಯಿಸಿಕೊಳ್ಳಲಾಯಿತು.

ಆ ನಂತರ 2017 ರಲ್ಲಿ ಮತ್ತೆ ಬದಲಾದ ವ್ಯವಸ್ಥಾಪನಾ ಸಮಿತಿಯು ಸದ್ರಿ ಜಮೀನುಗಳನ್ನು ದೇಗುಲಕ್ಕೆ ದಾನ ಶಾಸನದ ಮೂಲಕ ಮಾಡಿಕೊಳ್ಳಲು ಹೊರಟಾಗ ಇದು ಮುಜುರಾಯಿ ಇಲಾಖೆಗೆ ಸೇರಿರುವುದರಿಂದ ಮುಜುರಾಯಿ ಇಲಾಖೆಯ, ಜಿಲ್ಲಾಧಿಕಾರಿಗಳ ಅನುಮತಿ ಬೇಕಾಗುತ್ತದೆ ಎಂದು ಗೊತ್ತಾಯಿತು. ಅದಕ್ಕಾಗಿ  ಜಿಲ್ಲಾಧಿಕಾರಿಗಳಿಗೆ, ಧಾರ್ಮಿಕ ದತ್ತಿ ಇಲಾಖೆಗೆ ಅನುಮತಿ  ಕೇಳಿ ಮನವಿ ಬರೆಯಲಾಯಿತು. ಆದರೆ ಎರಡು ವರ್ಷಗಳು ಕಳೆದರೂ ಅನುಮತಿ ಬಂದಿರಲಿಲ್ಲ. ಅದಕ್ಕಾಗಿ ಜಮೀನು ದಾಖಲಾಗಿದ್ದ ಇಬ್ಬರ (ಮತ್ತೊಬ್ಬರದ್ದು ಮರಣ ಶಾಸನ ಮೂಲಕ ಟ್ರಸ್ಟ್ ಗೆ ಸೇರಿ ಆಗಿತ್ತು) ಹೆಸರಿನಲ್ಲೂ ದೇಗುಲಕ್ಕೆ ದಾನ ಶಾಸನ ಬರೆಯಿಸಿಕೊಂಡರು. ನಂತರ ಆ ಸಮಿತಿಯ ಅಧಿಕಾರಾವಧಿಯೂ ಕೊನೆಯಾಗಿ ಮತ್ತೆ ವ್ಯವಸ್ಥಾಪನಾ ಸಮಿತಿ ಬದಲಾಯಿತು. ಈಗ ಮತ್ತೆ 2010 ರಲ್ಲಿ ಅಧ್ಯಕ್ಷರಾದವರೇ (ಆ ಟ್ರಸ್ಟ್ ನ ಅಧ್ಯಕ್ಷರೇ) ಅಧ್ಯಕ್ಷರಾಗಿ ಆಯ್ಕೆ ಆದರು. ಪ್ರಸ್ತುತ ಇವರ ವ್ಯವಸ್ಥಾಪನಾ ಸಮಿತಿಯ ಅಧಿಕಾರಾವಧಿಯೂ ಮುಗಿದಿದೆ, ಹೊಸ ಸಮಿತಿ ರಚನೆ ಪ್ರಕ್ರಿಯೆ ಚಾಲನೆಯಲ್ಲಿದೆ.

ವೇದಿಕೆಯ ಸಭೆ

ಆದರೆ ಇದೀಗ, ಜಮೀನು ಖರೀದಿ  ಹೆಸರುಗಳಲ್ಲಿ ಪಾಲುದಾರರಾದ ಮೂವರಲ್ಲಿ ಮತ್ತೋರ್ವರು ಮಾತು ಉಲ್ಲಂಘಿಸಿ, ದೇಗುಲಕ್ಕೇ ವಂಚಿಸಿ, ತನ್ನ ಹೆಸರಿನ ದೇಗುಲದ ಜಮೀನನ್ನು ದೂರದ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ರಭಾಕರ ಭಟ್ ರ ವಿವೇಕಾನಂದ ಟ್ರಸ್ಟ್ ಗೆ ವರ್ಗಾಯಿಸಿದ್ದಾರೆ !  ಇದರಿಂದ ದೇಗುಲಕ್ಕಾಗಿ ಖರೀದಿಸಿದ್ದ ಇಬ್ಬರ ಹೆಸರಿನ ಜಮೀನುಗಳು ದೇಗುಲದಿಂದ ಕೈತಪ್ಪುವಂತಾಯಿತು. ಇನ್ನು ಉಳಿದ ಒಬ್ಬರು ಮಾತ್ರ ತಾನು ದೇಗುಲಕ್ಕೇ ಕೊಡುವುದಾಗಿ ಹೇಳುತ್ತಿದ್ದಾರೆ.

ಇದೀಗ ಈ ಜಮೀನು ವಂಚನೆ ವಿರುದ್ಧ ಭಕ್ತರ ಆಕ್ರೋಶ ಹೆಚ್ಚುತ್ತಿದೆ. ದೇಗುಲದ ಜಮೀನು ಮರಳಿ ದೇಗುಲಕ್ಕೇ ಸಿಗುವಂತಾಗಲು ಹೋರಾಟದ ವೇದಿಕೆಯೊಂದು ರಚನೆಗೊಂಡಿದೆ. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಎಂಬ ಹೆಸರಿನಲ್ಲಿ ವೇದಿಕೆ ರಚನೆಯಾಗಿದೆ. ಸದ್ರಿ ಜಮೀನುಗಳನ್ನು ದೇಗುಲಕ್ಕೇ ವರ್ಗಾಯಿಸಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಇರುವ ಶ್ರೀ ಸುಬ್ರಹ್ಮಣ್ಯ ಶಬರಾಯರು ವೇದಿಕೆಯ ಅಧ್ಯಕ್ಷರಾಗಿದ್ದಾರೆ. ದೇಗುಲಕ್ಕಾಗಿನ ಜಮೀನು ಖರೀದಿದಾರರಲ್ಲೊಬ್ಬರೂ ಈ ಹೋರಾಟದ ವೇದಿಕೆಯಲ್ಲಿದ್ದಾರೆ. ನವೆಂಬರ್ 5 ರಂದು ಮಂಗಳೂರಿನಲ್ಲಿ ಈ ಬಗ್ಗೆ ಜಿಲ್ಲಾ ಮಟ್ಟದ ಪತ್ರಿಕಾಗೋಷ್ಟಿ ನಡೆಯಲಿದೆ. ಧಾರ್ಮಿಕ ದತ್ತಿ ಸಚಿವರಿಗೆ ಮನವಿ ನೀಡಲಾಗುತ್ತಿದೆ. ನವೆಂಬರ್ 11 ರಿಂದ ಸೌತಡ್ಕ ದೇವಸ್ಥಾನದ ಎದುರು ವೇದಿಕೆಯ ನೇತೃತ್ವದಲ್ಲಿ ಅನಿರ್ಧಿಷ್ಟ ಧರಣಿ ಪ್ರಾರಂಭವಾಗಲಿದೆ. ಸ್ಥಳೀಯ ಮಾತ್ರವಲ್ಲದೆ ಆಸುಪಾಸಿನ ಬಹಳಷ್ಟು ಭಕ್ತರು ಬೆಂಬಲಿಸುತ್ತಿದ್ದಾರೆ. ನ್ಯಾಯ ಪಡೆಯುವಲ್ಲಿ ಯಶಸ್ಸು ಸಿಗುವುದೇ ಇಲ್ಲವೇ ಎಂಬ ಬಗ್ಗೆ ಕಾದು ನೋಡಬೇಕಿದೆ.

ಶ್ಯಾಮರಾಜ್‌ ಪಟ್ರಮೆ

ಹೋರಾಟಗಾರರು

ಇದನ್ನೂ ಓದಿ- ಏನಿದು ವಕ್ಫ್ ತಿದ್ದುಪಡಿ ಕಾಯ್ದೆ?ಯಾಕೆ ಇಷ್ಟು ವಿರೋಧ ? 

More articles

Latest article