ಮುಡಾ ಬದಲಿ ನಿವೇಶನ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿರುವ ಅರ್ಜಿ ಹೈಕೋರ್ಟ್‌ನಲ್ಲಿ ಮತ್ತೆ ಶನಿವಾರ ವಿಚಾರಣೆಗೆ ಬರುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಅದೇ ದಿನ ರಾಜಭವನ ಚಲೋ ಹಮ್ಮಿಕೊಂಡಿದೆ.
ವಿಧಾನಸೌಧ ಆವರಣದ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿಯಿಂದ ಸಚಿವರು, ಕಾಂಗ್ರೆಸ್ ಶಾಸಕರು, ಮೇಲ್ಮನೆ ಸದಸ್ಯರು ಹಾಗೂ ಸಂಸದರು ರಾಜಭವನದವರೆಗೆ ಕಾಲ್ನಡಿಗೆಯಲ್ಲಿ ತೆರಳಲಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಜನಾರ್ದನ ರೆಡ್ಡಿ ವಿರುದ್ಧದ ಪ್ರಾಸಿಕ್ಯೂಷನ್ ಕೋರಿಕೆ ಅರ್ಜಿಗಳ ಬಗ್ಗೆ ತೀರ್ಮಾನ ಪ್ರಕಟಿಸುವಂತೆ ರಾಜ್ಯಪಾಲರಿಗೆ ಒತ್ತಾಯಿಸಲಾಗುತ್ತಿದೆ.
ಶನಿವಾರ ಬೆಳಗ್ಗೆ 10.30ಕ್ಕೆ ಶುರುವಾಗಲಿರುವ ‘ರಾಜಭವನ ಚಲೋ’ ಹೋರಾಟಕ್ಕೆ ಡಿಸಿಎಂ ಡಿ. ಕೆ. ಶಿವಕುಮಾರ್ ನೇತೃತ್ವ ವಹಿಸುವ ಸಾಧ್ಯತೆ ಇದ್ದು, ಸಿಎಂ ಸಿದ್ದರಾಮಯ್ಯ ಗೈರಾಗುವ ಸಾಧ್ಯತೆಯಿದೆ. ಎಲ್ಲ ಸಚಿವರು, ಶಾಸಕರು ಹೋರಾಟದಲ್ಲಿ ಭಾಗಿಯಾಗುವಂತೆ ಸಿಎಂ ಕೂಡ ಸೂಚನೆ ನೀಡಿದ್ದಾರೆ.
ಎಚ್‌ಡಿಕೆ, ನಿರಾಣಿ, ಜನಾರ್ಧನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಬಾಕಿ ಇರುವ ಪ್ರಕರಣಗಳಲ್ಲಿ ವಿಚಾರಣೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಸಲಹೆ ಮಾಡುವ ನಿರ್ಣಯವನ್ನು ಸಂಪುಟ ಸಭೆ ಕಳೆದ ವಾರ ಅಂಗೀಕರಿಸಿ ಕಳಿಸಿ ಕೊಟ್ಟಿತ್ತು. ಇದಕ್ಕೆ ರಾಜಭವನ ಸ್ಪಂದಿಸದ ಕಾರಣ ರಾಜಕೀಯ ಹೋರಾಟ ತೀವ್ರಗೊಳಿಸಲು ಕಾಂಗ್ರೆಸ್ ಮುಂದಾಗಿದೆ.