ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ 6000 ಗ್ರಾಮಪಂಚಾಯಿತಿಗಳಿಗೆ ಮಹಾತ್ಮಗಾಂಧಿ ಹೆಸರನ್ನು ನಾಮಕರಣ ಮಾಡಲಾಗುವುದು ಮತ್ತು ಮುಂದಿನ ಬಜೆಟ್ನಲ್ಲಿಯೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅವರು ಇಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ “ಮನರೇಗಾಬಚಾವೋ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಾತ್ಮಗಾಂಧಿ ಹೆಸರು ಕೇಳಿದರೆ ಬಿಜೆಪಿಯವರಿಗೆ ಆಗುವುದಿಲ್ಲ. ದುರುದ್ದೇಶದಿಂದ ಮನ್ ರೇಗಾ ಹೆಸರು ಬದಲಾವಣೆ ಮಾಡಿ ‘ವಿಬಿ ಜೀ ರಾಮ್ ಜೀ’ ಎಂದು ಹೆಸರಿಟ್ಟಿದ್ದಾರೆ. ಮಹಾತ್ಮಾ ಗಾಂಧಿ ನರೇಗಾ ಯೋಜನೆಯಲ್ಲಿ ರಾಮ ಅನ್ನೋ ಹೆಸರು ಬರುವ ರೀತಿ ಯೋಜನೆ ರೂಪಿಸಿದ್ದಾರೆ. ದಶರಥ ರಾಮ ಇಲ್ಲ ಕೌಶಲ್ಯ ರಾಮ ಇಲ್ಲ ಸೀತಾ ರಾಮ ಸಹ ಇಲ್ಲ. ಈ ಕಾಯ್ದೆಯಲ್ಲಿ ರಾಮ ಇಲ್ಲ. ಬಡವರು ದಲಿತರು, ರೈತರ ಬಗ್ಗೆ ಚಿಂತಿಸುವುದು ಕಾಂಗ್ರೆಸ್ ಮಾತ್ರ. ಬಡವರ ಬಗ್ಗೆ ಮಾತಾಡುವುದು ಕಾಂಗ್ರೆಸ್ ಮಾತ್ರ ಎಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
RSS ಮಾರ್ಗದರ್ಶನದಂತೆ ಬಡವರ ಕಾರ್ಯಕ್ರಮಗಳನ್ನ ಬಿಜೆಪಿಯವರು ರದ್ದು ಮಾಡಿದ್ದಾರೆ. ಆರ್ ಎಸ್ ಎಸ್ ನವರಿಗೆ ಬಡವರು ಮುಖ್ಯವಾಹಿನಿಗೆ ಬರುವುದು ಬೇಕಾಗಿಲ್ಲ. ಬಡವರು ಬಡವರಾಗಿಯೇ ಉಳಿದು ಸದಾಕಾಲ ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ ಸಿದ್ಧಾಂತವಾಗಿದೆ. ಬಡವರ ವಿರೋಧಿ ಬಿಜೆಪಿ ಬಡವರ ಪರವಾದ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಗೊಳಿಸುತ್ತಿದೆ ಎಂದು ಅವರು ಟೀಕಿಸಿದರು.
ಆರ್ಎಸ್ಎಸ್ನ ಗೋಡ್ಸೆ ಗಾಂಧೀಜಿ ಅವರನ್ನು ಕೊಂದು ಹಾಕಿದ. ಈಗ ಅದೇ ಸಂಘ ಪರಿವಾರದ ಕುಮ್ಮಕ್ಕಿನಿಂದಲೇ ಎರಡನೇ ಬಾರಿ ಹತ್ಯೆ ಮಾಡಿದ್ದಾರೆ. ಗಾಂಧೀಜಿ ಅವರ ಶ್ರಮ ಸಂಸ್ಕೃತಿಯ ಪ್ರತೀಕದಂತಿರುವ ಮನರೇಗಾ ಯೋಜನೆ ರದ್ದುಪಡಿಸಿ ಹೊಸ ಕಾಯ್ದೆ ತಂದಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಗಾಂಧೀಜಿ ಅವರ ಹೆಸರನ್ನು ಪಂಚಾಯಿತಿಗಳಿಗೆ ನಾಮಕರಣ ಮಾಡಲಿದೆ ಎಂದು ಘೋಷಿಸಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೂ ಸಹ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು. ಹೊಸ ಕಾಯಿದೆ ಪ್ರಕಾರ ಗ್ರಾಮಪಂಚಾಯಿತಿಗಳಿಗೆ ಯೋಜನೆ ರೂಪಿಸುವ ಅಧಿಕಾರವೇ ಇಲ್ಲ. ನರೇಗಾ ಯೋಜನೆಯಡಿಯಲ್ಲಿ ಗ್ರಾಮಪಂಚಾಯಿತಿಗಳೇ ಉದ್ಯೋಗ ಬೇಡಿಕೆ ಆಧರಿಸಿ ಯೋಜನೆ ರೂಪಿಸಿ ವಾರ್ಷಿಕ ಅನುದಾನ ಪಡೆಯಲು ಅವಕಶವಿತ್ತು. ಕೇಂದ್ರ ಸರ್ಕಾರವೇ ದೆಹಲಿಯಲ್ಲಿ ಕುಳಿತು ಯೋಜನೆ ರೂಪಿಸಿಲಿದೆ ಎಂದು ಹೇಳಿದರು.
ವಿಬಿ-ರಾಮ್-ಜಿ ಯೋಜನೆ ರದ್ದು ಹಾಗೂ ನರೇಗಾ ಮರು ಜಾರಿ ಮಾಡಬೇಕು ಎಂದು ಅಗ್ರಹಿಸಿ ಕೆಪಿಸಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ್ದ ಪ್ರತಿಭಟನೆ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ ಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ, ಸಚಿವರಾದ ಚೆಲುವರಾಯ ಸ್ವಾಮಿ, ಕೆಜೆ ಜಾರ್ಜ್, ಮಹದೇವಪ್ಪ, ದಿನೇಶ್ ಗೂಂಡುರಾವ್, ಶರಣ ಪ್ರಕಾಶ್ ಪಾಟೀಲ್, ಎನ್ ಎಸ್ ಬೋಸರಾಜು, ಶಿವರಾಜ್ ತಂಗಡಗೆ, ಕೆ ಹೆಚ್ ಮುನಿಯಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಚಿವರಾದ ಕೆ ಜೆ ಜಾರ್ಜ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಮ್ ಅಹ್ಮದ್, ಎಐಸಿಸಿ ಕಾರ್ಯದರ್ಶಿ ಬಿ ವಿ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.
ನಂತರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನೇತೃತ್ಬದಲ್ಲಿ ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

