ಪ್ರಣಾಳಿಕೆಯು ಸರ್ವರ ಏಳಿಗೆಯ ದೃಷ್ಟಿಯಿಂದ ದೂರರ್ಶಿತ್ವವನ್ನು ಹೊಂದಿದೆ. ನಿಜ ಅರ್ಥದಲ್ಲಿ ಇಲ್ಲಿ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಪರಿಕಲ್ಪನೆ ಇದೆ – ಶ್ರೀನಿವಾಸ ಕಾರ್ಕಳ
ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಇಂದು (ಎಪ್ರಿಲ್ 6, 2024) ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಣಾಳಿಕೆ ಕರಡು ತಯಾರಿ ಸಮಿತಿಯ ಮುಖ್ಯಸ್ಥ ಪಿ ಚಿದಂಬರಂ, ಸಂಘಟನಾ ಜನರಲ್ ಸೆಕ್ರೆಟರಿ ಕೆ ಸಿ ವೇಣುಗೋಪಾಲ್, ವಕ್ತಾರ ಪವನ್ ಖೇರಾ ಅವರ ಸಮ್ಮುಖದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ 2024 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರವಸೆಗಳ ಪ್ರಣಾಳಿಕೆ ‘ನ್ಯಾಯ ಪತ್ರ’ ಬಿಡುಗಡೆಯಾಯಿತು. ಬಲಪಂಥೀಯ ರಾಜಕಾರಣ ದೇಶದಲ್ಲಿ ಉಂಟು ಮಾಡಿರುವ ಭಯದ ವಾತಾವರಣದ ಹಿನ್ನೆಲೆಯಲ್ಲಿ, ವಿಶೇಷವಾಗಿ ಭಯದಿಂದ ಮುಕ್ತಿ, ಆಹಾರ, ಉಡುಗೆ, ಪ್ರೀತಿ, ಮದುವೆ ಇತ್ಯಾದಿ ಖಾಸಗಿ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸದಿರುವ ಸ್ವಾತಂತ್ರ್ಯದ ಭರವಸೆಯನ್ನು ಈ ಪ್ರಣಾಳಿಕೆ ನೀಡಿದೆ.
48 ಪುಟಗಳ ಈ ನ್ಯಾಯಪತ್ರವು ವಿಶೇಷವಾಗಿ ಯುವಜನರು, ರೈತರು, ಹಿಂದುಳಿದ ಜಾತಿಗಳು, ಮಹಿಳೆಯರು ಹೀಗೆ ದೇಶದ ಜನಸಾಮಾನ್ಯರು ಸದ್ಯ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅಧಿಕಾರದಲ್ಲಿರುವ ಸರಕಾರ ನಡೆಸಿರುವ ಕಾನೂನು ಅತಿರೇಕಗಳನ್ನು ಗಮನದಲ್ಲಿರಿಸಿಕೊಂಡು ಅನೇಕ ವಿಷಯಗಳನ್ನು ಪ್ರಸ್ತಾಪಿಸಿದೆ. ಐದು ನ್ಯಾಯಗಳ ಮೂಲಕ, ಹೆಚ್ಚಿನ ಸ್ವಾತಂತ್ರ್ಯ, ವೇಗದ ಬೆಳೆವಣಿಗೆ, ಸಮನ್ಯಾಯದ ಅಭಿವೃದ್ಧಿ ಮತ್ತು ನ್ಯಾಯದೆಡೆಗೆ ಗಮನ ಕೇಂದ್ರೀಕರಿಸಿರುವ ಇದರಡಿಯಲ್ಲಿ ಮತ್ತೆ 25 ಗ್ಯಾರಂಟಿಗಳನ್ನು ಜನರ ಮುಂದಿಡಲಾಗಿದೆ.
ವಿಶೇಷವಾಗಿ ಮೀಸಲಾತಿ ಮಿತಿಯನ್ನು ಹೆಚ್ಚಿಸುವುದಾಗಿಯೂ, ಆರ್ಥಿಕವಾಗಿ ಹಿಂದುಳಿದವರಿಗಾಗಿರುವ ಅನುಕೂಲಗಳನ್ನು ಇತರ ಜಾತಿಗಳಿಗೂ ವಿಸ್ತರಿಸುವುದಾಗಿ ಹೇಳಿರುವ ಅದು, ಕನಿಷ್ಠ ವೇತನವನ್ನು 400 ರುಪಾಯಿಗೆ ಹೆಚ್ಚಿಸುವುದಾಗಿ ಹೇಳಿದೆ. ವಿದ್ಯಾರ್ಥಿಗಳ ಸಾಲವನ್ನು ಮನ್ನಾ ಮಾಡುವುದು, ಸಾರ್ವಜನಿಕ ವಲಯದಲ್ಲಿ ಗುತ್ತಿಗೆ ಕೆಲಸಗಳನ್ನು ರದ್ದುಗೊಳಿಸುವುದು ಇಲ್ಲಿನ ಇತರ ಪ್ರಮುಖ ಭರವಸೆಗಳು.
ಅಗ್ನಿಪಥ ಯೋಜನೆ ರದ್ದು
ಅಗ್ನಿಪಥ ಯೋಜನೆ ಉದ್ಯೋಗಾಕಾಂಕ್ಷಿ ಯುವಜನರಲ್ಲಿ ತೀವ್ರ ಅಸಹನೆಗೆ ಕಾರಣವಾಗಿರುವುದು ರಾಹುಲ್ ಅವರ ಭಾರತ ಜೋಡೋ ಯಾತ್ರಾ ಸಮಯದಲ್ಲಿ ಬಹಿರಂಗಗೊಂಡಿತ್ತು. ಆ ಬಗ್ಗೆ ರಾಹುಲ್ ಅನೇಕ ಬಾರಿ ಮಾತನಾಡಿದ್ದು, ಮೋದಿ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದೇ ಹಿನ್ನೆಲೆಯಲ್ಲಿ, ಆ ಯೋಜನೆಯನ್ನು ರದ್ದುಗೊಳಿಸಿ ಹಿಂದಿನ ವ್ಯವಸ್ಥೆಗೆ ಮರಳುವುದಾಗಿ ಪ್ರಣಾಳಿಕೆ ಹೇಳಿದೆ.
ಕೇಂದ್ರೀಯ ಏಜನ್ಸಿಗಳ ಅತಿರೇಕದ ಕ್ರಮಗಳು ಈಗ ತೀವ್ರ ಚಿಂತೆಯ ಸಂಗತಿಗಳಾಗಿದ್ದು, ಈ ಹಿನ್ನೆಲೆಯಲ್ಲಿ ಕಾನೂನುಗಳನ್ನು ಶಸ್ತ್ರಾಸ್ತ್ರದಂತೆ ಬಳಸುವುದು, ಮನಬಂದಂತೆ ಹುಡುಕಾಟ (ಸರ್ಚ್) ಮತ್ತು ಬಂಧನ, ‘ಬುಲ್ಡೋಜರ್ ನ್ಯಾಯ’ ಇವನ್ನು ಕೊನೆಗೊಳಿಸುವುದಾಗಿ ಪ್ರಣಾಳಿಕೆ ಹೇಳಿದೆ. bail is the rule and jail is the exception (ಜಾಮೀನು ಒಂದು ಹಕ್ಕು) ಎಂಬ ಕಾನೂನು ತರುವುದು, ಒಂದು ದೇಶ ಒಂದು ಚುನಾವಣೆ ತಿರಸ್ಕಾರ, ಪಕ್ಷಾಂತರ ಮಾಡುವವರು ಅಟೋಮಾಟಿಕ್ ಅಗಿ ಅನರ್ಹಗೊಳ್ಳುವಂತೆ ಸಂವಿಧಾನ ತಿದ್ದುಪಡಿ ಮೊದಲಾದವು ಇಲ್ಲಿನ ಇತರ ಭರವಸೆಗಳು.
ದುಡಿಮೆ, ಸಂಪತ್ತು ಮತ್ತು ಕಲ್ಯಾಣ ಆಧರಿತ ಆರ್ಥಿಕ ತತ್ವವನ್ನು ಹೇಳಿರುವ ಅದು ಉದ್ಯೋಗ ನೀಡಿಕೆ, ಸಂಪತ್ತು ಸೃಷ್ಟಿ, ಕಲ್ಯಾಣ ಕ್ರಮಗಳ ಜಾರಿಯ ಬಗ್ಗೆ ಹೇಳಿದೆ.
370 ನೇ ಪರಿಚ್ಛೇಧ ಮರು ಸ್ಥಾಪನೆಯ ಬಗ್ಗೆ ಏನೂ ಹೇಳಿರದಿದ್ದರೂ ಅದು ಜಮ್ಮು ಕಾಶ್ಮೀರಕ್ಕೆ ತಕ್ಷಣ ರಾಜ್ಯ ಸ್ಥಾನಮಾನ ಕೊಡುವುದಾಗಿ ಹೇಳಿದೆ.
ಜಾತಿ ಜನಗಣತಿ
ಸರ್ವರಿಗೂ ಸಮಪಾಲು ಮತ್ತು ಸಮನ್ಯಾಯ ಒದಗಿಸಲು ಮೊದಲು ಜಾತಿ ಜನಗಣತಿ ನಡೆಸುವೆ, ಜಮೀನು ವಿಷಯ ನಿಭಾಯಿಸಲು ಸರಕಾರಿ ಜಮೀನು ವಿತರಣೆಗೆ ಅಥಾರಿಟಿ ನೇಮಕ ಮಾಡುವೆ ಎಂದಿದೆ.
ನ್ಯಾಯಾಧೀಶರು, ಸರಕಾರಿ ಕಾರ್ಯದರ್ಶಿ, ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಗಳು, ಕಾನೂನು ಅಧಿಕಾರಿಗಳು, ಲಿಸ್ಟೆಡ್ ಕಂಪೆನಿಗಳಲ್ಲಿ ನಿರ್ದೇಶಕರು ಇಲ್ಲೆಲ್ಲ ಮಹಿಳೆಯರಿಗೆ ಹೆಚ್ಚಿನ ಅವಕಾಶ ಒದಗಿಸಲಾಗುವುದು, ಸಮಾನ ಕೆಲಸಕ್ಕೆ ಸಮಾನ ವೇತನ ತತ್ವ ಖಾತರಿಪಡಿಸಲಾಗುವುದು.
ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂ ಎಸ್ ಪಿ) ಗೆ ಕಾನೂನು ಗ್ಯಾರಂಟಿ, 30 ಲಕ್ಷ ಸರಕಾರಿ ಉದ್ಯೋಗಗಳ ಭರ್ತಿ, ಯುವಜನರಿಗೆ ಅಪ್ರೆಂಟಿಸ್ ಶಿಪ್ ಹಕ್ಕು, ಬಡ ಕುಟುಂಬಗಳ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರುಪಾಯಿ, 2025 ರಿಂದ ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 50 ಮೀಸಲಾತಿ, ಇವೆಲ್ಲ ರಾಹುಲ್ ಅವರ ಜೋಡೋ ಸಮಯದಲ್ಲಿ ಘೋಷಿಸಿದ 25 ಗ್ಯಾರಂಟಿಗಳಲ್ಲಿ ಸೇರಿವೆ.
ರೋಹಿತ್ ವೇಮುಲಾ ಕಾನೂನು
ದಮನಿತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಎದುರಿಸುವ ತಾರತಮ್ಯ ನಿವಾರಿಸಲು ‘ರೋಹಿತ್ ವೇಮುಲಾ ಕಾನೂನು’ (Rohit Vemula Act), ಡೈವರ್ಸಿಟಿ ಕಮಿಷನ್ ಸ್ಥಾಪನೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ, ಖಾಸಗಿ ವಲಯದ ಉದ್ಯೋಗಗಳಲ್ಲಿ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಮೀಸಲಾತಿ ಒದಗಿಸಲಾಗುವುದು.
ಯುವಜನರಿಗೆ ಅಪ್ರೆಸೆಂಟಿಶಿಪ್ ಹಕ್ಕು ಮತ್ತು ವರ್ಷಕ್ಕೆ ಒಂದು ಲಕ್ಷ ರುಪಾಯಿ, ಪೇಪರ್ ಲೀಕ್ ವಿಚಾರಣೆಗೆ ಫಾಸ್ಟ್ ಟ್ರಾಕ್ ಕೋರ್ಟ್, ಸಂತ್ರಸ್ತರಿಗೆ ಹಣಕಾಸು ಪರಿಹಾರ, ಸರಕಾರಿ ಪರೀಕ್ಷೆಗಳಿಗೆ, ಉದ್ಯೋಗ ನೇಮಕಾತಿಗೆ ಅರ್ಜಿ ಶುಲ್ಕ ರದ್ಧತಿ, ಶಾಲೆಗಳು ವಿಶೇಷ ಶುಲ್ಕ ವಿಧಿಸುವುದನ್ನು ನಿಷೇಧಿಸುವುದು.
ಹಿಂದುತ್ವ ಆಧರಿತವಾಗಿ ಪುಸ್ತಕ ಮರು ಬರೆಯುವುದನ್ನು ಕೌಂಟರ್ ಮಾಡಲು, ಪಠ್ಯ ಪುಸ್ತಕಗಳು ಭಾರತ ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳುವುದು, ಮನಬಂದಂತೆ ಪಠ್ಯ ಪುಸ್ತಕ ಪರಿಷ್ಕರಣೆಗೆ ತಡೆ, ಕೇಂದ್ರೀಯವಾಗಿ ನಡೆಯವ ನೀಟ್ ಮತ್ತು ಸಿಯುಇಟಿ ಯಿಂದ ರಾಜ್ಯಗಳಿಗೆ ಹೊರಗುಳಿಯುವ ಅವಕಾಶ, ಆನ್ ಲೈನ್ ತರಗತಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಂಬತ್ತರಿಂದ ಹನ್ನೆರಡು ತರಗತಿಯವರೆಗಿನ ಮಕ್ಕಳಿಗೆ ಮೊಬೈಲ್ ಫೋನ್ ಇತ್ಯಾದಿ ಭರವಸೆಗಳನ್ನು ನೀಡಲಾಗಿದೆ.
ಇತರ ಭರವಸೆಗಳು
ಲಡಾಖ್ ನ ಆದಿವಾಸಿ ಪ್ರದೇಶ ಒಳಗೊಳಿಸಲು ಸಂವಿಧಾನದ ಆರನೇ ಶೆಡ್ಯೂಲ್ ತಿದ್ದುಪಡಿ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಪುದುಚೇರಿಗೆ ಪೂರ್ಣ ರಾಜ್ಯ ದರ್ಜೆ, ಸೆಂಟ್ರಲ್ ಆರ್ಮ್ ಡ್ ಪೊಲೀಸ್ ಫೋರ್ಸಸ್ ನಲ್ಲಿ ಮಹಿಳೆಯರಿಗೆ 33 ಶೇಕಡಾ ಮೀಸಲಾತಿ, ಎಲ್ ಜಿ ಬಿ ಟಿ ಕ್ಯೂ ಸಮುದಾಯದ ಮದುವೆ ವಿಚಾರದಲ್ಲಿ ಅವರಿಗೆ ರಕ್ಷಣೆಯ ಕಾನೂನು ತರುವುದು, ಸಾರ್ವಜನಿಕ ಸಾರಿಗೆಯಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿಯ ಮರುಸ್ಥಾಪನೆ ಇವು ಇಲ್ಲಿನ ಇತರ ಭರವಸೆಗಳು.
ಪ್ರಣಾಳಿಕೆಯು ಸರ್ವರ ಏಳಿಗೆಯ ದೃಷ್ಟಿಯಿಂದ ದೂರರ್ಶಿತ್ವವನ್ನು ಹೊಂದಿದೆ. ನಿಜ ಅರ್ಥದಲ್ಲಿ ಇಲ್ಲಿ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಪರಿಕಲ್ಪನೆ ಇದೆ. ಆದರೆ, ಈ ವಿಚಾರಗಳನ್ನು ಕಾಂಗ್ರೆಸ್ ಹೇಗೆ ದೇಶದ ಪ್ರತಿಯೊಬ್ಬ ಮತದಾರನಿಗೆ ತಲಪಿಸುತ್ತದೆ, ಅವರಿಗೆ ಮನವರಿಕೆ ಮಾಡಿಕೊಟ್ಟು ಅವರ ಒಲವನ್ನು ತನ್ನ ಪರವಾದ ಮತವಾಗಿ ಪರಿವರ್ತಿಸುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದು ಕಾಂಗ್ರೆಸ್ ಗೆಲುವನ್ನು ನಿರ್ಧರಿಸಲಿದೆ.
ಶ್ರೀನಿವಾಸ ಕಾರ್ಕಳ
ಇದನ್ನೂ ಓದಿ- ನ್ಯಾಯಾಂಗದ ಮೇಲೆ ಸರ್ವಾಧಿಕಾರದ ಕರಿನೆರಳು