ಅಭಿವೃದ್ಧಿ ಅಂದರೆ ಕೇವಲ ಟೋಲ್ ಹೈವೇ ರಸ್ತೆಗಳಲ್ಲ. ದುಬಾರಿಯಾದ ಬುಲೆಟ್ ರೈಲುಗಳಲ್ಲ. ಜನಸಾಮಾನ್ಯರಿಗೆ ನಿಲುಕದ ವಿಮಾನ ನಿಲ್ದಾಣಗಳಲ್ಲ. ಎಲ್ಲರಿಗೂ ಉಚಿತ ಸಮಾನ ಶಿಕ್ಷಣ, ಆಧುನಿಕ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ರೈತರ ಬೆಳೆಗಳಿಗೆ ನ್ಯಾಯಯುತವಾದ ಬೆಲೆ, ಮಹಿಳೆಯರಿಗೆ ಶಿಕ್ಷಣ ಉದ್ಯೋಗಗಳಲ್ಲಿ ಆದ್ಯತೆ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಯಂತಹ ಯೋಜನೆಗಳನ್ನು ರೂಪಿಸುವುದೇ ನಿಜವಾದ ಅಭಿವೃದ್ಧಿ. ಹೀಗಾಗಿ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ದೇಶದ ಹಾಗೂ ದೇಶವಾಸಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ -ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು
ಪ್ರಣಾಳಿಕೆ ಎನ್ನುವುದು ರಾಜಕೀಯ ಪಕ್ಷವೊಂದು ದೇಶವಾಸಿಗಳಿಗೆ ಕೊಡುವ ಭರವಸೆಯ ನೀಲಿನಕ್ಷೆಯಾಗಿದೆ. ತಮ್ಮ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದರೆ ನಾವು ಜನರಿಗಾಗಿ, ದೇಶಕ್ಕಾಗಿ ಏನು ಮಾಡುತ್ತೇವೆ ಎಂದು ಸಾರುವ ಲಿಖಿತ ಆಶ್ವಾಸನೆಗಳು ಪ್ರಣಾಳಿಕೆಯಲ್ಲಿರುತ್ತವೆ. 2024ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷ ಸಹ ತನ್ನ ಚುನಾವಣಾ ಪ್ರಣಾಳಿಕೆಯನ್ನು ಎಪ್ರಿಲ್ 5 ರಂದು ಬಿಡುಗಡೆ ಮಾಡಿದೆ. “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು” ತತ್ವದ ಆಧಾರದಲ್ಲಿ ಇಡೀ ಪ್ರಣಾಳಿಕೆಯನ್ನು ರೂಪಿಸಲಾಗಿದೆ. ಹಾಗೂ ಐದು ‘ನ್ಯಾಯ’ಗಳುಳ್ಳ ನ್ಯಾಯಪತ್ರವನ್ನು ಪ್ರಣಾಳಿಕೆ ಹೆಸರಲ್ಲಿ ಬಿಡುಗಡೆ ಮಾಡಲಾಗಿದೆ.
ಈಗಾಗಲೇ 2023 ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿ ಅವುಗಳ ಕುರಿತು ವ್ಯಾಪಕ ಪ್ರಚಾರ ಮಾಡಿದ್ದ ಕಾಂಗ್ರೆಸ್ ಪಕ್ಷವು ಅಪೂರ್ವ ಬಹುಮತ ಪಡೆದು ಸರಕಾರವನ್ನು ರಚಿಸಿತ್ತು. ವಾರ್ಷಿಕ 56 ಸಾವಿರ ಕೋಟಿ ರೂಪಾಯಿಗಳನ್ನು ಈ ಗ್ಯಾರಂಟಿ ಯೋಜನೆಗಳಿಗೆ ಮೀಸಲಾಗಿಟ್ಟು ಅವುಗಳ ಜಾರಿಗೆ ಬೇಕಾದಷ್ಟು ಪ್ರಯತ್ನವನ್ನು ಮಾಡುತ್ತಾ ಬಂದು ‘ನುಡಿದಂತೆ ನಡೆದಿದ್ದೇವೆ’ ಎಂದು ಹೇಳಿಕೊಂಡಿತು. ಈಗ ಕೇಂದ್ರ ಸರಕಾರದ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಇಡೀ ದೇಶ ಹಾಗೂ ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು 25 ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಇದರಲ್ಲಿ ಯುವಕರಿಗಾಗಿ ಯುವನ್ಯಾಯ, ಮಹಿಳೆಯರಿಗಾಗಿ ನಾರಿ ನ್ಯಾಯ, ಕೃಷಿಕರಿಗಾಗಿ ಕಿಸಾನ್ ನ್ಯಾಯ, ಶ್ರಮಿಕರಿಗಾಗಿ ಶ್ರಮಿಕ್ ನ್ಯಾಯ ಹಾಗೂ ಸಮಪಾಲು ಸಾರುವ ಹಿಸ್ಸೇದಾರಿ ನ್ಯಾಯ ಎನ್ನುವ ಐದು ಅಂಶಗಳಿಗೆ ಒತ್ತು ನೀಡಿ ನ್ಯಾಯಪತ್ರ ಸಿದ್ದಗೊಳಿಸಲಾಗಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಪ್ರಮುಖ ಭರವಸೆಗಳು
48 ಪುಟಗಳ ಈ ಕಾಂಗ್ರೆಸ್ ಪ್ರಣಾಳಿಕೆಯನ್ನು ಗಮನಿಸಿದಾಗ ಸಂವಿಧಾನದ ಆಶಯಕ್ಕೆ ಬದ್ಧವಾಗಿ ಸಮಾಜದ ಸರ್ವಜನರಿಗೂ ಸಮಪಾಲು ದೊರಕಿಸಿ ಕೊಡುವ ಆಶಯವನ್ನು ಹೊಂದಿದೆ. ಹಾಗೂ ಬಿಜೆಪಿ ಸರಕಾರದ ಕೆಲವು ಜನವಿರೋಧಿ ನೀತಿಗಳನ್ನು ರದ್ದು ಮಾಡುವ ಭರವಸೆಯನ್ನು ಕೊಡಲಾಗಿದೆ. ಈ ದೇಶದಲ್ಲಿರುವ ಎಲ್ಲಾ ಜಾತಿ ಜನಾಂಗಕ್ಕೂ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಉದ್ಯೋಗ ಹಾಗೂ ಸರಕಾರಿ ಸವಲತ್ತುಗಳಲ್ಲಿ ಸಮಪಾಲು ದೊರೆಯಬೇಕೆಂದರೆ ರಾಷ್ಟ್ರವ್ಯಾಪಿ ಸಾಮಾಜಿಕ, ಆರ್ಥಿಕ, ಜಾತಿ ಗಣತಿ ಅಗತ್ಯವಿದೆ. ಕಾಂಗ್ರೆಸ್ ಸರಕಾರ ಬಂದರೆ ಜಾತಿ ಗಣತಿ ಮಾಡುವ ಮಹತ್ವದ ಭರವಸೆಯನ್ನು ಕೊಡಲಾಗಿದೆ. ಮೀಸಲಾತಿಗಾಗಿ ಈಗಿರುವ 50% ಮಿತಿ ತೆಗೆಯಲು ಸಾಂವಿಧಾನಿಕ ತಿದ್ದುಪಡಿ ಮಾಡುವ ಅಂಶವನ್ನೂ ಸೇರಿಸಲಾಗಿದೆ. ವಿದ್ಯಾರ್ಥಿಗಳ ಸಾಲ ಮನ್ನಾ ಹಾಗೂ ಪದವೀಧರರು / ಡಿಪ್ಲೋಮಾ ಮಾಡಿದ ಪ್ರತಿಯೊಬ್ಬ ಯುವಕರಿಗೂ ಒಂದು ವರ್ಷ 1 ಲಕ್ಷ ರೂಪಾಯಿ ಸ್ಟೈಪೆಂಡ್ ಕೊಡುವ ಕಾಯ್ದೆ ಜಾರಿ ಮಾಡುವ ಆಶ್ವಾಸನೆ ಕೊಡಲಾಗಿದೆ. ಪ್ರತಿ ಬಡ ಕುಟುಂಬದ ಹಿರಿಯ ಮಹಿಳೆಗೆ ವಾರ್ಷಿಕ 1 ಲಕ್ಷ ಕೊಡುವ ಮಹಾಲಕ್ಷ್ಮಿ ಯೋಜನೆ ರೂಪಿಸುವ ಮತ್ತು ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ಕೊಡುವ ಭರವಸೆ ಕೊಡಲಾಗಿದೆ. ಕೃಷಿಕರ ಸಾಲ ಮನ್ನಾ ಮಾಡುವ ಹಾಗೂ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಕೊಡುವ ಕಾನೂನುಬದ್ದ ಗ್ಯಾರಂಟಿ ಘೋಷಿಸಲಾಗಿದೆ. ಶ್ರಮಿಕರ ಕನಿಷ್ಟ ಕೂಲಿಯನ್ನು ದಿನವೊಂದಕ್ಕೆ 400 ರೂಗಳಿಗೆ ಏರಿಕೆ ಮಾಡಲಾಗುತ್ತದೆಯಂತೆ. ಎಲ್ಲರಿಗೂ ನಗದು ರಹಿತ ಆರೋಗ್ಯ ವಿಮೆ, ಉಚಿತ ಆರೋಗ್ಯ ವ್ಯವಸ್ಥೆ ಕಲ್ಪಿಸಲಾಗುತ್ತದೆಯಂತೆ. ಕೇಂದ್ರ ಸರಕಾರದ 30 ಲಕ್ಷ ಖಾಲಿ ಹುದ್ದೆ ಭರ್ತಿ ಮಾಡಲಾಗುತ್ತದೆಯಂತೆ. ಹಿರಿಯ ನಾಗರಿಕರಿಗೆ ಕೊಡಮಾಡುವ ಪೆನ್ಶನ್ ಮಾಸಿಕ ಸಾವಿರ ರೂಪಾಯಿಗೆ ಹೆಚ್ಚಿಸಲಾಗುತ್ತದಂತೆ. ಹೀಗೆ.. ಎಲ್ಲಾ ವರ್ಗದ ಜನರಿಗೆ ಘನತೆಯ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಈ ಪ್ರಣಾಳಿಕೆ ರೂಪುಗೊಂಡಿದೆ.
ಮೋದಿ ಸರಕಾರದ ಬುಡಕ್ಕೆ ಬಿಸಿನೀರು
ಇದರ ಜೊತೆಗೆ ಮೋದಿ ಸರಕಾರ ಜಾರಿಗೆ ತಂದಿದ್ದ ಮಿಲಿಟರಿಯಲ್ಲಿ ತಾತ್ಕಾಲಿಕ ನೌಕರಿ ಒದಗಿಸುವ ಅಗ್ನಿಪಥ ಯೋಜನೆಯನ್ನು ರದ್ದುಗೊಳಿಸಲಾಗುತ್ತದೆಯಂತೆ. ಆರ್ಥಿಕವಾಗಿ ದುರ್ಬಲರಾಗಿದ್ದ ಮೇಲ್ವರ್ಗದವರಿಗೆ ನೀಡಲಾಗುತ್ತಿದ್ದ 10% ಮೀಸಲಾತಿಯನ್ನು ಎಲ್ಲಾ ಜಾತಿ ಸಮುದಾಯಗಳಿಗೆ ವಿಸ್ತರಿಸಲಾಗುತ್ತದಂತೆ. ಮೋದಿಯವರ ಪ್ರಸ್ತಾಪಿತ “ಒಂದು ದೇಶ-ಒಂದು ಚುನಾವಣೆ” ಯೋಜನೆಯನ್ನು ತಿರಸ್ಕರಿಸಲಾಗಿದೆ. ಮೋದಿ ಸರಕಾರ ಕಿತ್ತುಕೊಂಡಿದ್ದ ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಪುನರ್ ಸ್ಥಾಪಿಸಲಾಗುವುದಂತೆ. ಪಕ್ಷಾಂತರ ಮಾಡುವ ಜನಪ್ರತಿನಿಧಿಗಳ ಸ್ವಯಂಚಾಲಿತ ಅನರ್ಹತೆಗೆ ಸಾಂವಿಧಾನಿಕ ತಿದ್ದುಪಡಿ ತರಲಾಗುತ್ತದೆಯಂತೆ. ಇದು ಆಪರೇಶನ್ ಕಮಲಕ್ಕೆ ಮೂಗುದಾರ ಹಾಕುವ ಯೋಜನೆಯಾಗಿದೆ.
ಬಿಜೆಪಿ ಹುಟ್ಟು ಹಾಕಿದ ಧಾರ್ಮಿಕ ಭಯದಿಂದ ಮುಕ್ತಿಯನ್ನು ದೊರಕಿಸಿಕೊಡುವುದು ಹಾಗೂ ಆಹಾರ, ಉಡುಪು ಪ್ರೀತಿ ವಿವಾಹದಂತಹ ವೈಯಕ್ತಿಕ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡದೇ ಇರುವ ವಾಗ್ದಾನವನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಇದರಿಂದಾಗಿ ಅನ್ಯ ಜಾತಿ ಧರ್ಮೀಯರ ಮೇಲೆ ದಮನ ಮಾಡುವ ಹಾಗೂ ನೈತಿಕ ಪೊಲೀಸ್ ಗಿರಿ ಮಾಡಿ ಭಯ ಹುಟ್ಟಿಸುವ ಶಕ್ತಿಗಳನ್ನು ಮಟ್ಟಹಾಕಲಾಗುವುದು ಎನ್ನವ ಸಂದೇಶ ಕೊಡಲಾಗಿದೆ. ಕಾನೂನಿನ ದುರ್ಬಳಕೆ, ಅನಿಯಂತ್ರಿತ ಶೋಧಗಳು, ನಿರಂಕುಶ ಬಂಧನಗಳನ್ನು ಕೊನೆಗೊಳಿಸುವುದಾಗಿ ಅಭಯ ನೀಡುವ ಈ ಪ್ರಣಾಳಿಕೆಯು ಮೋದಿ ಸರಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿರುವಂತಹ ಸೇಡಿನ ಕ್ರಮಗಳು ಭವಿಷ್ಯದಲ್ಲಿ ಆಗದಂತೆ ನಿರ್ಬಂಧಿಸುವ ಭರವಸೆಯನ್ನು ಕೊಡಲಾಗಿದೆ. ಚರ್ಚೆ ಇಲ್ಲದೇ ಬಿಜೆಪಿ ಸರಕಾರ ಜಾರಿಗೊಳಿಸಿದ ಎಲ್ಲ ಜನವಿರೋಧಿ ಕಾನೂನುಗಳನ್ನು ಅಮೂಲಾಗ್ರವಾಗಿ ಪರಿಶೀಲನೆ ನಡೆಸಿ ಬದಲಾಯಿಸುವುದಾಗಿ ಹೇಳುವ ಕಾಂಗ್ರೆಸ್ ಪ್ರಣಾಳಿಕೆಯು ಬಿಜೆಪಿ ಸರಕಾರಕ್ಕೆ ಮರ್ಮಾಘಾತ ನೀಡುವ ಹವಣಿಕೆಯಲ್ಲಿದೆ.
“ದೇಶದ ಜನತೆ ಉದ್ಯೋಗ ಮಾಡಲು ಪೂರಕ ಅನುಕೂಲಗಳನ್ನು ಸರಕಾರ ಒದಗಿಸಿದ್ದು ಅದರಿಂದಾಗಿ ಸಂಪತ್ತು ಸೃಷ್ಟಿಯಾಗುತ್ತದೆ. ಅದರಿಂದ ಬಂದ ಲಾಭವನ್ನು ಮತ್ತೆ ಜನರ ಕಲ್ಯಾಣಕ್ಕೆ ಬಳಸುವುದು” ಈ ಪ್ರಣಾಳಿಕೆಯ ಉದ್ದೇಶವಾಗಿದೆ. ಆದರೆ.. ಪ್ರಶ್ನೆ ಇರುವುದು ಈಗಿರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಸರಕಾರವನ್ನು ರಚಿಸಲು ಸಾಧ್ಯವೇ? ಸಾಧ್ಯವಾಗದೇ ಹೋದರೆ ಇಂಡಿಯಾ ಮಿತ್ರ ಪಕ್ಷಗಳ ಸರಕಾರ ರಚನೆಯ ಸಾಧ್ಯತೆಗಳಿವೆ. ಅಂತಹ ಸರಕಾರ ಅಸ್ತಿತ್ವಕ್ಕೆ ಬಂದರೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇರುವ ಎಲ್ಲಾ ಅಂಶಗಳನ್ನು ಜಾರಿ ಮಾಡಲು ಇತರೆ ಮಿತ್ರ ಪಕ್ಷಗಳು ಒಪ್ಪುತ್ತವೆಯಾ? ಗೊತ್ತಿಲ್ಲ. ಚುನಾವಣೆಯ ನಂತರವಷ್ಟೇ ಸ್ಪಷ್ಟತೆ ಬರಲಿದೆ. ಈ ಪ್ರಣಾಳಿಕೆಯ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ಸಾಂವಿಧಾನಿಕ ಬದ್ಧತೆ ಹಾಗೂ ಜನಪರ ಧೋರಣೆಗಳನ್ನು ಪ್ರಕಟಿಸಿ ಚುನಾವಣೆಯಲ್ಲಿ ಮತದಾರರ ಬೆಂಬಲವನ್ನು ಕೋರಿದೆ.
ಗ್ಯಾರಂಟಿಗಳಿಗೆ ಸಂಪನ್ಮೂಲ ಹೊಂದಾಣಿಕೆ ಎಲ್ಲಿಂದ?
ಈಗಾಗಲೇ ಬಿಜೆಪಿ ಪಕ್ಷವು ಕಾಂಗ್ರೆಸ್ ಪ್ರಣಾಳಿಕೆಯಲ್ಲಿರೋದೆಲ್ಲಾ ಸುಳ್ಳುಗಳ ಕಂತೆ ಎಂದು ಯಥಾಪ್ರಕಾರ ಲೇವಡಿ ಮಾಡಿದೆ. ಬಿಜೆಪಿ ಪಕ್ಷ ಈ ಹಿಂದಿನ ಚುನಾವಣೆಯಲ್ಲಿ ಕೊಟ್ಟ ಬಹುತೇಕ ಭರವಸೆಯನ್ನು ಈಡೇರಿಸದೆ ಜನರಿಗೆ ನಿರಾಸೆ ಮಾಡಿರುವುದರಿಂದ ಆ ಪಕ್ಷಕ್ಕೆ ಈ ಪ್ರಣಾಳಿಕೆಯನ್ನು ಟೀಕಿಸುವ ನೈತಿಕ ಹಕ್ಕಿಲ್ಲ. ಆದರೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಭರವಸೆಗಳು ವಾಸ್ತವದಲ್ಲಿ ಜಾರಿಮಾಡಲು ಸಾಧ್ಯವಾ? ಎನ್ನುವ ಪ್ರಶ್ನೆ ಜನರಲ್ಲೂ ಇದೆ. ಯಾಕೆಂದರೆ ಈ ಪ್ರಣಾಳಿಕೆಯ ಮಹಾಲಕ್ಷ್ಮಿ ಯೋಜನೆಯನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡರೆ, ಈ ದೇಶದಲ್ಲಿರುವ 25 ಕೋಟಿ ಕುಟುಂಬಗಳಲ್ಲಿ ಬಿಪಿಎಲ್ ಕಾರ್ಡ್ ಇರುವ ಬಡ ಕುಟುಂಬಗಳ ಸಂಖ್ಯೆ 3 ಲಕ್ಷಕ್ಕೂ ಅಧಿಕ. ಇಂತಹ ಪ್ರತಿ ಕುಟುಂಬಕ್ಕೂ ಒಂದು ಲಕ್ಷ ಹಣ ಕೊಡುವುದೇ ಆದರೆ ಅದೆಷ್ಟು ಲಕ್ಷ ಕೋಟಿ ಹಣ ಬೇಕಾಗುತ್ತದೆ. ಭಾರತದ ವಾರ್ಷಿಕ ಬಜೆಟ್ ಮೊತ್ತವೇ 45 ಲಕ್ಷ ಕೋಟಿ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಎಲ್ಲಿಂದ ಹೊಂದಿಸಲಾಗುತ್ತದೆ?. ಒಂದು ಗ್ಯಾರಂಟಿ ಯೋಜನೆಗೆ ಇಷ್ಟೊಂದು ಹಣ ಖರ್ಚಾದರೆ ಬಾಕಿ ಗ್ಯಾರಂಟಿಗಳಿಗೆ ಬೇಕಾದ ಹಣ ನಮ್ಮ ದೇಶದ ವಾರ್ಷಿಕ ಬಜೆಟ್ಟನ್ನೇ ಮೀರಿಸುತ್ತದೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
ಮೋದಿ ಸರಕಾರವು ಆದಾನಿ ಅಂಬಾನಿಯಂತಹ ಕಾರ್ಪೋರೇಟ್ ಕಂಪನಿಗಳಿಗೆ ಕಡಿತ ಗೊಳಿಸಿದ ತೆರಿಗೆಯನ್ನು ಮತ್ತೆ ಮೊದಲಿನಿಂತೆಯೇ ವಸೂಲಿ ಮಾಡಿದರೆ, ದೊಡ್ಡ ದೊಡ್ಡ ಬಂಡವಾಳಿಗರಿಗೆ ಮನ್ನಾ (ವೇವ್ ಆಫ್) ಮಾಡಲಾದ ೧೭ ಲಕ್ಷ ಕೋಟಿಗೂ ಹೆಚ್ಚು ಬ್ಯಾಂಕ್ ಸಾಲವನ್ನು ಮರು ವಸೂಲಿ ಮಾಡಿದರೆ, ಜನರ ಅಭಿವೃದ್ಧಿಗಾಗಿ ಕೊಡಮಾಡುವ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸುವುದು ಅತೀ ದೊಡ್ಡ ರಿಸ್ಕ್ ಏನಲ್ಲ. ಶ್ರೀಮಂತರು ಜನರಿಂದ ಲೂಟಿ ಮಾಡಿದ ಹಣವನ್ನು ವಸೂಲಿ ಮಾಡಿ ಜನರ ಕಲ್ಯಾಣಕ್ಕೆ ಬಳಸಿದಾಗಲೇ ಸರ್ವರಿಗೂ ಸಮಪಾಲು ದೊರೆಯಲು ಸಾಧ್ಯ. ಆದರೆ ಇದನ್ನೆಲ್ಲಾ ಜಾರಿ ಮಾಡಲು ಸರಕಾರವನ್ನೇ ನಿಯಂತ್ರಿಸುತ್ತಿರುವ ಕಾರ್ಪೋರೇಟ್ ಕಂಪನಿಗಳು ಬಿಡುತ್ತಾರಾ? ಜನರ ಹಿತಾಸಕ್ತಿಗೆ ಪೂರಕವಾಗಿರುವ ಗ್ಯಾರಂಟಿ ಯೋಜನೆಗಳು ಲೂಟಿಕೋರ ಕಂಪನಿಗಳಿಗೆ ಮಾರಕವಾಗಿರುವಾಗ ದೊಡ್ಡ ದೊಡ್ಡ ಬಂಡವಾಳಿಗರು ಸುಮ್ಮನಿರುತ್ತಾರಾ? ಬಿಜೆಪಿ ಹಾಗೂ ಅದರ ಮಾತೃ ಸಂಘಟನೆಯ ಹಿಂದುತ್ವವಾದಿ ಆಶಯಕ್ಕೆ ಕೊಡಲಿಪೆಟ್ಟು ಕೊಡುವಂತಹ ಈ ಪ್ರಣಾಳಿಕೆಯೊಳಗಿನ ಅಂಶಗಳನ್ನು ಕಾರ್ಯರೂಪಕ್ಕೆ ತರಲು ಸಹಕರಿಸುತ್ತಾರಾ? ಸಂಘ ಪರಿವಾರದ ಅಂಗಗಳೇ ಆಗಿರುವ ಮೋದಿ ಮೀಡಿಯಾಗಳು ಗ್ಯಾರಂಟಿಗಳ ವಿರುದ್ಧ ಪ್ರಚಾರ ಮಾಡದೇ ಇರುತ್ತಾವಾ? ಇಂತಹ ಬಹುತೇಕ ಆತಂಕಕಾರಿ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ. ಆದರೆ ಈ ಜನಪರ ಪ್ರಣಾಳಿಕೆಯನ್ನು ಪ್ರಾಮಾಣಿಕವಾಗಿ ಜಾರಿಗೆ ತರುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುವುದೇ ಆದರೆ ಆ ಪಕ್ಷವನ್ನು ಬೆಂಬಲಿಸುವುದು ಸೂಕ್ತ.
ಅಭಿವೃದ್ಧಿ ಅಂದರೆ ಕೇವಲ ಟೋಲ್ ಹೈವೇ ರಸ್ತೆಗಳಲ್ಲ. ದುಬಾರಿಯಾದ ಬುಲೆಟ್ ರೈಲುಗಳಲ್ಲ. ಜನಸಾಮಾನ್ಯರಿಗೆ ನಿಲುಕದ ವಿಮಾನ ನಿಲ್ದಾಣಗಳಲ್ಲ. ದೇಶದ ಜನರು ಘನತೆಯಿಂದ ನೆಮ್ಮದಿಯಾಗಿ ಬದುಕುವಂತಹ ಅನುಕೂಲಗಳನ್ನು ಕಲ್ಪಿಸಿಕೊಡುವುದೇ ನಿಜವಾದ ಅಭಿವೃದ್ಧಿ. ಎಲ್ಲರಿಗೂ ಉಚಿತ ಸಮಾನ ಶಿಕ್ಷಣ, ಪ್ರತಿಯೊಬ್ಬರಿಗೂ ಆಧುನಿಕ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ರೈತರ ಬೆಳೆಗಳಿಗೆ ನ್ಯಾಯಯುತವಾದ ಬೆಲೆ, ಮಹಿಳೆಯರಿಗೆ ಶಿಕ್ಷಣ ಉದ್ಯೋಗಗಳಲ್ಲಿ ಆದ್ಯತೆ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಯಂತಹ ಯೋಜನೆಗಳನ್ನು ರೂಪಿಸುವುದೇ ನಿಜವಾದ ಅಭಿವೃದ್ಧಿ. ದೇಶದ ಶೇಕಡಾ ಹತ್ತರಷ್ಟು ಉದ್ಯಮಿಗಳಲ್ಲಿ ದೇಶದ 50% ಸಂಪನ್ಮೂಲ ಸಂಗ್ರಹವಾಗುವುದು ಹಾಗೂ 90% ದಷ್ಟು ಜನರು ಬಾಕಿ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಪರದಾಡುವುದು ಖಂಡಿತಾ ದೇಶಕ್ಕೆ ಒಳಿತಲ್ಲ. ಹೀಗಾಗಿ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ದೇಶದ ಹಾಗೂ ದೇಶವಾಸಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಅವುಗಳನ್ನು ಜಾರಿಗೆ ತರಲು ಬೇಕಾದ ಅಧಿಕಾರವನ್ನು ಈ ದೇಶದ ಜನತೆ ಕಾಂಗ್ರೆಸ್ಸಿಗೆ ಕೊಡಬೇಕಾಗಿದೆ. ಅಧಿಕಾರ ಕೊಟ್ಟು ನಂತರ ನುಡಿದಂತೆ ನಡೆಯಿರಿ ಎಂದು ಒತ್ತಾಯಿಸ ಬಹುದಾಗಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ-ಕಾಂಗ್ರೆಸ್ ಪ್ರಣಾಳಿಕೆ: ಸರ್ವರಿಗೂ ಸಮನ್ಯಾಯ