ಬೆಂಗಳೂರು: ಕಳೆದ ಕೆಲವು ದಿನಗಳಿಂದ ʼಮುಖ್ಯಮಂತ್ರಿಯಾಗಲು ನಾನು ಅರ್ಹʼ, ʼನಾನೇ ಮುಂದಿನ ಮುಖ್ಯಮಂತ್ರಿʼ ಎಂದೆಲ್ಲಾ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ವಿರುದ್ಧ ಅದೇ ಕಾಂಗ್ರೆಸ್ ಪಕ್ಷದ ಕೆಲವು ಹಿರಿಯ ನಾಯಕರು ಸಂಸತ್ತಿನ ವಿಪಕ್ಷ ನಾಯಕರೂ, ಪಕ್ಷದ ರಾಷ್ಟ್ರೀಯ ನಾಯಕರೂ ಆದ ರಾಹುಲ್ ಗಾಂಧಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಕಾಂಗ್ರೆಸ್ ಮುಖಂಡರಾದ ಬಿ ಎಲ್ ಶಂಕರ್, ವಿ ಎಸ್ ಉಗ್ರಪ್ಪ, ಎಚ್ ಎಂ ರೇವಣ್ಣ, ವಿ ಆರ್ ಸುದರ್ಶನ್, ಎಲ್ ಹನುಮಂತಯ್ಯ, ಬಿ ಎನ್ ಚಂದ್ರಪ್ಪ, ಪ್ರಕಾಶ್ ರಾಥೋಡ್, ಪಿ ಆರ್ ರಮೇಶ್, ದ್ವಾರಕಾನಾಥ್ ಸಿ ಎಸ್, ಎಚ್ ಎಸ್ ಚಂದ್ರಮೌಳಿ, ಅಮರ್ ನಾಥನ್, ಖಲೀದ್ ಅಹ್ಮದ್ , ಮಹಬೂಬ್ ಪಾಶಾ ಹಾಗೂ ಮೋಹನ್ ಕೊಂಡಜ್ಜಿ ಇವರುಗಳು ಸೇರಿ ಈ ಪತ್ರವನ್ನು ಬರೆದಿದ್ದಾರೆ. ಈ ಪತ್ರವನ್ನು ಕೆ ಸಿ ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲಾ ಅವರಿಗೂ ಕಳಿಸಿಕೊಡಲಾಗಿದೆ.
ಪತ್ರದಲ್ಲಿ ಏನಿದೆ?
ಮೇಲ್ಕಂಡ ಮುಖಂಡರು ರಾಹುಲ್ ಗಾಂಧಿಯವರಿಗೆ ಬರೆದಿರುವ ಪತ್ರದಲ್ಲಿ ಈಗ ಮನಸಿಗೆ ಬಂದಂತೆ ಹೇಳಿಕೆ ಕೊಡುತ್ತಿರುವ ನಾಯಕರು ಇಡೀ ಕಾಂಗ್ರೆಸ್ ಪಕ್ಷದಲ್ಲಿ ನೈತಿಕಸ್ಥೈರ್ಯ ಕುಸಿಯುವಂತೆ ಮಾಡುತ್ತಿದ್ದಾರೆ, ಇದು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತಿದೆ ಎಂದು ಆರೋಪಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಆರಿಸಿ ಬಂದಿರುವ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿ ಯೋಜನೆಗಳ ಮೂಲಕ ಅಪಾರ ಜನಬೆಂಬಲ ಪಡೆದುಕೊಂಡು ನಡೆದುಕೊಂಡು ಹೋಗುತ್ತಿದೆ. ಈ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಕೂಟವು ಹತಾಶ ಮನಸ್ಥಿತಿ ತಲುಪಿದ್ದು ಇದೀಗ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನ ಪ್ರಸ್ತಾಪವೇ ಇರದ “ಮುಡಾ” ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ವಾಮಮಾರ್ಗವನ್ನು ಬಳಸಿಕೊಂಡು ರಾಜ್ಯಪಾಲರ ಮೂಲಕ ಮುಡಾ ಪ್ರಕರಣದ ತನಿಖೆ ನಡೆಸಲು ಅನುಮತಿಯನ್ನೂ ಪಡೆದಿದ್ದಾರೆ. ರಾಜ್ಯಪಾಲರ ಈ ನಡೆಯನ್ನು ಪ್ರಶ್ನಿಸಿ ಈ ಕುರಿತು ಹೈಕೋರ್ಟಿನಲ್ಲಿ ಸಿ ಎಂ ಸಿದ್ದರಾಮಯ್ಯ ಅವರು ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ನಡೆಯುತ್ತಿದೆ. ಆದರೆ ಬಿಜೆಪಿ ಜೆಡಿಎಸ್ ನಾಯಕರು ಸಿದ್ದರಾಮಯ್ಯನವರ ರಾಜೀನಾಮೆಗಾಗಿ ಒತ್ತಾಯ ಮಾಡುತ್ತಿದ್ದಾರೆ. ಇಂತಹ ರಾಜಕೀಯ ವಾತಾವರಣದಲ್ಲಿ ಕಾಂಗ್ರೆಸ್ ಪಕ್ಷದ ಆರಕ್ಕಿಂತ ಹೆಚ್ಚು ನಾಯಕರು ಮುಖ್ಯಮಂತ್ರಿ ಹುದ್ದೆ ತಮಗೇ ಸಿಗಬೇಕು ಎಂದು ಪ್ರತಿನಿತ್ಯ ಹೇಳಿಕೆ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ವಿರುದ್ಧ ಹೋರಾಟ ನಡೆಸುವುದರ ಬದಲಾಗಿ ಹೀಗೆ ಹೇಳಿಕೆ ನೀಡುತ್ತಿರುವುದರಿಂದ ನಮ್ಮ ನಾಯಕತ್ವ ಮತ್ತು ಕಾರ್ಯಕರ್ತರು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಪಕ್ಷದ ಮೇಲೆ ಭರವಸೆ ಕುಸಿಯುತ್ತಿದೆ. ಕರ್ನಾಟಕದ ಜನರಿಗೂ ಸಹ ಸರ್ಕಾರದ ಮೇಲೆ ವಿಶ್ವಾಸ ಕುಂದುತ್ತಿದೆ. ಸರ್ಕಾರದ ಆಡಳಿತ ಕೆಲಸಗಳಿಗೂ ಇದರಿಂದ ಧಕ್ಕೆಯುಂಟಾಗಿದೆ ಎಂದು ದೂರು ಪತ್ರದಲ್ಲಿ ತಿಳಿಸಲಾಗಿದೆ.
ಮಾನ್ಯ ರಾಹುಲ್ ಗಾಂಧಿಯವರು ಕಾಂಗ್ರೆಸ್ ನಾಯಕರ ಈ ಬಿಡುಬೀಸು ಹೇಳಿಕೆಗಳನ್ನು ಕೂಡಲೇ ಗಮನಿಸಿ ಅಂತವರಿಗೆ ಯಾವುದೇ ಅನಾಹುತಕಾರಿ ಹೇಳಿಕೆಗಳನ್ನು ಕೊಡದಂತೆ ನಿರ್ದೇಶನ ನೀಡಿ ಎಚ್ಚರಿಕೆ ಕೊಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.