ಕೋಲಾರ: ಇಬ್ಬರು ಪ್ರಭಾವಿ ನಾಯಕರ ಬಿಗಿ ಪಟ್ಟಿನ ನಡುವೆಯೇ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿದೆ. ತಾವು ಹೇಳಿದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಈ ವಿಚಾರದಲ್ಲಿ ತುಸು ಹಿನ್ನಡೆ ಆಗಿರುವಂತೆ ತೋರುತ್ತಿದೆ. ಇದರಿಂದ ಸಹಜವಾಗಿ ಉದ್ಭವವಾದ ಮುನಿಯಪ್ಪನವರ ಕೋಪ ತಣಿಸುವ ಕಾರ್ಯಕ್ಕೆ ಸದ್ಯ ಹೈಕಮಾಂಡ್ ಕೈ ಹಾಕಿದೆ.
ಕಾಂಗ್ರೆಸ್ ಹೈಕಮಾಂಡ್ ಕೋಲಾರ ಅಭ್ಯರ್ಥಿ ಆಯ್ಕೆ ಬಗ್ಗೆ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದೆ. ಈ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಪೋಸ್ಟ್ ಮಾಡಿದ್ದಾರೆ. “ಕೋಲಾರ ಟಿಕೆಟ್ ಆಯ್ಕೆ ವಿಚಾರದಲ್ಲಿ ಸುದೀರ್ಘವಾದ ಚರ್ಚೆ ನಡೆಸಲಾಗಿದೆ. ಸಚಿವ ಮುನಿಯಪ್ಪ ಅವರು ಗೆಲ್ಲುವ ತಂತ್ರಗಾರಿಕೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಎಸ್‌ಸಿ ಎಡ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಮುನಿಯಪ್ಪ ಮನವರಿಕೆ ಮಾಡಿಕೊಟ್ಟಿದ್ದರು.
ಕೋಲಾರ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ನಾಯಕರ ಅಭಿಪ್ರಾಯವನ್ನೂ ಕೇಳಿದ್ದೀವಿ. ಕೇಂದ್ರ ಚುನಾವಣಾ ಸಮಿತಿ ಯಾವುದೇ ಅಭ್ಯರ್ಥಿ ಆಯ್ಕೆ ಮಾಡಿದರೂ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ವೈಯಕ್ತಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ಪಾರ್ಟಿ ತೀರ್ಮಾನಕ್ಕೆ ಬದ್ಧರಾಗಿ ಇರುತ್ತೇವೆ ಎಂದು ಹೇಳಿದ್ದಾರೆ. 7 ಬಾರಿ ಸಂಸದರಾಗಿರುವ ಮುನಿಯಪ್ಪ ಕೂಡ ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದಿದ್ದಾರೆ. ಒಟ್ಟಿಗೆ ಚುನಾವಣಾ ನಡೆಸಿ ಅಭ್ಯರ್ಥಿಯನ್ನ ಗೆಲ್ಲಿಸುವ ಅಭಿಪ್ರಾಯ ಹೊಂದಿದ್ದಾರೆ” ಎಂದು ಸುರ್ಜೇವಾಲ ಪೋಸ್ಟ್ ಮಾಡಿದ್ದಾರೆ.
ಕೆ.ಹೆಚ್. ಮುನಿಯಪ್ಪ ಬಯಸಿದಂತೆ ಕೋಲಾರ ಟಿಕೆಟ್ ಎಸ್ಸಿ ಸಮುದಾಯಕ್ಕೆ ನೀಡಲಾಗಿದೆ. ಈಗ ಕೆ.ಹೆಚ್. ಮುನಿಯಪ್ಪ ಮುನಿಸು ಮರೆತು ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಬರೆದುಕೊಂಡಿದ್ದಾರೆ.