ನವದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು, ಮತ ಕಳ್ಳತನ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ಹೋರಾಟ ಮುಂದುವರಿಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾನುವಾರ ವೋಟ್ ಚೋರಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಜನರ ಉತ್ಸಾಹ ನೋಡಿದಾಗ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯತೆ ಎಷ್ಟಿದೆ ಎನ್ನುವುದು ಅರ್ಥವಾಗಿದೆ. ಪಕ್ಷ ಉಳಿಸಿಕೊಳ್ಳಲು ಕಾರ್ಯಕರ್ತರು ಸಜ್ಜಾಗಿರುವುದನ್ನು ನೋಡಿದಾಗ ನಮ್ಮ ಸ್ಥೈರ್ಯವೂ ಇಮ್ಮಡಿಯಾಗಿದೆ. 2028 ರ ವಿಧಾನಸಭಾ ಮತ್ತು 2029ರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಕಾರ್ಯಕರ್ತರು ಸಜ್ಜಾಗುತ್ತಿದ್ದಾರೆ ಎಂದು ಹೇಳೀದರು.
ಆಳಂದ ಕ್ಷೇತ್ರದ ಹಲವು ಗ್ರಾಮಗಳಲ್ಲಿ ನೆರೆ ರಾಜ್ಯಗಳ ಮೊಬೈಲ್ ನಂಬರ್ ಬಳಸಿ ಮತದಾರರ ಹೆಸರುಗಳನ್ನು ಅಳಿಸಿಹಾಕಿರುವುದು ಕಂಡು ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ಇದು ಸೌಹಾರ್ದಯುತ ಭೇಟಿ ಮಾತ್ರ. ಯಾವುದೇ ನಿರ್ಧಿಷ್ಟ ವಿಷಯ ಕುರಿತು ಅವರೊಂದಿಗೆ ಚರ್ಚಿಸಿಲ್ಲ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳಿಗೆ ನಡೆಯಲಿರುವ ಚುನಾವಣೆಗೆ ಇಂದಿನಿಂದ ಅರ್ಜಿ ಸ್ವೀಕಾರ ಆರಂಭವಾಗಿದೆ. ಮೀಸಲಾತಿ ಅಂತಿಮ ಆಗಿಲ್ಲವಾದರೂ 369 ವಾರ್ಡ್ ಗಳಲ್ಲಿ ಸ್ಪರ್ಧಿಸಲು ಯಾರಿಗೆಲ್ಲ ಆಸಕ್ತಿ ಇದೆ ಎಂಬುದನ್ನು ತಿಳಿದುಕೊಳ್ಳಲು ಈ ಅರ್ಜಿ ಆಹ್ವಾನಿಸಲಾಗಿದೆ.
ಸಾಮಾನ್ಯವರ್ಗಕ್ಕೆ ರೂ. 50 ಸಾವಿರ ಹಾಗೂ ಮಹಿಳೆಯರು ಹಾಗೂ ಪರಿಶಿಷ್ಟ ಸಮುದಾಯದವರಿಗೆ ರೂ. 25 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲೂ ಅವಕಾಶ ಕಲ್ಪಿಸಲಾಗಿದೆ. ಈ ಹಣವನ್ನು ಪಕ್ಷದ ಕಟ್ಟಡ ನಿಧಿಗೆ ಬಳಸಲು ತೀರ್ಮಾನಿಸಲಾಗಿದೆ ಎಂದರು.

