ಬೆಂಗಳೂರು: ಮಗನ ಕೊಲೆ ಆರೋಪದ ಆರೋಪಿಗಳಿಗೆ ಜಾಮೀನು ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ, ನಮಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಜಾಮೀನು ಸಿಕ್ಕಿರುವ ಬಗ್ಗೆ ಮಾಧ್ಯಮಗಳಿಂದ ತಿಳಿದಿದೆ. ಪೂರ್ಣ ವಿಚಾರಣೆ ಬಳಿಕ ಸೂಕ್ತ ನ್ಯಾಯ ಸಿಗುವ ನಂಬಿಕೆಯಿದೆ. ತಾತ್ಕಾಲಿಕವಾಗಿ ಆರೋಪಿಗಳಿಗೆ ಜಾಮೀನು ಸಿಕ್ಕಿರಬಹುದು. ಆದರೆ ಅಂತಿಮವಾಗಿ ಆರೋಪಿಗಳಿಗೆ ಶಿಕ್ಷೆ ಆಗುವ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಅವರು, ಸರ್ಕಾರ ನಮ್ಮ ಸೊಸೆ ಸಹನಾಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಭಾವುಕರಾಗಿ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.
ಆರೋಪಿ ದರ್ಶನ್ ಜತೆ ಮಾತನಾಡುವಂತಹುದ್ದು ಏನೂ ಇಲ್ಲ. ನಾವು ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದೇವೆ. ನಮಗೆ ಮಗ ಬೇಕೆ ಹೊರತು ಮಾತುಕತೆ ಏನೂ ಬೇಕಿಲ್ಲ ಎಂದು ಪ್ರತಕ್ರಿಯಿಸಿದರು. ಸರ್ಕಾರ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಈಗ ಲಭ್ಯವಾಗಿರುವ ಜಾಮೀನು ಪ್ರಶ್ನಿಸಿ ಸಹ ಸುಪ್ರೀಂಕೋರ್ಟ್ ಮೊರೆ ಹೋಗುವ ವಿಶ್ವಾಸವಿದೆ ಎಂದು ಕಾಶಿನಾಥಯ್ಯ ತಿಳಿಸಿದ್ದಾರೆ.