ಪದ್ಮಭೂಷಣ ವಿಜೇತೆ, ʼಬಿಹಾರದ ಕೋಗಿಲೆʼ ಶಾರದ ಸಿನ್ಹಾ ನಿಧನಕ್ಕೆ ಗಣ್ಯರಿಂದ ಸಂತಾಪ

Most read

‘ಬಿಹಾರದ ಕೋಗಿಲೆ’ ಎಂದೇ ಜನಪ್ರಿಯರಾಗಿದ್ದ ಪ್ರಸಿದ್ಧ ಜಾನಪದ ಗಾಯಕಿ ಶಾರದಾ ಸಿನ್ಹಾ (72) ಅವರು ಅನಾರೋಗ್ಯದ ಕಾರಣದಿಂದ ಮಂಗಳವಾರ ರಾತ್ರಿ 9.20ಕ್ಕೆ ನಿಧನರಾಗಿದ್ದಾರೆ.

ಶಾರದಾ ಸಿನ್ಹಾ 1970ರಿಂದಲೂ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುತ್ತ ಬಂದಿದ್ದಾರೆ. ಭೋಜ್‌ಪುರಿ, ಮೈಥಿಲಿ ಮತ್ತು ಹಿಂದಿ ಜಾನಪದ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಶಾರದಾ ಸಿನ್ಹಾ ಅವರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಸೆಪ್ಪಿಸೇಮಿಯಾ ಎಂಬ ಖಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಿಹಾರದ ಜಾನಪದ ಲೋಕಕ್ಕೆ ಸಿನ್ಹಾ ಸಾಂಸ್ಕೃತಿಕ ರಾಯಭಾರಿಯಂತಿದ್ದರು. ಅದರಲ್ಲೂ ವಿಶೇಷವಾಗಿ ಚತ್ ಗೀತೆ ಎಂದರೆ ತಕ್ಷಣ ಇವರ ಹೆಸರೇ ಮುಂದೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಾರದಾ ಸಿನ್ಹಾರ ಹೆಸರು ಚತ್ ಉತ್ಸವದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ‘ಹಮ್ ಆಪ್‌ ಕೇ ಕೌನ್’ ಸಿನಿಮಾದ ‘ಬಾಬುಲ್’ ಹಾಡು ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಶಾರದಾ ಸಿನ್ಹಾ ಕಲಾಸೇವೆಯನ್ನು ಪರಿಗಣಿಸಿ 2018ರಲ್ಲಿ ಕೇಂದ್ರ ಸರ್ಕಾರ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಿತ್ತು.

ಅವರ ನಿಧನ ಸುದ್ದಿ ತಿಳಿಯುತ್ತಿದಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. “ಖ್ಯಾತ ಜಾನಪದ ಗಾಯಕಿ ಶಾರದಾ ಸಿನ್ಹಾ ಅವರ ನಿಧನ ವಾರ್ತೆ ತೀವ್ರ ಬೇಸರ ಉಂಟುಮಾಡಿದೆ. ಅವರ ಮೈಥಿಲಿ ಮತ್ತು ಭೋಜ್ಪುರಿ ಜಾನಪದ ಹಾಡುಗಳು ಕಳೆದ ಹಲವು ದಶಕಗಳಿಂದ ಭಾರಿ ಜನಪ್ರಿಯತೆ ಗಳಿಸಿದ್ದವು. ಅವರ ಸುಮಧುರ ಹಾಡುಗಳು ಶ್ರೇಷ್ಠ ಹಬ್ಬವಾದ ಚತ್ ವೇಳೆ ಎಂದಿಗೂ ಅನುರಣಿಸಲಿವೆ. ಸಂಗೀತ ಕ್ಷೇತ್ರಕ್ಕೆ ಶಾರದಾ ಸಾವು ತುಂಬಲಾರದ ನಷ್ಟ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು” ಎಂದು ಪ್ರಧಾನಿ ಮೋದಿ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.

More articles

Latest article