ಅವಹೇಳನಾಕಾರಿ ಹೇಳಿಕೆ; ಬಿಜೆಪಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ಹಕ್ಕು ಬಾಧ್ಯತಾ ಸಮಿತಿಗೆ ದೂರು

Most read

ಮಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಹಲವು ಕಾಂಗ್ರೆಸ್ ಶಾಸಕರು ವಿಧಾನಸಭೆಯ ಹಕ್ಕು ಬಾಧ್ಯತಾ ಸಮಿತಿಗೆ ದೂರು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್, ಕಳೆದ ವಿಧಾನಮಂಡಲ ಅಧಿವೇಶನದ ವೇಳೆ ಬಿಜೆಪಿ ಶಾಸಕರ ಅಮಾನತು ಕುರಿತು ಪ್ರತಿಕ್ರಿಯಿಸಿದ್ದ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಿಶೇಷಾಧಿಕಾರ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ವಿಡಿಯೋ ದೃಶ್ಯಾವಳಿ ಸೇರಿದಂತೆ ಸಾಕ್ಷ್ಯಗಳನ್ನು ವಿಶ್ಲೇಷಿಸಲಿದೆ ಎಂದು ಖಾದರ್ ತಿಳಿಸಿದರು.

ಕೆಲವು ಶಾಸಕರಿಗೆ ಏನನ್ನಾದರೂ ಮಾತನಾಡುವ ಚಾಳಿ ಇರುತ್ತದೆ. ಸದಾ ಪ್ರಚಾರದಲ್ಲಿರುವ ಉಮೇದಿನಿಂದ ಆ ರೀತಿ ಮಾತನಾಡುತ್ತಾರೆ. ಶಾಸಕರ ಹೇಳಿಕೆ ಸಂವಿಧಾನಕ್ಕೆ ಬದ್ಧವಾಗಿರಬೇಕು. ಈ ಕುರಿತು ಶಾಸಕರು ಹಕ್ಕುಚ್ಯುತಿ ಸಮಿತಿಗೆ ದೂರು ಕೊಟ್ಟಿದ್ದಾರೆ. ಸಮಿತಿಯೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು. ಶಾಸಕರ ಹೇಳಿಕೆ, ಸಂವಿಧಾನದ ಆಶಯಗಳಿಗೆ ಪೂರಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಮಿತಿ ಪರಿಶೀಲಿಸುತ್ತದೆ. ಹೇಳಿಕೆ ನೀಡಿದ ಶಾಸಕರಿಂದ ಸ್ಪಷ್ಟನೆ ಪಡೆಯಲಾಗುತ್ತದೆ. ನಂತರ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿವರಣೆ ನೀಡಿದರು.

ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಶಾಸಕರಾಗುವುದಿಲ್ಲ. ಸಾಂವಿಧಾನಿಕ ಪ್ರಮಾಣ ವಚನ ಸ್ವೀಕರಿಸಿದ ನಂತರವೇ ಶಾಸಕರ ಅಧಿಕೃತ ಸ್ಥಾನಮಾನವನ್ನು ನೀಡಲಾಗುತ್ತದೆ. ಆದ್ದರಿಂದ, ಶಾಸಕರು ಸಾರ್ವಜನಿಕ ಬೆಂಬಲವನ್ನು ಲೆಕ್ಕಿಸದೆ ತಮ್ಮ ಹೇಳಿಕೆಗಳನ್ನು ಸಾಂವಿಧಾನಿಕ ತತ್ವಗಳಿಗೆ ಪೂರಕವಾಗಿರುವಂತೆ ನೀಡಬೇಕು ಎಂದು ಅವರು ಹೇಳಿದರು.

More articles

Latest article