ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಜಾರಿ ಇರುವಾಗ ವ್ಯಕ್ತಿ ವ್ಯಕ್ತಿಗಳ ನಡುವೆ ನಡೆಯಬಹುದಾದ ಒಂದು ಕ್ಷುಲ್ಲಕ ಗಲಾಟೆಯ ಘಟನೆಗೆ ಕೋಮು ದ್ವೇಷದ ಬಣ್ಣ ಹಚ್ಚಿ ಸಮಾಜದ ಶಾಂತಿ ಕದಡಲು ಪ್ರಯತ್ನಿಸಿದ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಮೂಲಕ ಶಾಂತಿಯುತ ಚುನಾವಣೆಗೆ ಅನುವು ಮಾಡಿಕೊಡಬೇಕು ಎಂದು ಜಾಗೃತ ಕರ್ನಾಟಕ ನಾಗರಿಕ ವೇದಿಕೆಯ ಪ್ರಗತಿಪರ ಚಿಂತಕರ ನಿಯೋಗ ಇಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದೆ.
ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಚಿಂತಕ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು, ಚುನಾವಣೆ ಪ್ರಾರಂಭದ ಘಟ್ಟದಲ್ಲೇ ಇಂತಹ ಪ್ರಚೋದನಾತ್ಮಕ ನೆಲೆಯಲ್ಲಿ ನಡೆಯುತ್ತಿರುವ ಅವರ ವರ್ತನೆಗಳನ್ನು ನಿಯಂತ್ರಿಸಬೇಕು ಎಂದರು.
ಚಿಂತಕಿ ಕೆ.ಎಸ್. ವಿಮಲಾ ಪ್ರತಿಕ್ರಿಯಿಸಿ, ನಗರತಪೇಟೆಯ ಒಂದು ಸಣ್ಣ ಅಂಗಡಿಯಲ್ಲಿ ನಡೆದ ಗಲಾಟೆಗೆ ಕೋಮು ಬಣ್ಣ ಬಳಿದು, ತೇಜಸ್ವಿ ಸೂರ್ಯ ಅವರೇ ಹೇಳಿದಂತೆ 5-6 ಸಾವಿರ ಜನರನ್ನು ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಸಂದರ್ಭದಲ್ಲಿ ಸೇರಿಸಿರುವುದು ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇಂತಹ ಘಟನೆಗಳು ಮುಂದುವರಿಯದಂತೆ ಕ್ರಮ ವಹಿಸಲು ವೇದಿಕೆಯ ನಿಯೋಗ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜಾಗೃತ ಕರ್ನಾಟಕ ನಾಗರಿಕ ವೇದಿಕೆಯ ಶ್ರೀಪಾದ ಭಟ್, ಜಾಣಗೆರೆ ವೆಂಕಟರಾಮಯ್ಯ, ಮಾವಳ್ಳಿ ಶಂಕರ, ಡಾ. ಬಂಜಗೆರೆ ಜಯಪ್ರಕಾಶ ಸೇರಿದಂತೆ ಹಲವಾರು ಪ್ರಗತಿಪರ ಚಿಂತಕರು ಇದ್ದರು.