ಕಂಪನಿಗೆ ರೂ.96 ಲಕ್ಷ ವಂಚನೆ: ಮಾರಾಟ ಪ್ರತಿನಿಧಿ ಬಂಧನ

Most read

ಬೆಂಗಳೂರು: ಕಂಪನಿಯ ವೆಲ್ಡಿಂಗ್ ರಾಡ್‌ ಗಳನ್ನು ವಿವಿಧ ಅಂಗಡಿಗಳಿಗೆ ಮಾರಾಟ ಮಾಡಿದ್ದರಿಂದ ಬಂದ ಹಣವನ್ನು ತನ್ನ ವೈಯಕ್ತಿಕ ಖಾತೆ ಹಾಗೂ ನಗದು ರೂಪದಲ್ಲಿ ಪಡೆದು ರೂ.96 ಲಕ್ಷ ವಂಚಿಸಿದ ಪ್ರಕರಣದಲ್ಲಿ ಮಾರಾಟ ಪ್ರತಿನಿಧಿಯೊಬ್ಬನನ್ನು ಹಲಸೂರು ಗೇಟ್‌ ಪೊಲೀಸರು ಬಂಧಿಸಿದ್ದಾರೆ.
ವಿನಾಯಕ ಟ್ರೇಡಿಂಗ್ ಸೆಂಟರ್ ಪ್ರೈವೇಟ್ ಕಂಪನಿ ಮಾಲೀಕ ರಾಘವೇಂದ್ರ ಅವರು ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಹರಿಯಾಣದ ಹಿಸ್ಸಾರ್ ಜಿಲ್ಲೆಯ ದಯಾನಂದ್‌ ಅಗರ್‌ವಾಲ್ ಎಂಬಾತನನ್ನು ಬಂಧಿಸಿ, ಆತನಿಂದ ರೂ. 11,24,334 ಲಕ್ಷ ವಶಪಡಿಸಿಕೊಳ್ಳಲಾಗಿದೆ. ನಾಪತ್ತೆಯಾಗಿರುವ ಮತ್ತೊಬ್ಬ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಂಪನಿಯಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ ದಯಾನಂದ, ಬೆಂಗಳೂರು, ಮಂಡ್ಯ, ಚನ್ನಪಟ್ಟಣ ಸೇರಿದಂತೆ ಹಲವಾರು ಪಟ್ಟಣಗಳ ಅಂಗಡಿಗಳಿಗೆ ರೂ. 96 ಲಕ್ಷ ಮೌಲ್ಯದ ವೆಲ್ಡಿಂಗ್ ರಾಡ್‌ಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಕಂಪನಿ ಬ್ಯಾಂಕ್ ಖಾತೆಗೆ ಜಮೆ ಮಾಡದೇ ತನ್ನ ವೈಯಕ್ತಿಕ ಖಾತೆಗೆ ಜಮಾ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಮಾರಾಟ ಪ್ರತಿನಿಧಿಗಳ ವಿರುದ್ಧ ತನಿಖೆ ನಡೆಸಲಾಗಿದ್ದು, ಇವರಲ್ಲಿ ದಯಾನಂದ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮಾರಾಟ ಮಾಡಿದ ಹಣವನ್ನು ನೀಡದೆ ಮೋಸ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆತನಿಂದ ರೂ. 11 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಮತ್ತಿಬ್ಬರು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಕಂಡು ಬಂದಿಲ್ಲದ ಕಾರಣ ಅವರಿಗೆ ನೋಟಿಸ್ ನೀಡಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

More articles

Latest article