ಅಧ್ಯಯನದ ಹೆಸರಿನಲ್ಲಿ ಕಾಳಿಂಗಗಳಿಗೆ ಗಾಯ ಮಾಡುವುದರಿಂದ ಅದು ವಾಸಿಯಾಗದೇ ಇರಬಹುದು. ಸೋಂಕು ತಗುಲಬಹುದು. ಕೊನೆಗದು ಪ್ರಾಣಹಾನಿಗೂ ಕಾರಣವಾಗಬಹುದು. ದೇಹದೊಳಗಿನ ಯಂತ್ರ ಅವುಗಳ ಒಳಗೆ ಅನಪೇಕ್ಷಿತ ಬದಲಾವಣೆಗಳಿಗೆ ಕಾರಣವಾಗಲೂ ಬಹುದು – ನಾಗರಾಜ ಕೂವೆ, ಪರಿಸರ ಹೋರಾಟಗಾರರು.
ಭಾರತದಲ್ಲಿ ಮೊದಲ ಬಾರಿಗೆ ಹಾವುಗಳ ಮೇಲೆ ‘ರೇಡಿಯೋ ಟೆಲಿಮಿಟ್ರಿ’ ಅಧ್ಯಯನ ಆಗುಂಬೆಯಲ್ಲಿ 2008ರಲ್ಲಿ ಆರಂಭವಾಯಿತು. ಅಂದರೆ, ಆಗುಂಬೆಯಲ್ಲಿ ಕಾಳಿಂಗ ಸರ್ಪಗಳನ್ನು ಹಿಡಿದು ತಂದು, ಅರಿವಳಿಕೆ ಮದ್ದು ಕೊಟ್ಟು, ಅವುಗಳ ಪ್ರಜ್ಞೆ ತಪ್ಪಿಸಿ, ದೇಹ ಕೊಯ್ದು ಅದರೊಳಗೆ ರೇಡಿಯೋ ಟ್ರಾನ್ಸ್ ಮೀಟರ್ ಎಂಬ ಉಪಕರಣ ಇಟ್ಟು, ಶಸ್ತ್ರಚಿಕಿತ್ಸೆ ಮುಗಿಸಿ ಪುನಃ ಕಾಡಿಗೆ ಬಿಡಲಾಯಿತು. ನಂತರ ಆ ಟ್ರಾನ್ಸ್ ಮೀಟರ್ ನಿಂದ ಬರುವ ರೇಡಿಯೋ ಸಿಗ್ನಲ್ ಗಳ ಸಹಾಯದಿಂದ ಒಂದಷ್ಟು ಜನ ಪ್ರತಿದಿನ ಹಾವನ್ನು ಹಿಂಬಾಲಿಸುತ್ತಾ ಅದರ ಚಟುವಟಿಕೆಗಳ ಕುರಿತು ದತ್ತಾಂಶಗಳನ್ನು ದಾಖಲಿಸಲು ಆರಂಭಿಸಿದರು.
ಕಾಳಿಂಗಕ್ಕೆ ಭಾರತದಲ್ಲೇ, ಅದರಲ್ಲೂ ಆಗುಂಬೆಯಲ್ಲೇ ಮೊದಲು ಶಸ್ತ್ರಚಿಕಿತ್ಸೆ ನಡೆಸಿ, ರೇಡಿಯೋ ಟ್ರಾನ್ಸ್ ಮೀಟರ್ ಹಾಕಿದ್ದು. ಅದು ಕಾಳಿಂಗಗಳಿಗೆ ಸುರಕ್ಷಿತವೋ ಅಲ್ಲವೋ, ಅದರಿಂದ ಕಾಳಿಂಗದ ಜೀವಕ್ಕೆ ತೊಂದರೆಯಾಗುತ್ತದೋ ಇಲ್ಲವೋ ಎಂದು ಯಾವ ವೈಜ್ಞಾನಿಕ ಅಧ್ಯಯನವೂ ಅಲ್ಲಿಯವರೆಗೆ ಆಗಿರಲಿಲ್ಲ, ಅಧಿಕೃತವಾಗಿ ಇವತ್ತಿಗೂ ಆಗಿಲ್ಲ. ಆದರೆ ಕಾಳಿಂಗ ಸಂಶೋಧಕರು ಎಂದು ಕರೆಸಿಕೊಳ್ಳುವವರು ‘ರೇಡಿಯೋ ಟೆಲಿಮಿಟ್ರಿ ಅಧ್ಯಯನದಿಂದ ಕಾಳಿಂಗಕ್ಕೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ತಮಗೆ ತಾವೇ ಪ್ರಮಾಣ ಪತ್ರ ಕೊಟ್ಟು ಕೊಂಡರು. ಇದು ಹಿತಾಸಕ್ತಿ ಸಂಘರ್ಷವಲ್ಲವೇ? ಅದಿರಲಿ, ಮುಂದೆ ಯಾವ ವೈಜ್ಞಾನಿಕ ಹಿನ್ನೆಲೆಯೂ ಇಲ್ಲದ ಜನ ಅಧ್ಯಯನದ ಹೆಸರಿನಲ್ಲಿ ತಮಗೆ ತೋಚಿದಂತೆ ಕಾಳಿಂಗಗಳ ಮೇಲೆ ಪ್ರಯೋಗ ನಡೆಸಿದರು. ARRS ನವರು ಐದು ಗಂಡು, ಎರಡು ಹೆಣ್ಣು ಕಾಳಿಂಗಗಳಿಗೆ, King Cobra Conservancy ಎಂಬ ಸಂಸ್ಥೆಯವರು ಆಗುಂಬೆಯ ನಾಲ್ಕು ಕಾಳಿಂಗಗಳಿಗೆ, ಗೌರಿಶಂಕರ್ ಐದು ಕಾಳಿಂಗಗಳಿಗೆ ರೇಡಿಯೋ ಟ್ರಾನ್ಸ್ ಮೀಟರ್ ಹಾಕಿದ್ದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಇನ್ನು ಅನಧಿಕೃತವಾಗಿ ARRS, ಕಾಳಿಂಗ ಮನೆ ಸಂಸ್ಥೆಗಳು ವನ್ಯಜೀವಿ ಛಾಯಾಗ್ರಾಹಕರಿಗೆ, ಸೆಲೆಬ್ರಿಟಿಗಳಿಗೆ, ಪ್ರವಾಸಿಗರಿಗೆ ಕಾಳಿಂಗಗಳನ್ನು ತೋರಿಸಲು ಎಷ್ಟು ಹಾವುಗಳಿಗೆ ರೇಡಿಯೋ ಟ್ರಾನ್ಸ್ ಮೀಟರ್ ಹಾಕಿ ಟ್ರಾಕ್ ಮಾಡುತ್ತಿದ್ದಾರೋ ಯಾರಿಗೆ ಗೊತ್ತು?
ಅಧ್ಯಯನದ ಹೆಸರಿನಲ್ಲಿ ಕಾಳಿಂಗಗಳಿಗೆ ಗಾಯ ಮಾಡುವುದರಿಂದ ಅದು ವಾಸಿಯಾಗದೇ ಇರಬಹುದು. ಸೋಂಕು ತಗುಲಬಹುದು. ಕೊನೆಗದು ಪ್ರಾಣಹಾನಿಗೂ ಕಾರಣವಾಗಬಹುದು. ದೇಹದೊಳಗಿನ ಯಂತ್ರ ಅವುಗಳ ಒಳಗೆ ಅನಪೇಕ್ಷಿತ ಬದಲಾವಣೆಗಳಿಗೆ ಕಾರಣವಾಗಲೂ ಬಹುದು. ರೇಡಿಯೋ ಸಿಗ್ನಲ್ ಗಳು ಬೇಟೆಗೆ, ಸಂತಾನೋತ್ಪತ್ತಿಗೆ, ಓಡಾಟಕ್ಕೆ, ಸಹಜ ಬದುಕಿಗೆ ತೊಂದರೆ ಮಾಡಬಹುದು.
ಕಾಳಿಂಗದ ದೇಹದೊಳಗೆ ಹಾಕಿದ ರೇಡಿಯೋ ಟ್ರಾನ್ಸ್ ಮೀಟರ್ ನ ಬ್ಯಾಟರಿ ಖಾಲಿಯಾಗುವುದರಿಂದ, ಅದನ್ನು ಬದಲಾಯಿಸಲು ಪುನಃ ಹಾವನ್ನು ಹಿಡಿದು ಅರಿವಳಿಕೆ ಕೊಟ್ಟು, ದೇಹ ಕೊಯ್ದು, ಶಸ್ತ್ರಚಿಕಿತ್ಸೆ ಮಾಡಿ ಮೊದಲಾದ ಅಷ್ಟೂ ಸಂಗತಿಗಳನ್ನು ಪುನಃ ಮಾಡಬೇಕು. ಇಂತಹ ಸಂದರ್ಭದಲ್ಲಿ ಪದೇ ಪದೇ ಗಾಯ, ಒತ್ತಡ, ಅರಿವಳಿಕೆಯ ಅಡ್ಡ ಪರಿಣಾಮವಿಲ್ಲ ಎಂದು ಯಾವ ತಜ್ಞ, ವೈಜ್ಞಾನಿಕ ಆಧಾರಗಳೊಂದಿಗೆ ಹೇಳಿದ್ದಾರೆ? ಈ ಕುರಿತು ಒಂದು ಸ್ವತಂತ್ರವಾದ ಅಧಿಕೃತ ಅಧ್ಯಯನವಿಲ್ಲದೆ ಹುಚ್ಚಾಟಗಳನ್ನು ಮಾಡುತ್ತಿರುವುದೇಕೆ? ಇದಕ್ಕೆಲ್ಲಾ ಅನುಮತಿ ಹೇಗೆ ನೀಡಲಾಗುತ್ತಿದೆ?
ಹುಲಿಗೆ ರೇಡಿಯೋ ಕಾಲರ್ ಹಾಕುವುದು ಕುತ್ತಿಗೆಗೆ. ಆದರೆ ಕಾಳಿಂಗಕ್ಕೆ ರೇಡಿಯೋ ಟ್ರಾನ್ಸ್ ಮೀಟರ್ ತೂರಿಸುವುದು ದೇಹದೊಳಗೆ. ಒಂದು ಹುಲಿ ಇನ್ನೊಂದು ಹುಲಿಯನ್ನು ನುಂಗುವುದಿಲ್ಲ. ಆದರೆ ಕಾಳಿಂಗ ಸ್ವಜಾತಿ ಭಕ್ಷಕ. ಅಂದರೆ ಗಾತ್ರದಲ್ಲಿ ದೊಡ್ಡದಿರುವ ಗಂಡು ಕಾಳಿಂಗಗಳು, ಗಾತ್ರದಲ್ಲಿ ಸಣ್ಣದಿರುವ ಹೆಣ್ಣನ್ನು ನುಂಗುತ್ತವೆ. ಅಲ್ಲದೇ ದೊಡ್ಡ ಕಾಳಿಂಗಗಳು ತನ್ನ ಟೆರಿಟರಿಗೆ ಬರುವ ಸಣ್ಣ ಪುಟ್ಟ ಕಾಳಿಂಗಗಳನ್ನೂ ತಿನ್ನುತ್ತವೆ. ಆ ಸಂದರ್ಭದಲ್ಲಿ ರೇಡಿಯೋ ಟ್ರಾನ್ಸ್ ಮೀಟರ್ ಅನ್ನು ಜೀರ್ಣಮಾಡಿಕೊಳ್ಳಲು ಹೇಗೆ ಸಾಧ್ಯ? ಆಗ ಒಂದೋ, ಕಾಳಿಂಗಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳಲಾಗದೆ ವಾಂತಿಯ ರೂಪದಲ್ಲಿ ಅದನ್ನು ಹೊರ ಹಾಕುತ್ತದೆ; ಇಲ್ಲವೇ, ಅದು ಅಸ್ವಸ್ಥಗೊಳ್ಳುತ್ತದೆ; ಹೆಚ್ಚಿನ ಸಂದರ್ಭಗಳಲ್ಲಿ ಅದು ಸತ್ತೇ ಹೋಗುತ್ತದೆ. ಕಾಳಿಂಗಗಳ ಅಧ್ಯಯನಕ್ಕೂ ಹುಲಿಗಳ ಅಧ್ಯಯನ ಪರಸ್ಪರ ಸಂಬಂಧವೇ ಇಲ್ಲ, ಎರಡೂ ಭಿನ್ನ ಭಿನ್ನ.
ಇದಲ್ಲದೇ, ಕಾಳಿಂಗಗಳ ದೇಹದ ಕೆಳಭಾಗದಲ್ಲಿ ಸಿರಿಂಜ್ ಮೂಲಕ ಅಕ್ಕಿ ಕಾಳಿನ ಗಾತ್ರದ ಉಪಕರಣ ಸೇರಿಸಲಾಗುತ್ತದೆ. ಇದನ್ನು PIT Tag (Passive Integrated Transponder)(ಪಿಟ್ ಟ್ಯಾಗ್) ಎನ್ನಲಾಗುತ್ತದೆ. ಇದೊಂದು ಮನುಷ್ಯರ ಆಧಾರ್ ಕಾರ್ಡ್ ರೂಪದ್ದು. ಇದರಲ್ಲಿ ಹಾವುಗಳ ತೂಕ, ಗಾತ್ರ, ಕ್ಷೇತ್ರ ವ್ಯಾಪ್ತಿ ಮೊದಲಾದ ಮಾಹಿತಿ ಸೇರಿಸಲಾಗುತ್ತದೆ.
ಈ ಪಿಟ್ ಟ್ಯಾಗ್ ಹಾಕಿರುವ ಯಾವುದೇ ಹಾವನ್ನು ಹಿಡಿದು ಅದನ್ನು ಸ್ಕ್ಯಾನ್ ಮಾಡಿದರೆ, ಅದು ಕಾಡಿನಲ್ಲಿ ಎಷ್ಟು ದೂರ ಚಲಿಸಿತ್ತು, ಯಾವ ಆಹಾರ ಸೇವಿಸಿತ್ತು, ಎಲ್ಲಿ ವಿಶ್ರಮಿಸಿತ್ತು, ಸಂತಾನಾಭಿವೃದ್ಧಿ ಹೇಗೆ ಮೊದಲಾದ ವಿಚಾರಗಳ ಅಧ್ಯಯನ ಸಾಧ್ಯ ಎಂದು ಆಗುಂಬೆಯ ಕಾಳಿಂಗ ಹಿಡಿಯುವವರು ಹೇಳುತ್ತಾರೆ. ಆದರೆ ಕಾಳಿಂಗದ ದೇಹದೊಳಗೆ ಈ ಪಿಟ್ ಟ್ಯಾಗ್ ಹಾಕುವುದರಿಂದ ಏನೂ ಸಮಸ್ಯೆಯಿಲ್ಲ, ಅದು ಸುರಕ್ಷಿತ ಎಂದು ಯಾವ ಅಧ್ಯಯನ ಹೇಳಿದೆ? ಆಗುಂಬೆಯ ಅಧ್ಯಯನಕಾರರು ‘ಇದು ಸಂಪೂರ್ಣ ಸುರಕ್ಷಿತ’ ಎಂದು ತಮಗೆ ತಾವೇ ಪ್ರಮಾಣ ಪತ್ರ ಕೊಟ್ಟು ಕೊಂಡಿರುವುದನ್ನು ಬಿಟ್ಟರೆ, ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಸುರಕ್ಷಿತ ಮಾನದಂಡಗಳೇ ಇಲ್ಲದೇ 180 ಕ್ಕೂ ಹೆಚ್ಚು ಕಾಳಿಂಗಗಳಿಗೆ ಈ ಉಪಕರಣ ಹೇಗೆ ಹಾಕಲಾಯಿತು? ಹೆಚ್ಚು ಕಡಿಮೆ ಆದರೆ, ಕಾಳಿಂಗಗಳು ಸತ್ತು ಹೋದರೆ ಜವಾಬ್ದಾರಿ ಯಾರದು? ಕಾಳಿಂಗ ಕಚ್ಚಿ ಮನುಷ್ಯರು ಸತ್ತ ನಿದರ್ಶನ ಇಲ್ಲ, ಮಲೆನಾಡಿನಲ್ಲಿ ಜನ ಕಾಳಿಂಗಗಳನ್ನು ಕೊಂದಿದ್ದಂತೂ ಮೊದಲೇ ಇಲ್ಲ, ಮಾನವ-ಕಾಳಿಂಗಸರ್ಪ ಸಂಘರ್ಷವೇ ಇಲ್ಲ. ಹೀಗಿರುವಾಗ ಇಂತಹದ್ದಕ್ಕೆಲ್ಲಾ ಅನುಮತಿ ಕೊಟ್ಟವರಾರು? ಯಾವ ಆಧಾರದ ಮೇಲೆ ಈ ಸಂಶೋಧನೆಗೆ ಅನುಮೋದನೆ ನೀಡಲಾಗಿದೆ? ಇದರ ಹಿಂದಿರುವ ಹಿತಾಸಕ್ತಿ ಯಾವುದು?
ಈಗ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿ ಎಂದು ಹೇಳಿಕೊಂಡು ಓಡಾಡುತ್ತಿರುವ ಗೌರಿಶಂಕರ್ B.Com ಓದಿಕೊಂಡು ಬೆಂಗಳೂರಿನಲ್ಲಿ ವಾಷಿಂಗ್ ಮೆಷಿನ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದವರು. ನಂತರ ರೊಮೋಲಸ್ ವೆಟೇಕರ್ ಜೊತೆ ಸೇರಿ ಕೆಲವು ವರ್ಷಗಳ ನಂತರ ಆಗುಂಬೆಗೆ ಬಂದರು. ಕಾಳಿಂಗ ಸಂಶೋಧನೆ ಎಂದರು! ಮೂಲತಃ ವಿಜ್ಞಾನದ ಹಿನ್ನೆಲೆ, ನೆಲಮೂಲದ ಜ್ಞಾನ ಎರಡರಲ್ಲಿ ಒಂದೂ ಇಲ್ಲದ ವ್ಯಕ್ತಿಯ ಅಧ್ಯಯನ ಎಷ್ಟು ವೈಜ್ಞಾನಿಕ ಮತ್ತು ವಿಶ್ವಾಸಾರ್ಹ? ಅಕಾಡೆಮಿಕ್ ಆಗಿ ವಿಜ್ಞಾನದ ಅಧ್ಯಯನ ಇಲ್ಲದ ಈತನಿಗೆ ಅಕಾಡೆಮಿಕ್ ಆಗಿ M.Sc, PhD ಹೇಗೆ ಸಿಕ್ಕಿತು? ಯಾವ ಆಧಾರದ ಮೇಲೆ ಸರ್ಕಾರ ಸಂಶೋಧನೆಗೆ ಅನುಮತಿ ನೀಡಿತು?
ಇನ್ನು ARRS ನ ಅಜಯ್ ಗಿರಿ ಕೂಡಾ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದವರು. ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಬರುವ ‘ಅಕೋಲ’ದವರು. ‘ವಿದರ್ಭ’ ಎಂದರೆ ಬರಪೀಡಿತ. ಅಲ್ಲಿ ಕಾಳಿಂಗ ಎಲ್ಲಿದೆ? ವಿಜ್ಞಾನದ ಅಧ್ಯಯನವೂ ಇಲ್ಲದ, ನೆಲಮೂಲದ ಜ್ಞಾನವೂ ಇಲ್ಲದ ಈತ ಕಾಳಿಂಗ ವಿಜ್ಞಾನಿ ಹೇಗಾದ? ಇಕಾಲಜಿಯ ಪ್ರಾಥಮಿಕ ಅಧ್ಯಯನ ಇಲ್ಲದವನಿಗೆ M.Sc ಹೇಗೆ ಸಿಕ್ಕಿತು? ಅಕಾಡೆಮಿಕ್ ಆಗಿ ಯಾವುದೇ ವೈಜ್ಞಾನಿಕ ಹಿನ್ನೆಲೆ ಇಲ್ಲದವರಿಂದ ಸಂಶೋಧನೆ ಹೆಸರಿನಲ್ಲಿ ಪ್ರಯೋಗಗಳನ್ನು ಏಕೆ ಮಾಡಿಸಬೇಕು? ಅಗತ್ಯ ಅರ್ಹತೆ ಮತ್ತು ವಿದ್ಯಾರ್ಹತೆ ಇಲ್ಲದವರಿಗೆ ಸಂಶೋಧನೆ ಹೆಸರಿನಲ್ಲಿ ಕಾಳಿಂಗಗಳ ಬದುಕಿನೊಳಗೆ ಹಸ್ತಕ್ಷೇಪ ಮಾಡಲು ಏನಕ್ಕೆ ಅವಕಾಶ ಕೊಡಲಾಗುತ್ತಿದೆ?
ಗೌರಿಶಂಕರ್ Hemadryad ಎಂಬ ನಿಯತಕಾಲಿಕೆಗೆ ಬರೆದ ಪ್ರಬಂಧದಲ್ಲಿ “ನಮಗೆ ಕಾಳಿಂಗ ರಕ್ಷಣೆಗೆ ಕರೆಬಂದ 83.8% ರಷ್ಟು ಸಂದರ್ಭಗಳಲ್ಲಿ ಜನರು ಹಾವನ್ನು ಒಂಟಿಯಾಗಿ ಬಿಡುವ ಬದಲು ಕೊಲ್ಲಲು ಬಯಸಿದ್ದರು. ಕಾಳಿಂಗಗಳು ಮನುಷ್ಯ ವಾಸದ ಸುತ್ತಮುತ್ತ ಎದುರಾಗಲಿ, ಇಲ್ಲವೇ ಬೇರೆಡೆ ಬಯಲು ಪ್ರದೇಶಗಳಲ್ಲಿ ಎದುರಾಗಲಿ ಕೊಲ್ಲಲ್ಪಡುವ ಅಪಾಯವು ಹೆಚ್ಚಾಗಿದೆ. ಹಗಲಿನಲ್ಲಿ ಬಯಲು ಪ್ರದೇಶಗಳಲ್ಲಿ ಸಣ್ಣ ಕಾಳಿಂಗಗಳು ಓಡಾಡುವಾಗ, ತಮ್ಮ ರಕ್ಷಣೆಗಾಗಿ ಹೆಡೆ ಎತ್ತುವುದು, ಬುಸುಗುಟ್ಟುವುದು ಮೊದಲಾದವನ್ನು ಮಾಡಿದಾಗ, ಅವುಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಹತ್ಯೆ ಮಾಡಲಾಗುತ್ತದೆ. ದೊಡ್ಡವುಗಳಿಗಿಂತ ಸಣ್ಣ ಕಾಳಿಂಗಗಳನ್ನು ಕೊಲ್ಲುವ ಸಾಧ್ಯತೆ ಹೆಚ್ಚು. ಇದಷ್ಟೇ ಅಲ್ಲದೇ, ಹೆಚ್ಚಿನ ಸಂಖ್ಯೆಯ ಸರ್ಪಗಳನ್ನು ಕೊಲ್ಲಲಾಗುತ್ತದೆ, ಅದು ಸಂರಕ್ಷಣಾ ತಂಡಕ್ಕೆ ಎಂದಿಗೂ ವರದಿಯಾಗುವುದಿಲ್ಲ. ಈ ಅಂಶವು ಕಾಳಿಂಗಗಳ ಸಂಖ್ಯೆಯ ಇಳಿಕೆಗೆ ಕಾರಣವಾಗಿದೆ…” ಇತ್ಯಾದಿ ಹಸಿ ಹಸಿ ಸುಳ್ಳುಗಳನ್ನು ಬರೆದಿದ್ದಾರೆ. ವಸ್ತುನಿಷ್ಠತೆ ಇಲ್ಲದ ಈ ಪ್ರಬಂಧವನ್ನು ವೈಜ್ಞಾನಿಕ ಸಂಶೋಧನೆ ಎನ್ನಲು ಸಾಧ್ಯವೇ?
ಈ ಗೌರಿಶಂಕರ್, ಅಜಯ್ ಗಿರಿ ಮತ್ತವರ ಒಂದಿಷ್ಟು ಶಿಷ್ಯಂದಿರು ಚೆನ್ನಾಗಿ ಹಾವು ಹಿಡಿಯುತ್ತಾರೆ. ದೈತ್ಯ ಕಾಳಿಂಗ ಸರ್ಪಗಳನ್ನು ಸುಲಲಿತವಾಗಿ ನಿರ್ವಹಿಸುವ ಕೌಶಲ್ಯ ಅವರಿಗಿದೆ. ಈ ವಿಷಯದಲ್ಲಿ ಅವರು ತಜ್ಞರು. ಕರ್ನಾಟಕ ಅರಣ್ಯ ಇಲಾಖೆ ತನ್ನ ಸಿಬ್ಬಂದಿಗಳಿಗೆ ಹಾವು ಹಿಡಿಯವ ತರಬೇತಿಗೆ ಇಂತಹವರ ಸೇವೆಯನ್ನು ಪಡೆದುಕೊಳ್ಳಬಹುದು. ಅದನ್ನು ಬಿಟ್ಟು ದೂರಶಿಕ್ಷಣದಲ್ಲಿ ಪದವಿ ಪಡೆದಿರುವವರಿಗೆಲ್ಲಾ ಮಹತ್ವದ ಸಂಶೋಧನೆಗೆ ಅವಕಾಶ ಮಾಡಿಕೊಟ್ಟಿರುವುದು ಅಕ್ಷಮ್ಯ.
ಹಿಂದೆ ಆಗುಂಬೆಯ ಸುತ್ತಮುತ್ತ ಹಾವು ಹಿಡಿದುಕೊಂಡು ಓಡಾಡುತ್ತಿದ್ದವೆರಲ್ಲಾ, ಇವತ್ತು ಸಂಶೋಧನೆಯ ಮುಖವಾಡದ ವಾಣಿಜ್ಯಿಕ ಕೇಂದ್ರಗಳಿಂದಾಗಿ ವಿಜ್ಞಾನಿಗಳೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. Pseudo science ಹಬ್ಬಿಸುತ್ತಿದ್ದಾರೆ. ಭಾರತದ ಅಕಾಡೆಮಿಕ್ ಅಧ್ಯಯನಗಳು ಈ ಮಟ್ಟಕ್ಕೆ ಪಾತಾಳಕ್ಕಿಳಿದಿವೆ. ನಮ್ಮಲ್ಲಿ ಸೂಕ್ತ ಅಧ್ಯಯನ ಮಾಡುವುದಕ್ಕೆ ವಿಜ್ಞಾನಿಗಳು, ಸಂಶೋಧಕರ ಕೊರತೆ ಇದೆಯೇ?
ಇವತ್ತು ಅನರ್ಹರು ಸಂಶೋಧನೆ ಹೆಸರಿನಲ್ಲಿ ರೆಸಾರ್ಟ್ ನಡೆಸುವುದು, ಕಾಳಿಂಗ ಹಿಡಿಯುವುದು, ಬಂಧನದಲ್ಲಿರಿಸುವುದು, ಫೋಟೋ ಶೂಟ್, ವಿಡಿಯೋ ಚಿತ್ರೀಕರಣ, ವನ್ಯಜೀವಿ ಚಲನಚಿತ್ರ, ಅಕ್ರಮ ಕಾಡು ಪ್ರವೇಶ, ವನ್ಯಜೀವಿಗಳ ಶೋಷಣೆ, ಕಾಡು ಒತ್ತುವರಿ, ರಸ್ತೆ ನಿರ್ಮಾಣ, ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಭೂಮಿ ಖರೀದಿ ಮೊದಲಾದ ಹತ್ತು ಹಲವು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ತಮ್ಮ ವಾಣಿಜ್ಯಿಕ ಲಾಭಕ್ಕಾಗಿ ವನ್ಯಜೀವಿಗಳನ್ನು ಮತ್ತು ಪರಿಸರವನ್ನು ಶೋಷಿಸುತ್ತಿದ್ದಾರೆ. ಅರಣ್ಯ ಇಲಾಖೆ ಇಂತಹ ನಕಲಿ ಸಂಶೋಧಕರನ್ನು ಕಾಡುಗಳಿಂದ ಹೊರಗಟ್ಟಬೇಕು. ಇವರ ಸಂಶೋಧನೆಯ ಮುಖವಾಡದ ವಾಣಿಜ್ಯಿಕ ಕೇಂದ್ರಗಳನ್ನು ಬಂದ್ ಮಾಡಿಸಬೇಕು.
ಸರ್ಕಾರ ಅಧ್ಯಯನ, ಸಂಶೋಧನೆ ಮೊದಲಾದ ಅಕಾಡೆಮಿಕ್ ಸಂಗತಿಗಳಿಗೆ ಅನುಮತಿಯನ್ನು ಅಧಿಕೃತವಾದ ಉನ್ನತ ಶಿಕ್ಷಣ, ಆಳವಾದ ಅಕಾಡೆಮಿಕ್ ಜ್ಞಾನ, ಸಂರಕ್ಷಣೆಯ ಬಗೆಗೆ ಬದ್ಧತೆ ಇರುವವರಿಗೆ ಕೊಡಲಿ. ಅದನ್ನು ಬಿಟ್ಟು ವಿಜ್ಞಾನದ ಗಂಧ ಗಾಳಿ ಇಲ್ಲದವರು ಸಂಶೋಧನೆ ಹೆಸರಿನಲ್ಲಿ ದಂಧೆ ಮಾಡಲು, Pseudo science ಹಬ್ಬಿಸಲು ಏಕೆ ಅವಕಾಶ ನೀಡಬೇಕು. ಕನ್ನಡ ನಾಡಿನಲ್ಲಿ ಸಂಶೋಧಕರಿಗೆ ಬರ ಬಂದಿದೆಯಾ?
(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ಸ್ವಂತ ಅಭಿಪ್ರಾಯಗಳು)
ನಾಗರಾಜ ಕೂವೆ
ಪರಿಸರ ಹೋರಾಟಗಾರರು
ಇದನ್ನೂ ಓದಿ- http://ಸಂಶೋಧನೆ, ಸಂರಕ್ಷಣೆ ಬೇಕೆ ಬೇಕು ಆದರೆ ಆ ಹೆಸರಿನಲ್ಲಿ ‘ಭಕ್ಷಣೆ’ ಬೇಡವೆ ಬೇಡ… https://kannadaplanet.com/research-is-needed-but-not-eating-in-the-name-of-it/