ಇದೀಗ ಉತ್ತರ ಕನ್ನಡ ಬ್ರಾಹ್ಮಣ v/ s ಇತರ ಜಾತಿ ಎಂಬ ಮಟ್ಟಕ್ಕೆ ಚುನಾವಣೆಯ ತಿರುವು ಬಂದಿದೆ. ಹಾಗಂತ ಬ್ರಾಹ್ಮಣರೆಲ್ಲ ಬಿಜೆಪಿ ಜೊತೆಗೇನೂ ಇಲ್ಲ. ಕಾಂಗ್ರೆಸ್ ಬ್ರಾಹ್ಮಣರು ಕಾಂಗ್ರೆಸ್ ಜೊತೆಗೇ ಇದ್ದಾರೆ. ಬಿಜೆಪಿಯಲ್ಲಿನ ಹಿಂದುತ್ವ ಅನುಸರಿಸಿದ ಹಿಂದುಳಿದ ಯುವಕರಿಗೆ ಬಿಜೆಪಿ ಬ್ರಾಹ್ಮಣರ ಈ ನಡಿಗೆ ತೀವ್ರ ಆಘಾತ ನೀಡಿದೆ – ಸುಬ್ರಹ್ಮಣ್ಯ ಯಾಜಿ, ಹೊನ್ನಾವರ
ಉತ್ತರ ಕನ್ನಡ ಕ್ಷೇತ್ರದಲ್ಲಿ ಬ್ರಾಹ್ಮಣ ಮತದಾರರ ಸಂಖ್ಯೆ 1.6 ಲಕ್ಷ. ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸುವಷ್ಟು ಶಕ್ತಿ ಅವರಿಗಿಲ್ಲ. ಉತ್ತರ ಕನ್ನಡದ ಒಟ್ಟು ಮತದಾರರು 16,22,857. ಹಿಂದುತ್ವದ ಆಧಾರದ ಮೇಲೆ ಅನಂತ ಕುಮಾರ ಹೆಗಡೆ ಹಿಂದುಳಿದ ಜನರ ಅಪಾರ ಬೆಂಬಲದಿಂದ ಗೆಲ್ಲುತ್ತಲೇ ಬಂದರು. ಈ ಬಾರಿ ಅವರನ್ನು ತಪ್ಪಿಸಿ ಕಾಗೇರಿ ವಿಶ್ವೇಶ್ವರ ಹೆಗಡೆ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ.
ಇದೀಗ ಹವ್ಯಕರು ಅವರ ಸಂಘ ಸಂಸ್ಥೆಗಳ ಮೂಲಕ ತಮ್ಮ ಜಾತಿಯ ವಿಶ್ವೇಶ್ವರ ಹೆಗಡೆಯವರನ್ನು ಗೆಲ್ಲಿಸುವಂತೆ ಪ್ರಚಾರ ಪ್ರಾರಂಭಿಸಿದ್ದಾರೆ. ಹವ್ಯಕರು ಗುಂಪು ಗುಂಪಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಸಭೆ ಸಮಾರಂಭದಲ್ಲಿ ಇದೇ ಚಳವಳಿ ಪ್ರಾರಂಭಿಸಿದ್ದಾರೆ. ಎಂ ಎಲ್ ಎ ನಾಯ್ಕರು, ಇನ್ನು ಎಂ ಪಿ ಕೂಡ ಹಿಂದುಳಿದ ಜಾತಿ (ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಹಿಂದುಳಿದ ಮರಾಠಾ ಸಮುದಾಯದವರು) ಆದರೆ ಹವ್ಯಕರು ʻಪ್ಯಾಟಿಗೆ ಹೊಪಲೇ ಕಷ್ಟʼ ಎಂದು ಹೇಳುತ್ತಿರುವುದು ತಳ ಸಮುದಾಯದ ಯುವಕರನ್ನು ಕೆರಳಿಸುತ್ತಿದೆ.
ವಿಶ್ವೇಶ್ವರ ಹೆಗಡೆ ಜೊತೆ ಒಳ್ಳೆ ಸಂಬಂಧ ಇಟ್ಟುಕೊಂಡಿರುವ ಆರ್.ವಿ. ದೇಶಪಾಂಡೆ ಕೂಡಾ ಹವ್ಯಕರ ಈ ನಡೆಯಿಂದ ಕಂಗಾಲಾಗಿದ್ದಾರಂತೆ. ಯಾಕೆಂದರೆ ಅವರು ಕೊಂಕಣಿ ಬ್ರಾಹ್ಮಣ ಮತ್ತು ಹಿಂದುಳಿದ ಜನರನ್ನೂ ಜೊತೆಗೆ ಇಟ್ಟುಕೊಂಡಿದ್ದಾರೆ.
ಹವ್ಯಕ ಅಭ್ಯರ್ಥಿಯನ್ನೇ ಗೆಲ್ಲಿಸೋಣ ಎಂಬ ಒಂದು ಹವ್ಯಕ ಹಾಡು ಇದೀಗ ಹಿಂದುಳಿದ ವರ್ಗದ ಮತದಾರರಲ್ಲಿ ಆಕ್ರೋಶ ಮೂಡಿಸಿದೆ. ಈವರೆಗೆ ನಾವು ಅನಂತಕುಮಾರ ಹೆಗಡೆಯವರನ್ನು ಗೆಲ್ಲಿಸಿಲ್ಲವೆ? ಅವರು ಹವ್ಯಕರಲ್ಲವೇ? ನಿಮ್ಮ ಹಿಂದುತ್ವ ನಕಲಿಯೇ ಎಂದು ಪ್ರಶ್ನಿಸುತ್ತಿದ್ದಾರೆ.
ಅಸಲಿಗೆ ಹೀಗೆ ಆಗಲು ಕಾರಣ ವಿಶ್ವೇಶ್ವರ ಹೆಗಡೆಯವರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಲಾಗಿದೆ. ಅಲ್ಲಿ ಗೆದ್ದಿದ್ದು ಕಾಂಗ್ರೆಸ್ ನ ಈಡಿಗ ಅಭ್ಯರ್ಥಿ ಭೀಮಣ್ಣ ನಾಯ್ಕ. ಬಿಜೆಪಿಯ ಬ್ರಾಹ್ಮಣ ಮುಖಂಡರು ವಿಶ್ವೇಶ್ವರ ಹೆಗಡೆ ಚುನಾವಣೆಗೆ ನಿಂತಾಗ ಎದುರಾಳಿ ಈಡಿಗ ಆಗಿದ್ದಾಗ ” ನಾಯ್ಕರು ಗೆಲ್ಲಲಾಗ..ಊರು ತುಂಬಾ ಗೂಂಡಾಗಿರಿ ಮಾಡ್ತ..” ಎಂದು ಹೇಳುತ್ತ ಬಂದವರು. ಅಲ್ಲಿ ಕಾಗೇರಿಯನ್ನು ಹಿಂದುಳಿದವರು ಸೋಲಿಸಿದರು ಎಂಬ ಸಿಟ್ಟಿದೆ. ಇದೇ ಜನರು ಅನಂತ ಕುಮಾರ ಚುನಾವಣೆ ನಿಂತಾಗ ಮುಸ್ಲಿಂಮರ ಭಯ ಹುಟ್ಟಿಸಿ ಹಿಂದೂಗಳ ವೋಟನ್ನು ಕ್ರೋಢೀಕರಣ ಮಾಡುವ ರಾಜಕೀಯ ಕುಟಿಲ ನೀತಿ ಅನುಸರಿಸಿಕೊಂಡು ಬಂದವರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯೆಯಲ್ಲಿ ಕಾಂಗ್ರೆಸ್ ನ ನಾಯಕರಿದ್ದಾರೆ. ಶೇ 30 ಕ್ಕೂ ಹೆಚ್ಚು ಕಾಂಗ್ರೆಸ್ ಮತದಾರರೂ ಇದ್ದಾರೆ. ಆದರೆ ಜಾತಿ ಬಂದಾಗ ಜಾತಿ , ಮತೀಯ ಬಂದಾಗ ಮತೀಯ ಎಂಬ ತಂತ್ರಗಾರಿಕೆಯನ್ನು ಉಪಯೋಗಿಸಿ ಬಿಜೆಪಿಯಲ್ಲಿ ಬಹುಸಂಖ್ಯೆಯ ಬ್ರಾಹ್ಮಣರನ್ನು ಒಂದಾಗಿಸಿಡಲಾಗಿತ್ತು.
ಇದೀಗ ಉತ್ತರ ಕನ್ನಡ ಬ್ರಾಹ್ಮಣ v/ s ಇತರ ಜಾತಿ ಎಂಬ ಮಟ್ಟಕ್ಕೆ ಚುನಾವಣೆಯಲ್ಲಿ ತಿರುವು ಬಂದಿದೆ. ಹಾಗಂತ ಬ್ರಾಹ್ಮಣರೆಲ್ಲ ಬಿಜೆಪಿ ಜೊತೆಗೇನೂ ಇಲ್ಲ. ಕಾಂಗ್ರೆಸ್ ಬ್ರಾಹ್ಮಣರು ಕಾಂಗ್ರೆಸ್ ಜೊತೆಗೇ ಇದ್ದಾರೆ. ಬಿಜೆಪಿಯಲ್ಲಿನ ಹಿಂದುತ್ವ ಅನುಸರಿಸಿದ ಹಿಂದುಳಿದ ಯುವಕರಿಗೆ ಬಿಜೆಪಿ ಬ್ರಾಹ್ಮಣರ ಈ ನಡಿಗೆ ತೀವ್ರ ಆಘಾತ ನೀಡಿದೆ. ಅನಂತಕುಮಾರ ಹೆಗಡೆಯ ಶಕ್ತಿಯೇ ಹಿಂದುಳಿದ ಯುವಕರು. ಈ ವಿಷಯ ತಿಳಿದ ಅವರೂ ಕೆಂಡಾಮಂಡಲರಾಗಿದ್ದಾರಂತೆ.
ಇದು ಉತ್ತರ ಕನ್ನಡ ಜಿಲ್ಲೆಯ ಚುನಾವಣೆ ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರಬಹುದು ಎಂದು ನೋಡಬೇಕಿದೆ.
ಸುಬ್ರಹ್ಮಣ್ಯ ಯಾಜಿ, ಹೊನ್ನಾವರ
ಇದನ್ನೂ ಓದಿ- ಉತ್ತರ ಕನ್ನಡದಲ್ಲಿ ವೈರಲ್ ಆದ ಬ್ರಾಹ್ಮಣರ ಹಾಡು: ನಿಮಗೆ ಹಿಂದುಳಿದವರ ಮತ ಬೇಡವೇ ಎಂದು ಟೀಕಿಸಿದ ಅನಂತ್ ಕುಮಾರ್ ಹೆಗಡೆ ಬೆಂಬಲಿಗರು