ಕಡಿಮೆಯಾದ ಕಾಫಿ ಇಳುವರಿ; ಹೋಟೆಲ್ ಗಳಲ್ಲಿ ಕಾಫಿ ಬೆಲೆ ಹೆಚ್ಚಳ

Most read

ಬೆಂಗಳೂರು: ಕಾಫಿ ಪ್ರಿಯರಿಗೊಂದು ಕಹಿ ಸುದ್ದಿ. ಕಾಫಿ ಇಳುವರಿ ಕಡಿಮೆಯಾಗಿದ್ದು ಕಾಫಿ ಪುಡಿಯ ಬೆಲೆ ಏರಿಕೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಪ್ರತಿ ಕೆಜಿಗೆ 100-200 ರೂ ಹೆಚ್ಚಳವಾಗಿದ್ದು, ಮುಂದಿನ 6 ತಿಂಗಳವರೆಗೆ ಕಾಪಿ ಪುಡಿಯ ಬೆಲೆ ಕೆಜಿಗೆ 200 ರೂ.ವರೆಗೆ ಏರುತ್ತಲೇ ಇರುತ್ತದೆ ಎಂದು ಹೇಳಲಾಗುತ್ತಿದೆ.

ಹವಾಮಾನಕ್ಕೆ ಅನುಗುಣವಾಗಿ ಕಾಫಿ ಉತ್ಪಾದನೆಯಾಗುತ್ತದೆ. ಅರೇಬಿಕಾ ಕಾಫಿಗೆ 7 ತಿಂಗಳು ಮತ್ತು ರೊಬಸ್ಟಾ ಕಾಫಿಗೆ ಉತ್ಪಾದನೆಗೆ 9 ತಿಂಗಳು ಬೇಕಾಗುತ್ತದೆ. ಆದರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಕಾಫಿ ಇಳುವರಿ ಕಡಿಮೆಯಾಗಿದೆ ಎಂದು ಕಾಫಿ ಬೆಳೆಗಾರರು ಹೇಳುತ್ತಿದ್ದಾರೆ.

ಹವಾಮಾನ ಬದಲಾವಣೆಯಿದಾಗಿ ಇಡೀ ಜಗತ್ತಿನಲ್ಲಿ ಕಾಫಿ ಇಳುವರಿ ಶೇ.20-30ರಷ್ಟು ಕಡಿಮೆಯಾಗಿದೆ. ಕಾಫಿ ಪುಡಿ ಮಾರಾಟಗಾರರು ಬೆಲೆ ಏರಿಸದೆ ಬೇರೆ ಮಾರ್ಗವೇ ಇಲ್ಲ. ಈಗಾಗಲೇ ಬೆಲೆ ಏರಿಕೆಯಾಗಿದ್ದು ಇನ್ನೂ ಬೆಲೆ ಹೆಚ್ಚುವ ಸಾಧ್ಯತೆಗಳಿವೆ. ಕಾಫಿ ತವರುಮನೆಯಾಗಿರುವ ಬ್ರೆಜಿಲ್‌ ನಲ್ಲೂ ಕಾಫಿ ಇಳುವರಿ ಕಡಿಮೆಯಾಗಿದೆ. ಆಮದು ಮಾಡಿಕೊಳ್ಳುವ ಕಾಫಿ ಪುಡಿಯ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು. ಇಲ್ಲವೇ ರಫ್ತು ಮೇಲೆ ನಿಯಂತ್ರಣವನ್ನು ಹೇರಬೇಕು. ಆಗ ಕಾಫಿ ಬೆಲೆ ನಿಯಂತ್ರಣಕ್ಕೆ ಬರಬಹುದು ಎಂದು ಕಾಫಿ ಬೆಳೆಗಾರರರು ಹೇಳುತ್ತಾರೆ.

ಇನ್ನು ಪುಡಿಯ ಬೆಲೆ ಏರಿಕೆಯಾದ ಮೇಲೆ ಹೋಟೆಲ್‌ ಗಳಲ್ಲಿ ಕಾಫಿ ಬಲೆ ಏರಿಕೆಯಾಗದೆ ಇರುತ್ತದೆಯೇ? ಖಂಡಿತಾ ಆಗಿಯೇ ಆಗುತ್ತದೆ. ಕೆಲವು ಹೋಟೆಲ್‌ ಗಳಲ್ಲಿಸದ್ದಿಲ್ಲದೆ ಕಾಫಿ ಬೆಲೆ ಹೆಚ್ಚಾಗಿದೆ. ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಕಾಫಿ ಬೆಲೆ 15 ರೂ.ಗಳಿಂದ 40 ರೂವರೆಗೆ ನಿಗದಿಯಾಗಿದೆ. ಐಷಾರಾಮಿ, ಹವಾನಿಯಂತ್ರಿತ ಮತ್ತು ಸ್ಟಾರ್‌ ಹೋಟೆಲ್‌ ಗಳಲ್ಲಿ ಕಾಫಿಯ ಬೆಲೆ ಈಗಾಗಲೇ 50-100 ರೂ. ವರೆಗೆ ಹೆಚ್ಚಳವಾಗಿದೆ. ಕೆಲವು ಹೋಟೆಲ್‌ ಗಳಲ್ಲಿ ಉತ್ತಮ ಗುಣಮಟ್ಟದ ಕಾಫಿ ಪುಡಿಯನ್ನೇ ಬಳಸುತ್ತಾರೆ. ಗುಣಟ್ಟದ ಕಾಫಿ ಪುಡಿಯ ಬೆಲೆ ಕೆಜಿಗೆ 750 ರೂ. ಇದೆ. ಕಾಫಿ ಪುಡಿಯ ಬೆಲೆ ಇನ್ನಷ್ಟು ಏರಿಕೆಯಾದರೆ ಕಾಫಿಯ ಬೆಲೆಯನ್ನು ಹೆಚ್ಚಿಸಲೇಬೇಕಾಗುತ್ತದೆ ಎಂದು ಹೋಟೆಲ್‌ ಉದ್ದಿಮೆದಾರರು ಹೇಳುತ್ತಾರೆ. ಇನ್ನೂ ಕೆಲವು ಹೋಟೆಲ್‌ ಮಾಲೀಕರು ಹೆಚ್ಚುವರಿ ಬೆಲೆಯನ್ನು ನಾವೇ ಭರಿಸಿಕೊಂಡು ಗ್ರಾಹಕರಿಗೆ ಬೆಲೆಯನ್ನುಏರಿಸಿಲ್ಲ. ಆದರೆ ಇದೇ ರೀತಿ ಬೆಲೆ ಹೆಚ್ಚಳವಾದರೆ ಬೆಲೆ ಏರಿಕೆ ಅನಿವಾರ್ಯ ಎಂದು ಹೇಳುತ್ತಾರೆ.

More articles

Latest article