ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಗಲಭೆಗಳ ಹಿನ್ನೆಲೆಯಲ್ಲಿ ಅಲ್ಲಿನ ನಾಗರೀಕರ ಆಪೇಕ್ಷೆಯಂತೆ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಅಲ್ಲಿಗೆ ಭೇಟಿ ನೀಡಿದಾಗ ಅಲ್ಲಿನ ಮುಖಂಡರು ಮತ್ತು ನಿವಾಸಿಗಳು ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ವರ್ಗಾಯಿಸಿದ್ದೇವೆ. ಕೂಡಲೇ ಬದಲಾಯಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ತಡ ಮಾಡಿದೆವು. ಈ ಬಾರಿಯೂ ಧ್ವನಿ ಎತ್ತಿದ್ದರಿಂದ ಬದಲಾಯಿಸಿದ್ದೇವೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಯಾರು ಏನೇ ಹೇಳಿದರೂ, ಸರ್ಕಾರ ಕೋಲುಗಲಭೆಗಳನ್ನು ಸಹಿಸುವುದಿಲ್ಲ. ಆ ಭಾಗದಲ್ಲಿ ಶಾಂತಿ ನೆಲೆಸಬೇಕು. ದಕ್ಷಿಣ ಕನ್ನಡ ಜಿಲ್ಲೆ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮಾದರಿಯಾಗಿರುವ ಜಿಲ್ಲೆ. ಯಾರೇ ಶಾಂತಿ ಕದಡುವುದಕ್ಕೆ ಪ್ರಯತ್ನಿಸಿದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕರವಾಳಿ ಭಾಗದ ಜನ ಪ್ರಜ್ಞಾವಂತರಿದ್ದು, ಶಾಂತಿ ಕಾಪಾಡುವುದು ಬಹಳ ಮುಖ್ಯ ಎಂದು ಹಿಂದೆಯೂ ತಿಳಿಸಿದ್ದೆ. ಇದು ಹೀಗೆ ನಡೆಯುತ್ತಿದ್ದರೆ ಸರ್ಕಾರ ಸಹಿಸುವುದಕ್ಕೆ ಆಗುತ್ತದೆಯೇ? ಎಂದು ಪ್ರಶ್ನಿಸಿದರು.
ಅಧಿಕಾರಿಗಳನ್ನು ಅನಿವಾರ್ಯವಾಗಿ ಬದಲಾಯಿಸಬೇಕಾದ ಪರಿಸ್ಥಿತಿ ಬಂದಿದ್ದರಿಂದ ಮಂಗಳೂರು ಪೊಲೀಸ್ ಕಮಿಷನರ್, ದಕ್ಷಿಣ ಕನ್ನಡ ಎಸ್‌ಪಿ, ಉಡುಪಿ ಎಸ್‌ಪಿಯನ್ನು ಬದಲಾಯಿಸಿದ್ದೇವೆ. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಈಗಾಗಲೇ ಹೊಸ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಜನಸಮುದಾಯವು ಶಾಂತಿ ಸ್ಥಾಪನೆಗೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.
ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚನೆಗೆ ಕಾಲಾವಕಾಶ ಬೇಕಾಗಿತ್ತು. ನಿನ್ನೆ ಡಿಜಿಯವರೊಂದಿಗೆ ಚರ್ಚಿಸಿದ್ದೇನೆ. ಕಾರ್ಯಪಡೆಯನ್ನು ಯಾವ ರೀತಿ ನಿಯೋಜಿಸಬೇಕು. ಅವರಿಗೆ ನೀಡಬೇಕಾದ ಅಧಿಕಾರದ ಬಗ್ಗೆ ಚರ್ಚಿಸಲಾಗಿದೆ. ಉಡುಪಿ, ಮಂಗಳೂರು ಮತ್ತು ಶಿವಮೊಗ್ಗದಲ್ಲಿ ನಿಯೋಜಿಸುತ್ತೇವೆ ಎಂದರು.
ಸಚಿವ ದಿನೇಶ್ ಗುಂಡೂರಾವ್ ಅವರು ಮೊದಲಿನಿಂದಲೂ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಬೇಡ ಎಂದಿದ್ದರು. ಅವರು ಈಗ ಬೆಳವಣಿಗೆ ನಂತರ ಹೊಸದಾಗಿ ಹೇಳಿಲ್ಲ. ನನಗೆ ದೂರವಾಗುತ್ತದೆ. ಆ ಭಾಗದಲ್ಲಿರುವವರಿಗೆ ಉಸ್ತುವಾರಿ ನೀಡಿದರೆ ಒಳ್ಳೆಯದು ಎಂದಿದ್ದರು. ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟದ್ದು ಎಂದು ಪ್ರತಿಕ್ರಿಯಿಸಿದರು.
ನಾವು ರಾಜ್ಯದ ಯಾವುದೇ ಭಾಗವನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಕರಾವಳಿ ಇರಬಹುದು, ಉತ್ತರ ಕರ್ನಾಟಕ ಇರಬಹುದು, ಮತ್ತೊಂದು ಭಾಗ ಅಗಿರಬಹುದು. ಯಾವ ಜಿಲ್ಲೆಯನ್ನೂ ನಿರ್ಲಕ್ಷ್ಯ ಮಾಡುವುದಿಲ್ಲ. ಕರಾವಳಿ ಭಾಗದಲ್ಲಿ ಹೆಚ್ಚಿನ ರೀತಿಯಲ್ಲಿ ಗಮನ ಹರಿಸಬೇಕಿದೆ, ಅದನ್ನು ಮಾಡುತ್ತೇವೆ ಎಂದು ಸಚಿವರು ಹೇಳಿದರು.

 
                                    
