ಮೈಸೂರು: ರಾಜ್ಯದಾದ್ಯಂತ ಲೋಕಸಭಾ ಚುನಾವಣಾ ಪ್ರಚಾರ ಕಾವು ಪಡೆದುಕೊಂಡಿದೆ. ಸಿಎಂ ಸಿದ್ದರಾಮಯ್ಯನವರು ಕೂಡ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಮೈಸೂರಿನಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ವೇಳೆ ಅಚ್ಚರಿಯ ಬೆಳವಣಿಗೆ ನಡೆದು, ತವರು ಕ್ಷೇತ್ರದಲ್ಲೇ ತಮ್ಮ ನಿವೃತ್ತಿ ಘೋಷಿಸುವ ಮೂಲಕ ಅವರ ಕೋಟ್ಯಾಂತರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದ್ದಾರೆ.
ಮೈಸೂರಿನಲ್ಲಿ ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನನಗೆ ವಯಸ್ಸಾಗುತ್ತಿದೆ. ಮುಂದಿನ ನಾಲ್ಕು ವರ್ಷಗಳ ಬಳಿಕ ವಿಧಾನಸಭಾ ಚುನಾವಣೆ ಎದುರಾಗಲಿದೆ. ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲಿದ್ದೇನೆ ಎನ್ನುವ ಮಾತುಗಳನ್ನಾಡಿದ್ದಾರೆ.
ರಾಜಕೀಯದಿಂದ ನಿವೃತ್ತಿ ಪಡೆಯುವುದರ ಬಗ್ಗೆ ಹಲವು ಕಾರಣಗಳನ್ನು ತಿಳಿಸಿದ್ದಾರೆ. ಅವರ ದೇಹಸ್ಥಿತಿ, ಆರೋಗ್ಯದ ಬಗ್ಗೆ ಅವರಿಗೆ ಗೊತ್ತಿರುತ್ತದೆ. ನನಗೆ ಮೊದಲಿನಂತೆ ಉತ್ಸಾಹಭರಿತವಾಗಿ ಕೆಲಸ ಮಾಡಲು ಆಗುತ್ತಿಲ್ಲ. ನನಗೆ ಯಾವ ಆತಂಕವೂ ಇಲ್ಲ. ಆತಂಕ ಇದ್ದರೆ ಮಾತ್ರ ಟೆನ್ಶನ್ ಇರುತ್ತದೆ. ಹೀಗಾಗಿ ನಾನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.
2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಸಂಪೂರ್ಣ ಸಿಎಂ ಆಗಿ ಆಡಳಿತ ನಡೆಸಿ, ದಾಖಲೆ ಬರೆದಿದ್ದರು. ಇದೀಗ ಈ ಬಾರಿಯೂ ಸಿಎಂ ಸ್ಥಾನ ಅಲಂಕರಿಸಿದ್ದಾರೆ. ಐದು ವರ್ಷಗಳ ಕಾಲ ಪೂರ್ಣ ಪ್ರಮಾಣದ ಸಿಎಂ ಆಗಿ ಮುಂದುವರೆದರೆ ಮತ್ತೊಂದು ದಾಖಲೆಯಾಗುತ್ತದೆ. ಆದರೆ ಇದರ ನಡುವೆ ಕಾಂಗ್ರೆಸ್ ನಲ್ಲಿ ಲೋಕಸಭಾ ಚುನಾವಣೆ ಬಳಿಕ ಅಥವಾ ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆಯಾಗುತ್ತೆ ಎಂಬ ಮಾತು ಕೇಳಿ ಬರುತ್ತಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಅವರೇ ರಾಜಕೀಯ ನಿವೃತ್ತಿ ಬೇರೆ ಘೋಷಿಸಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯ ಬಳಿಕ ಸಿಎಂ ಸ್ಥಾನದ ಬದಲಾವಣೆಯ ಕುರಿತ ಚರ್ಚೆಗಳಿಗೆ ಯಾವ ತಿರುವು ಸಿಗುತ್ತದೆ ಎಂದು ಕಾದು ನೋಡಬೇಕಿದೆ.