ವಿಜಯಪುರ: ಕಳೆದ ಹತ್ತು ವರ್ಷದಿಂದ ದೇಶದ ಪ್ರಧಾನಿಯಾಗಿರುವ ಮೋದಿ ಬಡವರ ಆರ್ಥಿಕತೆಗೆ ಬಲ ತುಂಬುವ ಕೆಲಸ ಮಾಡಿಲ್ಲ. ಅಧಿಕಾರ ಹಿಡಿದ ನಂತರ ಎಂದೂ ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳ ಕುರಿತು ಚರ್ಚೆ ಮಾಡಿಲ್ಲ. ಈಗ ಸೋಲಿನ ಭಯದಲ್ಲಿ ಹತಾಷೆಯಿಂದ ದ್ವೇಷದ ಭಾಷಣ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮಾಡಿದರು.
ವಿಜಯಪುರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆಗಮಿಸಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು ಮಾತನಾಡಿದರು.
ಈ ಚುನಾವಣೆ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಜನರ ತೀರ್ಪು ಯಾವ ಪಕ್ಷ ಅಧಿಕಾರದಲ್ಲಿ ಇರಬೇಕು ಅನ್ನೋದನ್ನು ತೀರ್ಮಾನಿಸಲಿದೆ. ಹೀಗಾಗಿ ಅಭಿವೃದ್ಧಿ, ಬಡವರ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಜನ ಬೆಂಬಲಿಸಲಿದ್ದಾರೆ ಎಂದು ನನಗೆ ನಂಬಿಕೆ ಇದೆ ಎಂದಿದ್ದಾರೆ.
ನಾನು ಸೊಸೈಟಿಗಳ 8165 ಕೋಟಿ ರೂ. ಸಾಲ ಮನ್ನಾ ಮಾಡಿದೆ. ಯಡಿಯೂರಪ್ಪ, ಬೊಮ್ಮಾಯಿ ಎಂದೂ ರೈತರ ಸಾಲ ಮನ್ನಾ ಮಾಡಿಲ್ಲ. ಬದಲಾಗಿ ಅಂಬಾನಿ, ಅದಾನಿಯಂತಹ ದೇಶದ ಬಹುದೊಡ್ಡ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಹಣ ಇಲ್ಲ ಎಂದರು. ಉದ್ಯಮಿಗಳ ಸಾಲ ಮನ್ನಾ ಮಾಡಿದರು. ಯಡಿಯೂರಪ್ಪಗೆ ರೈತರು ಸಾಲ ಮನ್ನಾ ಮಾಡಿ ಅಂದಾಗ ನೋಟ್ ಪ್ರಿಂಟ್ ಮಾಡೋ ಮಶೀನ್ ಇಲ್ಲಾ ಅಂದ್ರು. ಇವ್ರ ಬಳಿ ನೋಟ್ ಎಣಿಕೆ ಮಾಡೋ ಮಶೀನ್ ಇದೆ. ಪ್ರಿಂಟ್ ಮಾಡೊ ಮಶೀನ್ ಇಲ್ಲ ಎಂದು ಯಡಿಯೂರಪ್ಪಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.