ಬಾಗಲಕೋಟೆ (ರಬಕವಿ ಬನಹಟ್ಟಿ): ದೇಶದ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದ ಬಳಿಕ ಬಿಜೆಪಿ ಸೋಲುತ್ತದೆ ಎನ್ನುವ ಸುಳಿವು ಮೋದಿಗೆ ಸ್ಪಷ್ಟವಾಗಿ ಸಿಕ್ಕಿದೆ. ಈ ಕಾರಣಕ್ಕೆ ಹಿಂದುಳಿದ ಸಮುದಾಯಗಳಿಗೆ ಭಯಾನಕ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಇದರಿಂದ ರಾಜ್ಯದ ಹಿಂದುಳಿದ ಸಮುದಾಯದ ಜನ ಜಾಗೃತೆ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆ ಮತಕ್ಷೇತ್ರದ ರಬಕವಿ-ಬನಹಟ್ಟಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ಕೊಡುತ್ತಾರೆ ಎನ್ನುವ ಹಸಿ ಸುಳ್ಳು ಹೇಳಿಕೊಂಡು ಮೋದಿ ಹಿಂದುಳಿದವರನ್ನು ಮುಸ್ಲಿಂಮರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಮೋದಿ ಮೀಸಲಾತಿ ವಿಷಯದಲ್ಲೂ ಸುಳ್ಳು ಹೇಳುತ್ತಿದ್ದಾರೆ. ಇವರಿಗೆ ಸಂವಿಧಾನದ ತಿಳಿವಳಿಕೆ ಇಲ್ಲ. ಪ್ರಧಾನಿ ಸ್ಥಾನದಲ್ಲಿದ್ದು ಈ ಮಟ್ಟದ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸಲು ಅವರಿಗೆ ನಾಚಿಕೆಯಾಗಬೇಕು ಎಂದು ಮೋದಿ ವಿರುದ್ಧ ಗುಡುಗಿದರು.
OBC ಮೀಸಲಾತಿ ವಿರೋಧಿಸಿ ಕೋರ್ಟಿಗೆ ಹೋದ ರಾಮಾಜೋಯಿಸ್ ಬಿಜೆಪಿಯವರು
ಮಂಡಲ್ ವರದಿ ವಿರೋಧಿಸಿ ಹಿಂದುಳಿದವರ ಹಾದಿ ತಪ್ಪಿಸಿ ಆತ್ಮಹತ್ಯೆಗೆ ದೂಡಿದ್ದು ಇದೇ ಬಿಜೆಪಿ. ಹಿಂದುಳಿದವರ ಮೀಸಲಾತಿ ವಿರೋಧಿಸಿ ಕೋರ್ಟ್ ಗೆ ಹೋಗಿದ್ದ ರಾಮಾಜೋಯಿಸ್ ಬಿಜೆಪಿಯವರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟಾಗ ಅದನ್ನು ವಿರೋಧಿಸಿ ಪ್ರತಿಭಟಿಸಿದ್ದು ಇದೇ ಬಿಜೆಪಿ. ಹಿಂದುಳಿದವರ, ಮಹಿಳೆಯರ ವಿರೋಧಿಯಾಗಿರುವ ಇವರು ಈಗ ಹಿಂದುಳಿದವರನ್ನು ಮುಸ್ಲೀಮರ ವಿರುದ್ಧ ಎತ್ತಿ ಕಟ್ಟಿ ಏಕ ಕಾಲದಲ್ಲಿ ಎರಡೂ ಸಮುದಾಯಗಳ ಜೀವಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.