ಬಾಗಲಕೋಟೆ (ರಬಕವಿ ಬನಹಟ್ಟಿ): ನಾಲ್ಕು ಬಾರಿ ಬಾಗಲಕೋಟೆ ಸಂಸದರಾಗಿ ಆಯ್ಕೆಯಾದ ಗದ್ದಿಗೌಡರು ರಾಜ್ಯದ ಪರವಾಗಿ ಒಂದು ಬಾರಿಯೂ ಪಾರ್ಲಿಮೆಂಟಿನಲ್ಲಿ ಮಾತನಾಡಿಲ್ಲ. ರಾಜ್ಯಕ್ಕೆ ಬರ ಬಂದಾಗ ಬಾಯಿ ಬಿಡಲಿಲ್ಲ. ಪ್ರವಾಹ ಬಂದಾಗ ಬಾಯಿ ಬಿಡಲಿಲ್ಲ. ಬಾಗಲಕೋಟೆ ಜಿಲ್ಲೆಯ ಜನರ, ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿ ಪರವಾಗಿಯೂ ಅವರು ಬಾಯಿ ಬಿಟ್ಟಿಲ್ಲ. ಇದು ತಮಗೆ ಓಟು ಹಾಕಿದ ಜನತೆಗೆ ಅವರು ಮಾಡುವ ಅವಮಾನವಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಜನರನ್ನು ಪ್ರಶ್ನಿಸಿದ್ದಾರೆ.
ಅವರು ಬಾಗಲಕೋಟೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ಚುನಾವಣೆ ಪ್ರಚಾರಾರ್ಥ ಆಯೋಜಿಸಿದ್ದ ಪ್ರಜಾಧ್ವನಿ-2 ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಇವೆಲ್ಲಕ್ಕೂ ಉತ್ತರ ಸಿಗಬೇಕಾದರೆ ಈಬಾರಿ ಜನ ಗದ್ದಿಗೌಡರನ್ನು ಸೋಲಿಸಿ. 20 ವರ್ಷದಿಂದ ಪಾರ್ಲಿಮೆಂಟಿನಲ್ಲಿ ನಿಮ್ಮ ಪರವಾಗಿ ಒಂದೂ ಮಾತಾಡದ ಗದ್ದಿಗೌಡರನ್ನು ಮನೆಗೆ ಕಳುಹಿಸಿ. ಕಾಂಗ್ರೆಸ್ ಪಕ್ಷದ ಸಂಯುಕ್ತಾ ಪಾಟೀಲ ಅವರನ್ನು ಗೆಲ್ಲಿಸಬೇಕು. ಸಂಯುಕ್ತಾ ಪಾರ್ಲಿಮೆಂಟಿನಲ್ಲಿ ನಿಮ್ಮ ಧ್ವನಿಯಾಗಿ, ರಾಜ್ಯದ ಧ್ವನಿಯಾಗಿ ನಿಲ್ಲುತ್ತಾರೆ ಎಂದು ಕರೆ ನೀಡಿದರು.
ಮೋದಿಯವರ ಸುಳ್ಳಿನ ಸರಮಾಲೆ ಬಯಲು
ರಾಜ್ಯಕ್ಕೆ ಭೀಕರ ಬಿಸಿಲು ಬರಗಾಲ ಬಂದಿದೆ. ರಾಜ್ಯದ ಪಾಲಿನ ಬರ ಪರಿಹಾರ ಕೊಡಿ ಕೊಡಿ ಅಂತ ಕೇಳಿ ಕೇಳಿ ಸಾಕಾಯ್ತು. ದೆಹಲಿಗೆ ಬಂದು ಪ್ರತಿಭಟನೆ ಮಾಡಿದ್ವಿ. ಆದ್ರೂ ರಾಜ್ಯದ ಪಾಲಿನ ಹಣ ಕೊಡಲಿಲ್ಲ. ನಾವು ಕಾನೂನು ಹೋರಾಟ ಶುರು ಮಾಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆವು. ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆ ಕೊಡುವವರೆಗೂ ಮೋದಿ ರಾಜ್ಯಕ್ಕೆ ಒಂದು ಪೈಸೆಯನ್ನೂ ಕೊಡಲಿಲ್ಲ. ರಾಜ್ಯಕ್ಕೆ ಇಂಥ ದೊಡ್ಡ ದ್ರೋಹ ಮೋದಿ ಮಾಡಿದ್ದಾರೆ ಎಂದರು.
ಮೋದಿ ಭಾಷಣದಲ್ಲಿರುವ ಪೊಳ್ಳುತನ ಬಯಲು ಮಾಡಿದ ಸಿಎಂ
ಕಳೆದ ಚುನಾವಣೆಯ ಭಾಷಣ, ಪ್ರಣಾಳಿಕೆಯಲ್ಲಿ ಮೋದಿ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು. ಪ್ರತಿಭಟನೆ ಮಾಡಿ ನೂರಾರು ರೈತರು ಮೃತಪಟ್ಟರೂ ಈ ರೈತರ ಸಾವಿನ ಬಗ್ಗೆ ಸಣ್ಣ ಕಣಿಕರವನ್ನೂ ಮೋದಿ ಪಡಲಿಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ ಕಡಿಮೆ ಮಾಡುತ್ತೇವೆಂದು ಹೇಳಿ ಅಧಿಕಾರ ಹಿಡಿದ ಮೋದಿ ಮಾಡಿದ್ದೇನು? ಈಗ ಡಾಲರ್ ಎದುರು ರೂಪಾಯಿ ಮೌಲ್ಯ ಯಾವ ಮಟ್ಟಕ್ಕೆ ಏರಿಕೆ ಆಗಿದೆ ಎಂದು ನೋಡಿದರೆ ಇವರ ಭಾಷಣದಲ್ಲಿರುವ ಪೊಳ್ಳುತನ ಅರ್ಥವಾಗುತ್ತದೆ.
ಮೋದಿಯವರೇ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದರು. ಈಗ ಕೆಲಸ ಕೇಳಿದ್ರೆ ಪಕೋಡ ಮಾರಾಟ ಮಾಡಿ ಎಂದು ಹೇಳುತ್ತಾರೆ. ಬೆಲೆ ಏರಿಕೆಗೆ ಬ್ರೆಕ್ ಹಾಕುತ್ತೇವೆ ಎಂದು ಭಾರತೀಯರನ್ನು ನಂಬಿಸಿ ಬಕ್ರಾ ಮಾಡಿದರು. ಡೀಸೆಲ್ ಪೆಟ್ರೋಲ್, ಗೊಬ್ಬರ, ಗ್ಯಾಸ್ ಸೇರಿದಂತೆ ದಿನಸಿ ವಸ್ತುಗಳ, ಸಾಮಾನ್ಯ ಜನ ಬಳಸುವ ವಸ್ತುಗಳ ಬೆಲೆ ಗಗನಕ್ಕೆ ಏರಿಸಿದಿರಲ್ಲ ಸ್ವಾಮಿ ನಿಮ್ಮನ್ನು ನಂಬಿದ ಜನಕ್ಕೆ ಇಂಥ ನಂಬಿಕೆ ದ್ರೋಹ ಮಾಡೋದಾ ಎಂದು ಪ್ರಶ್ನೆ ಮಾಡಿದರು.
ಬಡವರ ಹೊಟ್ಟೆ ಮೇಲೆ ಹೊಡೆದ ಮೋದಿ
ನಾವು ದುಡ್ಡು ಕೊಡ್ತೀವಿ ಅಂದ್ರೂ ರಾಜ್ಯದ ಜನರಿಗೆ ಅಕ್ಕಿ ಕೊಡಲಿಲ್ಲ. ಇದು ನನ್ನ ಜನರ ಹೊಟ್ಟೆ ಮೇಲೆ ಹೊಡೆದ ಹಾಗಲ್ವಾ ಮಿಸ್ಟರ್ ಮೋದಿ ಎಂದು ಮೋದಿ ವಿರುದ್ಧ ಕಿಡಿ ಕಾರಿದರು.
ಪಂಚ ನ್ಯಾಯ ಗ್ಯಾರಂಟಿ ಯೋಜನೆ
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಇಡೀ ದೇಶದ ರೈತರ ಸಾಲ ಮನ್ನಾ ಆಗ್ತದೆ. ಪ್ರತಿ ಕುಟುಂಬದ ಮಹಿಳೆಗೆ ವರ್ಷಕ್ಕೆ ಒಂದೂ ಕಾಲು ಲಕ್ಷ ರೂಪಾಯಿ ಅಕೌಂಟಿಗೆ ಬಂದು ಬೀಳತ್ತೆ. ನಿರುದ್ಯೋಗಿ ಯುವಕರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಕೊಡ್ತೀವಿ. ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಚಿತ. ಈ ರೀತಿಯ 25 ಗ್ಯಾರಂಟಿಗಳು ಜಾರಿಯಾಗಲಿದ್ದು ಈ ಗ್ಯಾರಂಟಿ ಪತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು ಸಹಿ ಹಾಕಿದ್ದಾರೆ. ಎಲ್ಲಾ ಗ್ಯಾರಂಟಿಗಳ ಹಣ ಬ್ರೋಕರ್ ಗಳ ಹಾವಳಿ ಇಲ್ಲದೆ ನಿಮ್ಮ ಖಾತೆಗೆ ನೇರವಾಗಿ ಬಂದು ಬೀಳುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ
ನೇಕಾರರಿಗೆ ಸಾಲ ಮನ್ನಾ ಮಾಡಿದೆ, ಮಗ್ಗಗಳಿಗೆ ಉಚಿತ ವಿದ್ಯುತ್ ಕೊಟ್ಟಿದ್ದೇವೆ. ಇನ್ನೂ ಹಲವು ಅನುಕೂಲ ನೇಕಾರರಿಗೆ ಮಾಡಿದ್ದು ನಾವೇ. ಬಿಜೆಪಿಯವರು ಏನನ್ನೂ ಮಾಡಲಿಲ್ಲ. ನಾವು ಕೆಲಸ ಮಾಡಿದ್ದೇವೆ. ನಮಗೆ ಕೂಲಿ ಕೊಡಿ. ದಯಮಾಡಿ ಸಂಯುಕ್ತ ಪಾಟೀಲ್ ಗೆಲ್ಲಿಸಿ. ಇವರು ನಿಮ್ಮ ಧ್ವನಿಯಾಗಿ ದೆಹಲಿಯಲ್ಲಿ ಘರ್ಜಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ತಿಮ್ಮಾಪುರ್, ಶಿವಾನಂದ ಪಾಟೀಲ್, ಮಾಜಿ ಸಚಿವರಾದ ಲಕ್ಷ್ಮಣ ಸವದಿ, ವಿನಯ್ ಕುಲಕರ್ಣಿ, ಎಸ್.ಆರ್.ಪಾಟೀಲ್, ಶಾಸಕರಾದ ಉಮಾಶ್ರೀ, ವಿಜಯಾನಂದ ಕಾಶಪ್ಪನವರ್, ಜೆ.ಟಿ.ಪಾಟೀಲ್, ಸುನಿತ ಪಾಟೀಲ್, ಅಜಯ್ ಕುಮಾರ್ ಸರ್ ನಾಯಕ, ರಾಜು ಚಿಮ್ಮನಕಟ್ಟಿ, ಬಿ.ಆರ್.ಯಾವಗಲ್, ಜಿಲ್ಲಾ ಮುಖಂಡರುಗಳಾದ ಸುಣಗಾರ, ಕೊಣ್ಣೋರ, AICC ಉಸ್ತುವಾರಿ ಸಯ್ಯದ್, ಸಂಜಯ್ಯನ ಮಠ್, ಆನಂದ ನ್ಯಾಮಗೌಡ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.