ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನಗಳನ್ನು ಈ ಬಾರಿ ಗೆದ್ದೇ ಗೆಲ್ಲುತ್ತೇವೆ. ಯಾರು ಏನೇ ಹೇಳಿದರೂ ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ಒಗ್ಗಟ್ಟಿನಿಂದ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮರೆತು ಗೆಲ್ಲಲೇಬೇಕು ಎಂಬ ಛಲ ದಿಂದ ಕೆಲಸ ಮಾಡಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅವರು ಇಂದು ಕೆ.ಪಿ.ಸಿ.ಸಿ. ಕಛೇರಿಯಲ್ಲಿ ಮುದ್ದಹಮುಮೇಗೌಡ ಅವರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮುದ್ದುಹನುಮೇ ಗೌಡರು ಮೂಲತಃ ಕಾಂಗ್ರೆಸ್ ನವರು. ಕಳೆದ ವಿಧಾನಸಭೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರ ತಪ್ಪಿನ ಅರಿವಾಗಿ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರ್ಪಡೆಯಾಗಿದ್ದಾರೆ. ತಪ್ಪು ಮಾಡಿದ್ದೇನೆ, ಕ್ಷಮೆ ಇರಲಿ ಎಂದು ಅವರು ಹೇಳಿದ್ದಾರೆ. ತಪ್ಪು ಮಾಡಿದ ಮೇಲೆ ಪಶ್ಚಾತ್ತಾಪ ಮುಖ್ಯ. ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ. ಪಕ್ಷಕ್ಕೆ ಯಾರೇ ಬಂದರೂ, ಬೇರೆ ನಮ್ಮ ಪಕ್ಷದವರನ್ನೂ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಎಲ್ಲಾ ಜಿಲ್ಲೆಯ ಮುಖಂಡರೆಲ್ಲರೂ ಸೇರಿ ಅವರನ್ನು ಸೇರಿಸಿಕೊಳ್ಳಲು ಒಪ್ಪಿದ್ದಾರೆ ಎಂದರು.
ಒಳ್ಳೆಯ ವಾತಾವರಣ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯವರು ಯಾರನ್ನು ಸೂಚಿಸುತ್ತಾರೋ ಅವರನ್ನೇ ಅಭ್ಯರ್ಥಿ ಮಾಡುತ್ತೇವೆ. ತುಮಕೂರು ಜಿಲ್ಲೆಯಲ್ಲಿ ಗೆಲ್ಲಲು ಅವಕಾಶವಿದೆ. ಒಳ್ಳೆಯ ವಾತಾವರಣವಿದೆ. ಸರ್ಕಾರ ಕೂಡ ನಾವು ಜನಪರವಾದ ಕೆಲಸಗಳನ್ನು ಮಾಡಿದೆ. ಐದು ಗ್ಯಾರಂಟಿಗಳನ್ನು ನುಡಿದಂತೆ ಜಾರಿ ಮಾಡಿದೆ. ಮಾತನ್ನು ಉಳಿಸಿಕೊಂಡಿದ್ದೇವೆ. ಆದ್ದರಿಂದ ಇಡೀ ರಾಜ್ಯದಲ್ಲಿ ಒಳ್ಳೆಯ ವಾತಾವರಣವಿದೆ ಎಂದರು.
ನಮ್ಮ ಕೆಲಸಗಳ ಬಗ್ಗೆ ಜನರಿಗೆ ಸಮಾಧಾನವಿದೆ
ಇತ್ತೀಚೆಗೆ ವಿವಿದೆಡೆ ಹಮ್ಮಿಕೊಂಡಿದ್ದ ಸೌಲಭ್ಯ ವಿತರಾಣಾ ಕಾರ್ಯಕ್ರಮದಲ್ಲಿ ಬಹಳ ಜನ ಸೇರಿದ್ದರು. ಜನ ಸುಮ್ಮನೆ ಸೇರುವುದಿಲ್ಲ. ಜನರಿಗೆ ನಾವು ಮಾಡಿರುವ ಕೆಲಸಗಳ ಬಗ್ಗೆ ಸಮಾಧಾನ ಇದೆ. ಆ ಸಮಾಧಾನ ಇರುವುದರಿಂದಲೇ ಎಲ್ಲೇ ಸಭೆಗಳನ್ನು ಆಯೋಜಿಸಿದರೂ ಜನ ಸೇರಿದ್ದರು. ಮಂಗಳೂರು, ಮಳ ವಳ್ಳಿಯಲ್ಲಿಯೂ ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದರು.
ಮುದ್ದುಹನುಮೇ ಗೌಡರನ್ನು ಪಕ್ಷಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು.