ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ವಿಧಾನಮಂಡಲದಲ್ಲಿ ಅಂಗೀಕರಿಸಿರುವ ಏಳು ಮಸೂದೆಗಳಿಗೆ ಅನುಮೋದನೆ ನೀಡುವಂತೆ ಕೋರಿದರು.
ರಾಷ್ಟ್ರಪತಿಗಳ ಮುಂದೆ ಮಂಡಿಸಲಾದ ಪ್ರಮುಖ ಮಸೂದೆಗಳಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ಮಸೂದೆ- 2015 ಸೇರಿದ್ದು, ಇದು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಆರ್ ಟಿಇ ಚೌಕಟ್ಟನ್ನು ಮಾರ್ಪಡಿಸಲು ಪ್ರಯತ್ನಿಸುತ್ತದೆ.
ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿ) ತೆರಿಗೆ ಮಸೂದೆ- 2024, ತನ್ನ ಖನಿಜ ಸಂಪನ್ಮೂಲಗಳಿಂದ ರಾಜ್ಯದ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರೂಪಿಸಲಾಗಿರುವ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ತಿದ್ದುಪಡಿ ಕಾಯ್ದೆ 2025 ಮಸೂದೆಗೂ ಅನುಮೋದನೆ ಕೇಳಲಾಗಿದೆ.
ಆಡಳಿತ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ- 2025 ಮತ್ತು ಅದರ ಪ್ರತಿರೂಪವಾದ ನೋಟರಿಗಳು (ಕರ್ನಾಟಕ ತಿದ್ದುಪಡಿ) ಮಸೂದೆ- 2025 ಕ್ಕೂ ಅನುಮೋದನೆ ನೀಡುವಂತೆ ಕೋರಿದ್ದಾರೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ- 2024ಕ್ಕೂ ಕೂಡ ರಾಷ್ಟ್ರಪತಿಗಳ ಮುದ್ರೆ ಬೀಳಬೇಕಿದೆ.