ಬೆಂಗಳೂರು: ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ಶಸ್ತ್ರಾಸ್ತ್ರಗಳನ್ನು ತೊರೆದು ಮುಖ್ಯವಾಹನಿಗೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಕರ್ನಾಟಕದ ಎಲ್ಲ ನಕ್ಸಲೀಯರು ಸಂಪೂರ್ಣವಾಗಿ ಶರಣಾಗತರಾಗಿ ಮುಖ್ಯವಾಹಿನಿಗೆ ಬರಲು ನಮ್ಮ ಸರ್ಕಾರವು ಬಯಸುತ್ತದೆ. ನಕ್ಸಲೀಯರು ಮುಖ್ಯವಾಹಿನಿಗೆ ಬರಲು ಮುಂದಾದ್ದಲ್ಲಿ ಶರಣಾಗತಿ ಕುರಿತು ಈಗಾಗಲೇ ಸರ್ಕಾರವು ನೀತಿಯನ್ನು ರೂಪಿಸಿದ್ದು, ಈ ನೀತಿಯನ್ನು ಮತ್ತಷ್ಟು ಸರಳೀಕರಣಗೊಳಿಸಿ, ಸಮಪರ್ಕವಾಗಿ ಜಾರಿ ಮಾಡಲಾಗುವುದೆಂದು ಭರವಸೆ ನೀಡುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಕ್ಸಲೀಯ ಚಟುವಟಿಕೆಗಳು ಕರ್ನಾಟಕದಲ್ಲಿ ಎಂದೂ ನೆರೆಯ ರಾಜ್ಯಗಳಂತೆ ವಿಪರೀತ ಪ್ರಮಾಣದಲ್ಲಿ ನಡೆದಿಲ್ಲ. ಆದರೆ, ಮಲೆನಾಡಿನಲ್ಲಿ ಎರಡು ದಶಕಗಳಿಂದ ಆಗಾಗ್ಗೆ ನಕ್ಸಲೀಯ ಚಟುವಟಿಕೆಗಳು ಕಾಣಸಿಕೊಳ್ಲೂತ್ತಿವೆ. ಆ ಕಾರಣದಿಂದ ಹಿಂಸೆ ಹಾಗೂ ಸಾವು-ನೋವುಗಳು ಸಂಭವಿಸಿವೆ. ಹಲವಾರು ಅಮಾಯಕರು, ಪೊಲೀಸರು ಮತ್ತು ನಕ್ಸಲೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ಜೀವಹಾನಿಯೂ ಆಗಿದೆ. ಆದರೆ, ಪ್ರಜಾತಾಂತ್ರಿಕ ಸಮಾಜದಲ್ಲಿ ಬಂದೂಕಿನ ಮೂಲಕ ಬದಲಾವಣೆ ತರಲು ಹೊರಟಿರುವ ಆದರ್ಶವಾದಿಗಳು ತಮ್ಮ ಜೀವವನ್ನೂ ತೆತ್ತುಕೊಳ್ಳುತ್ತಾರೆ, ಇತರರ ಜೀವಹಾನಿಗೂ ಕಾರಣವಾಗುತ್ತಾರೆ. ಇದು ನೋವಿನ ವಿಚಾರವಾದರೂ, ಸಂವಿಧಾನಬದ್ಧವಾಗಿ ಆಡಳಿತ ನಡೆಸುವ ಸರ್ಕಾರ ಸುಮ್ಮನೇ ಕೂರುವುದು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಶಾಂತಿ ನೆಲೆಸುವಂತೆ ಮಾಡಲು ಸರ್ಕಾರವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದೂ ಎಚ್ಚರಿಕೆ ನೀಡಿದ್ದಾರೆ.
ನಕ್ಸಲೀಯರ ಶರಣಾಗತಿ ನೀತಿಯನ್ವಯ ಹಂತ ಹಂತವಾಗಿ ಆರ್ಥಿಕ ನೆರವು ನೀಡಲಾಗುವುದು ಹಾಗೂ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸುವ ನಕ್ಸಲೀಯರಿಗೆ ಪ್ರೋತ್ಸಾಹ ಧನ, ಕೌಶಲ್ಯ ತರಬೇತಿಗಳು ನೀಡುವುದಲ್ಲದೆ ಅವರುಗಳ ಪುನರ್ವಸತಿಗೂ ಸಹ ಎಲ್ಲ ಕ್ರಮಗಳನ್ನು ಸಹಾನುಭೂತಿಯಿಂದ ಹಾಗೂ ಆದ್ಯತೆ ಮೇರೆಗೆ ಪರಿಗಣಿಸಲು ಕ್ರಮವಹಿಸಲಾಗುವುದು. ಅವರ ಮೇಲಿನ ಮೊಕದ್ದಮೆ / ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದೆ ಹಾಗೂ ಅವರಿಗೆ ಕಾನೂನಿನ ನೆರವು ಸಹ ನೀಡಲಾಗುವುದು. ಈಗಾಗಲೇ ಶರಣಾಗತರಾದ ನಕ್ಸಲೀಯರ ಅಗತ್ಯಗಳನ್ನು ಸಹ ಗುರುತಿಸಿ ಅವರಿಗೂ ಸಹ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ನಕ್ಸಲೀಯರು ಪ್ರಜಾತಾಂತ್ರಿಕತೆಯ ಮುಖ್ಯವಾಹಿನಿಗೆ ಬರಬೇಕೆಂದು ಪ್ರತಿಪಾದಿಸುವ ಹಾಗೂ ಜೀವಹಾನಿಯು ಯಾವ ಕಡೆಯು ನಡೆಯಬಾರದು ಎಂದು ಬಯಸುವ ವಿವಿಧ ಪ್ರಗತಿಪರ ಹಾಗೂ ಜನಪರ ವೇದಿಕೆಗಳ ಹಲವಾರು ಮುಖಂಡರು ಇತ್ತೀಚೆಗೆ ಮುಖ್ಯಮಂತ್ರಿಗಳ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಈ ಕರೆ ನೀಡದ್ದಾರೆ.