ಮುಂದಿನ ಚುನಾವಣೆಯಲ್ಲೂ ಸಿಎಂ ಸಿದ್ದರಾಮಯ್ಯ ಸ್ಪರ್ಧೆ: ಬೈರತಿ ಸುರೇಶ್

Most read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

ಬೆಂಗಳೂರಿನ ಕೆಆರ್ ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಯಲ್ಲಿ ಜಿಬಿಎ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವಿಷಯ ಸ್ಪಷ್ಟಪಡಿಸಿದರು.

ಕಳೆದ ಮೂರ್ನಾಲ್ಕು ದಿನಗಳಲ್ಲಿ ಬಹಳಷ್ಟು ರಾಜಕೀಯ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ನಾವೆಲ್ಲಾ ಕಾಂಗ್ರೆಸ್ ಪಕ್ಷದ ಕಟ್ಟಾಳುಗಳು. ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದು ಸುಳ್ಳು. 2028 ರ ಚುನಾವಣೆಯಲ್ಲಿಯೂ ಅವರು ಸ್ಪರ್ಧೆ ನಡೆಸಬೇಕೆಂಬುದು ನಮ್ಮೆಲ್ಲರ ಹಕ್ಕೊತ್ತಾಯವಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಾಗಬೇಕಾದರೆ ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧೆ ಮಾಡಲೇಬೇಕು ಎಂದು ಹೇಳಿದ ಅವರು, ಸಚಿವ ಸಂಪುಟ ಪುನಾರಚನೆ, ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ನೇಮಕಾತಿ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಹೈಕಮಾಂಡ್ ಸಮರ್ಥವಾಗಿದೆ ಎಂದರು.

ಪ್ರಸ್ತುತ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ, ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರಿದ್ದಾರೆ. ಮುಂದೆ ಏನಾಗಬೇಕು? ಏನು ನಿರ್ಧಾರ ತೆಗೆದುಕೊಳ್ಳಬೇಕೆಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಅವರು ಹೇಳಿದರು.

ಜಿಬಿಎ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಿದ್ಧರಾಗಬೇಕು. ಯಾವುದೇ ವೈಮನಸ್ಸು ಇದ್ದರೂ ಅದನ್ನು ಬಗೆಹರಿಸಿಕೊಂಡು ಚುನಾವಣೆಯನ್ನು ಎದುರಿಸಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬೇಕೆಂದು ಸಚಿವ ಬೈರತಿ ಸುರೇಶ್ ಅವರು ಕರೆ ನೀಡಿದರು.

More articles

Latest article