ಬಿಜೆಪಿಯವರು  ಹತಾಶರಾಗಿದ್ದಾರೆ: ಸಿಎಂ ಸಿದ್ದರಾಮಯ್ಯ ಲೇವಡಿ

Most read

ಬೆಂಗಳೂರು: ಬಿಜೆಪಿ ಹೇಳುವ ಬೇಡಿಕೆಗಳಿಗೆಲ್ಲಾ ಉತ್ತರಿಸಲು ಸಾಧ್ಯವಿಲ್ಲ. ಬಿಜೆಪಿಯವರು  ಹತಾಶರಾಗಿದ್ದು, ಈ ರೀತಿಯ ಹೇಳಿಕೆ ನೀಡಿದ್ದಾರೆ. ಸಾವಿನಲ್ಲೂ ರಾಜಕೀಯ ಮಾಡುವುದು ಬಿಜೆಪಿಗೆ  ಅಭ್ಯಾಸ. ಅವರು ಹೇಳಿದ್ದಕ್ಕೆಲ್ಲಾ ಪ್ರತಿಕ್ರಿಯೆ ನೀಡಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು  ಇಂದು ವಿಧಾಸೌಧದ ಪಶ್ಚಿಮ ದ್ವಾರದ ಬಳಿ ಆಯೋಜಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ರವರ 118 ನೇ ಜನ್ಮ ದಿನಾಚರಣೆಯ ಅಂಗವಾಗಿ  ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದರು.

ಕೊಡಗು ಮೂಲದ ಬಿಜೆಪಿ ಕಾರ್ಯಕರ್ತರೊಬ್ಬರ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿದ ಅವರು ಪ್ರಕರಣದಲ್ಲಿ ಎಫ್ಐಆರ್ ಆಗಿದ್ದು ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬಾಬು ಜಗಜೀವನ್ ರಾಂ ಅವರು ದೇಶ ಕಂಡ ಅಪ್ರತಿಮ ನಾಯಕರು.  ದೀರ್ಘ ಕಾಲ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಅನೇಕ ಇಲಾಖೆಗಳನ್ನು ನಿಭಾಯಿಸಿದರು. ಕೃಷಿ, ರಕ್ಷಣೆ ಸೇರಿದಂತೆ ಯಾವುದೇ ಇಲಾಖೆಯಲ್ಲಿದ್ದರೂ ಎಲ್ಲಾ ಇಲಾಖೆಗಳಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಅವರ ಹೆಜ್ಜೆಗುರುತುಗಳನ್ನು ಬಿಟ್ಟುಹೋಗಿದ್ದಾರೆ. “ದೇಶದ  ಪ್ರಗತಿಯಲ್ಲಿ ನಮ್ಮ ಪ್ರಗತಿ, ಅದರ ಉದ್ಧಾರದಲ್ಲೇ ನಮ್ಮ ಉದ್ಧಾರ ಹಾಗೂ ಅದರ ವಿಮೋಚನೆಯಲ್ಲೇ  ನಮ್ಮ ವಿಮೋಚನೆಯಿದೆ”  ಎಂದು ನುಡಿದ ಅವರು ಅಪ್ರತಿಮ ದೇಶಭಕ್ತರೂ ಆಗಿದ್ದರು. ದೇಶಕ್ಕೆ ಮಾದರಿ ಎನ್ನುವ ನಾಯಕರು. ಅವರ ಜನ್ಮದಿನೋತ್ಸವದಂದು ಅವರಿಗೆ ನಮನಗಳನ್ನು ಸಲ್ಲಿಸಲಾಗಿದೆ ಎಂದರು.

More articles

Latest article