ಕೆಪಿಎಸ್‌ಸಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ತಪ್ಪು ತಪ್ಪು ಅನುವಾದ ಹಾಗೂ ತಪ್ಪು ಪ್ರಶ್ನೆಗಳಿಂದ ಬೇಸತ್ತ ಅಭ್ಯರ್ಥಿಗಳು ಮರುಪರೀಕ್ಷೆಗೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಸಾಹಿತಿಗಳು ಕನ್ನಡ ಪರ ಸಂಘಟನೆಗಳು ಮರುಪರೀಕ್ಷೆಗೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಎಲ್ಲಾ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಯಲ್ಲಿ ಅಸಮರ್ಪಕ ಕನ್ನಡ ಅನುವಾದದ ಪ್ರಶ್ನೆಗಳಿಂದಾಗಿರುವ ತೊಂದರೆ ನನ್ನ ಗಮನಕ್ಕೆ ಬಂದಿದೆ, ಎಲ್ಲಾ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು 2 ತಿಂಗಳೊಳಗೆ ಪರೀಕ್ಷೆಯನ್ನು ಮರುನಿರ್ವಹಿಸುವಂತೆ ಕೆಪಿಎಸ್‌ಸಿಗೆ ಸೂಚಿಸಿದ್ದೇನೆ.
ಈ ಲೋಪಗಳಿಗೆ ಕಾರಣರಾದವರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ಮುಂಬರುವ ಪರೀಕ್ಷೆಯನ್ನು ಎಲ್ಲಾ ಶ್ರದ್ಧೆಯಿಂದ, ಅತ್ಯಂತ ಜವಾಬ್ದಾರಿ ಮತ್ತು ಹೊಣೆಗಾರಿಕೆಯೊಂದಿಗೆ ನಡೆಸಲಾಗುವುದು. ನಮ್ಮ ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆಯನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
‘ಭಾಷಾಂತರದಲ್ಲಿನ ಸಮಸ್ಯೆಯಿಂದ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ, ಮರು ಪರೀಕ್ಷೆ ನಡೆಸಬೇಕು’ ಎಂದು ಕನ್ನಡಪರ ಸಂಘಟನೆಗಳು, ಸಾಹಿತಿಗಳೂ ಆಗ್ರಹಿಸಿದ್ದರು. ಕನ್ನಡ ರಕ್ಷಣಾ ವೇದಿಕೆಯು ನಗರದ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದು, ಅಭ್ಯರ್ಥಿಗಳ ಸಹಿತ ನೂರಾರು ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.