ಕೋಲಾರ: ಇಂದಿನಿಂದ ಕಾಂಗ್ರೆಸ್ ಜೋಡೆತ್ತುಗಳ ಪ್ರಚಾರ ಕಾರ್ಯ ಆರಂಭವಾಗಿದೆ. ಅದರ ಸಲುವಾಗಿ ಇಂದಿನಿಂದ ಕೋಲಾರದ ಕುರುಡುಮಲೆ ದೇವಸ್ಥಾನದಿಂದ ಕಾಂಗ್ರೆಸ್ ಪ್ರಜಾಧ್ವನಿ-2 ಯಾತ್ರೆ ಆರಂಭವಾಗಿದೆ. ಕುರುಡುಮಲೆ ದೇವಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆಗಮಿಸಿ ಪೂಜೆ ಸಲ್ಲಿಸಿದರು.
ಸಚಿವ ಬೈರತಿ ಸುರೇಶ್, ಎಂ.ಸಿ.ಸುಧಾಕರ್, ಟಿ.ಬಿ. ಜಯಚಂದ್ರ, ಕೆ.ವೈ. ನಂಜೇಗೌಡ, ಕೊತ್ತೂರು ಮಂಜುನಾಥ್, ಅನಿಲ್ ಕುಮಾರ್, ರಮೇಶ್ ಕುಮಾರ್ ಕೂಡ ದೇವಸ್ಥಾನಕ್ಕೆ ಬಂದಿದ್ದಾರೆ. ಕುರುಡು ಮಲೆ ದೇವಸ್ಥಾನದಿಂದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಪ್ರಾರಂಭವಾಗಿದೆ.
ಒಂದೇ ಬಸ್ಸಿನಲ್ಲಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸಂಚಾರ ಮಾಡಿದ್ದು ಸಚಿವ ಎಂಸಿ ಸುಧಾಕರ್, ಬೈರತಿ ಸುರೇಶ್, ರಮೇಶ್ ಕುಮಾರ್ ಮತ್ತು ಟೀಮ್ ಜೊತೆಯಲ್ಲಿದ್ದರು.
ಕೋಲಾರದಲ್ಲಿ ಟಿಕೆಟ್ ವಿಚಾರಕ್ಕೆ ಸಾಕಷ್ಟು ಕಿತ್ತಾಟ ನಡೆದಿತ್ತು. ಆದರೆ ಕಾಂಗ್ರೆಸ್ ನಿಂದ ಟಿಕೆಟ್ ಗೌತಮ್ ಅವರಿಗೆ ನೀಡಲಾಗಿದೆ. ಮುನಿಯಪ್ಪ ಅವರು ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತಾದರೂ, ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕರಿಸುತ್ತೇನೆ ಎಂದಿದ್ದಾರೆ. ಆದರೆ ಇಂದು ಕುರುಡುಮಲೆ ದೇವಸ್ಥಾನದಲ್ಲಿ ಮುನಿಯಪ್ಪ ಕಾಣಿಸಿಕೊಳ್ಳಲಿಲ್ಲ.
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಯಾತ್ರೆ ಹೊರಟ ಬಳಿಕ ಮುಳಬಾಗಿಲಿನ ಹಜರತ್ ಸೈಯದನ ಬಾಬಾ ಹೈದರ್ ಮಸೀದಿಗೆ ಸಿಎಂ, ಡಿಸಿಎಂ ಭೇಟಿ ನೀಡಿದರು.