ರಾಮೇಶ್ವರಂ ಕೆಫೆ ಪ್ರಕರಣ: ಘಟನೆಯ ಸಂಪೂರ್ಣ ಸತ್ಯ ಹೊರತನ್ನಿ: ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸ್ಪಷ್ಟ ಸೂಚನೆ

Most read

ಬೆಂಗಳೂರು: ರಾಮೇಶ್ವರಂ ಕೆಫೆ ಘಟನೆಯ ಸಂಪೂರ್ಣ ಸತ್ಯ ಹೊರಗೆ ಬರಲಿ. ತಂತ್ರಜ್ಞಾನದ ಸಾಧ್ಯತೆಗಳನ್ನು ತನಿಖೆಯಲ್ಲಿ ಪರಿಣಾಮಕಾರಿಯಾಗಿ ಬಳಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಗೃಹ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, ಜನನಿಬಿಡ ಸ್ಥಳಗಳನ್ನು ಗುರುತಿಸಿ ಅಂಥ ಪ್ರದೇಶಗಳಲ್ಲಿ ಪೊಲೀಸ ಗಸ್ತು ಹೆಚ್ಚಿಸಿ. ಜನರಿಗೆ ರಕ್ಷಣೆ ಒದಗಿಸಬೇಕು ಎಂದು ಸೂಚಿಸಿದರು.

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಲು ಸೂಚಿಸಿದ ಅವರು ಇಂಥ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು, ಪೊಲೀಸರು ಇಂಥ ಘಟನೆ ನಡೆದಾಗ ಎಚ್ಚರಿಕೆ ವಹಿಸಿ ನಂತರ ಮರೆಯುವುದಾಗಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರ ದಾರಿ ತಪ್ಪಿಸುವ ಕೆಲಸವನ್ನು ಮಟ್ಟ ಹಾಕಬೇಕು ಎಂದು ಸೂಚನೆ ನೀಡಿದರು.

ಇಂಟೆಲಿಜೆನ್ಸ್ ಹೆಚ್ಚು ಜಾಗೃತವಾಗಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಸಮಾಜ ದ್ರೋಹಿಗಳ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲದೇ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು. ಈ ಬಗ್ಗೆಯೇ ಪೊಲೀಸ್ ಇಲಾಖೆ ಜೊತೆಗೆ ಪ್ರತ್ಯೇಕ ಸಭೆ ಕರೆಯುವುದಾಗಿ ಹೇಳಿದರು. ಸಮಯ ಸಂದರ್ಭಕ್ಕೆ ತಕ್ಕಂತೆ ನಾವೂ ಬದಲಾಗಬೇಕು. ತ್ವರಿತ ಗತಿಯಲ್ಲಿ ಕೆಲಸ ಮಾಡಬೇಕು ಎಂದರು.

ಸಚಿವ ಪ್ರಿಯಾಂಕ ಖರ್ಗೆ, ಸಭೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ,ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್ , ಕಾರ್ಯದರ್ಶಿ ಡಾ: ತ್ರಿಲೋಕ್ ಚಂದ್ರ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಪೊಲೀಸ್ ಆಯುಕ್ತ ಬಿ.ದಯಾನಂದ್, ಮೊದಲಾದವರು ಉಪಸ್ಥಿತರಿದ್ದರು.

More articles

Latest article