ಚಾಮರಾಜನಗರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಮಾಡಿರುವ ಆರೋಪಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಿಡಿಕಿಡಿಯಾಗಿದ್ದು, ನೀರಿದ್ದರೆ ಅಲ್ವಾ ಕೊಡುವುದು? ನೀರು ಬಿಡ್ತಿದ್ದೇವೆ ಎಂಬುದು ಸುಳ್ಳು, ಒಂದು ಹನಿ ನೀರು ಬಿಡಲ್ಲ. ಕುಡಿಯುವ ನೀರು ಇಟ್ಟುಕೊಳ್ಳದೆ ನೀರು ಬಿಡುಗಡೆ ಪ್ರಶ್ನೆಯೇ ಇಲ್ಲ. ಕೇಂದ್ರದವರು, ತಮಿಳುನಾಡಿನವರು ಕೇಳಿದರೂ ನೀರು ಕೊಡುವುದಿಲ್ಲ ಎಂದು ತಾಲ್ಲೂಕಿನ ಹೆಗ್ಗವಾಡಿಯಲ್ಲಿ ಹೇಳಿದ್ದಾರೆ.
ಬಿಜೆಪಿಯವರು ಸುಳ್ಳು ಅಪಪ್ರಚಾರ ಮಾಡುವುದನ್ನು ಬಿಡಬೇಕು ಎಂದ ಸಿದ್ಧರಾಮಯ್ಯ, ಈಗಿನ ಸಂಕಷ್ಟ ಕಾಲದಲ್ಲಿ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಸಿಎಎ ಜಾರಿ ಮಾಡೋದು ಬಿಜೆಪಿ ಸರ್ಕಾರದ ಹಿಡನ್ ಅಜೆಂಡಾ. ಅದನ್ನು ಈಗ ಜಾರಿಗೆ ತಂದಿದ್ದಾರೆ. ಸಂವಿಧಾನ ಬದಲಾವಣೆ ಬಗ್ಗೆ ಸಂಸದ ಹೆಗಡೆಯಿಂದ ಹೇಳಿಸ್ತಿದ್ದಾರೆ. ಅನಂತ ಕುಮಾರ್ ಹೆಗಡೆ ಸಾಮಾನ್ಯ ವ್ಯಕ್ತಿ ಅಲ್ಲ, ಐದು ಸಾರಿ ಸಂಸದನಾಗಿದ್ದವನು, ಪಕ್ಷದ ತೀರ್ಮಾನ ಆಗದೆ ಆ ರೀತಿ ಹೇಳುವುದಕ್ಕೆ ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಈ ಹಿಂದೆ ಅಧಿಕಾರಕ್ಕೆ ಬಂದಿದ್ದೇ ಸಂವಿಧಾನ ಬದಲಿಸಲು ಎಂದು ಇದೇ ಅನಂತ್ ಕುಮಾರ್ ಹೆಗಡೆ ಹೇಳಿದ್ದರು. ಆಗ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಬಿಜೆಪಿಯವರು ಕ್ರಮ ಕೈಗೊಂಡ್ರಾ? ಈಗ 400 ಸ್ಥಾನ ಗೆಲ್ಲಿಸಿದರೆ ಸಂವಿಧಾನ ಬದಲಾವಣೆ ಮಾಡ್ತೀವಿ ಎಂದಿದ್ದಾನೆ. ಇದು ಬಿಜೆಪಿಯ ಹಿಡನ್ ಅಜೆಂಡಾ ಎಂದು ಸಿದ್ಧರಾಮಯ್ಯ ಹೇಳಿದರು.
ಬಿಜೆಪಿ ನಾಯಕರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡವರು. ಚುನಾವಣೆಗೋಸ್ಕರ ಸಿಎಎ ಜಾರಿ ಮಾಡಿದ್ದಾರೆ ಎಂದ ಅವರು ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದಕ್ಕೆ ನನ್ನ ವಿರೋಧವಿದೆ ಎಂದರು.
ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ನಡುವೆ ಅಡ್ಜಸ್ಟ್ ಮೆಂಟ್ ರಾಜಕಾರಣ ನಡೆಯುತ್ತಿದೆ ಎಂಬ ಆರೋಪದ ಕುರಿತು ಪ್ರಶ್ನಿಸಿದಾಗ ಯಾವನೋ ದಾರಿಯಲ್ಲಿ ಹೋಗೋನು ಹೇಳಿದರೆ ಪ್ರಯೋಜನವಿಲ್ಲ ಎಂದು ಕಿಡಿಕಿಡಿಯಾದರು.
ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಯದುವೀರ್ ಗೆ ನಾನು ಹೇಳಿದ್ನಾ? ಎಂದು ಪ್ರಶ್ನಿಸಿದ ಅವರು ಪ್ರತಾಪ್ ಸಿಂಹ ಹೆಸರು ಕೆಡಿಸ್ಕೊಂಡಿದ್ದಾನೆ ಎಂದು ಬದಲಿಸುತ್ತಿರಬಹುದು. ತನಗೆ ಟಿಕೆಟ್ ಕೊಟ್ರೆ ಸಿಎಂ ಕುರ್ಚಿ ಅಲುಗಾಡುತ್ತೆ ಎಂಬ ಪ್ರತಾಪ್ ಸಿಂಹ ಹೇಳಿಕೆ ಬಾಲಿಷ, ಪ್ರತಾಪ್ ಸಿಂಹ ಎರಡು ಬಾರಿ ಸಂಸದನಾಗಿದ್ದ, ನಮ್ಮ ಕುರ್ಚಿ ಅಲ್ಲಾಡಲೇ ಇಲ್ಲ ಎಂದು ಹೇಳಿದರು.
ಬಿಜೆಪಿ ಯಾರನ್ನು ಅಭ್ಯರ್ಥಿ ಮಾಡುತ್ತಾರೆ ಎಂಬುದು ಪ್ರಶ್ನೆಯೇ ಇಲ್ಲ. ನಾವು ಬಿಜೆಪಿ ಸೋಲಿಸಬೇಕು ಅಷ್ಟೇ ಎಂದು ಅವರು ಹೇಳಿದರು.