‘ಹವಾಗುಣ ಬದಲಾವಣೆ’ ಇವತ್ತು ಮನೆಮಾತಾಗಿದೆ!

Most read

ಪರಿಸರ ವಿಸ್ಮಯಗಳ ಕುರಿತು ಆಸಕ್ತಿ ಇರುವ ಶಿಕ್ಷಕರು ನಮ್ಮಲ್ಲಿ ಸಾವಿರಕ್ಕೆ ಒಬ್ಬರಿರುವುದೂ ಕಷ್ಟವೇನೋ! ಎಂತಹ ಅವಿವೇಕಿಗಳು ನಮ್ಮಲ್ಲಿ ಪರಿಸರ ವಿಜ್ಞಾನ ಬೋಧಿಸುತ್ತಾರೆ ಎಂದರೆ ಅವರಿಗೆ ಕಾಡು, ಗುಡ್ಡ, ಪರಿಸರ ಅಂದರೆ ತಕ್ಷಣ ತಲೆಗೆ ಹೊಳೆಯುವುದು ಮಲೆನಾಡು ಮಾತ್ರ! ಮರಳುಗಾಡು, ಬಯಲುನಾಡು, ಅವರ ಸುತ್ತಲಿನ ಎಲ್ಲದೂ ಕೂಡಾ ಒಂದು ವಿಶಿಷ್ಟ ಪರಿಸರ ಎಂಬ ಸಾಮಾನ್ಯ ಪ್ರಜ್ಞೆಯ ಕೊರತೆ ಅವರಲ್ಲಿದೆ – ನಾಗರಾಜ ಕೂವೆ, ಪರಿಸರ ಬರಹಗಾರರು.

ಕೆಲವೇ ವರ್ಷಗಳ ಹಿಂದೆ ‘ಹವಾಗುಣ ಬದಲಾವಣೆ’ ಎನ್ನುವುದು ಕೇವಲ ಅಕಾಡೆಮಿಕ್ ಚರ್ಚೆಯ ವಸ್ತುವಾಗಿತ್ತು. ‘ಜಾಗತಿಕ ತಾಪಮಾನ ಏರಿಕೆ’ ಎಂಬುದು ಸಂಶೋಧಕರು, ವಿಜ್ಞಾನಿಗಳು, ಆಡಳಿತಗಾರರು ಮೊದಲಾದ ಕೆಲವೇ ಕೆಲವರು ಸೆಮಿನಾರುಗಳಲ್ಲಿ, ಶೃಂಗಸಭೆಗಳಲ್ಲಿ, ಕಾನ್ಫರೆನ್ಸ್ ಗಳಲ್ಲಿ ಚರ್ಚಿಸುವ ವಿಷಯವಾಗಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಪ್ರತಿಯೊಬ್ಬರು ಈ ಕುರಿತು ಒಂದಲ್ಲಾ ಒಂದು ಸ್ವರೂಪದಲ್ಲಿ ಮಾತನಾಡುತ್ತಿದ್ದಾರೆ. ಏರುತ್ತಿರುವ ಬಿಸಿಗಾಳಿ, ಕಾಣಿಸುತ್ತಿರುವ ಸಾವುಗಳು, ಹೆಚ್ಚುತ್ತಿರುವ ಭೂಕುಸಿತ, ನಾಶಗೊಳ್ಳುತ್ತಿರುವ ಬೆಳೆಗಳು, ಕುಸಿಯುತ್ತಿರುವ ಜೀವನೋಪಾಯ, ಕಾಡುತ್ತಿರುವ ಖಾಯಿಲೆಗಳು ಇತ್ಯಾದಿ ಜನಸಾಮಾನ್ಯರ ಜೀವನವನ್ನು  ತಟ್ಟಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಇದು ಮನೆ-ಮನೆಯ ಚರ್ಚೆಯ ವಿಷಯವಾಗಿದೆ.

ಈಗಿನ ಎಲ್ಲಾ ತೀವ್ರ ಸ್ವರೂಪದ ಅವಘಡಗಳಿಗೆ ಕಾಡು ಕಡಿದಿದ್ದು, ರಾಸಾಯನಿಕ ಸುರಿದಿದ್ದು, ಕೈಗಾರಿಕೆಗಳ ಮೇಲೆ ವಿಪರೀತ ಅವಲಂಬಿತವಾಗಿದ್ದು, ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸಿದ್ದು, ವಿವಿಧ ಕಾರಣಗಳಿಗೆ ಮಿತಿ ಮೀರಿ ಭೂಮಿ ಬಗೆದಿದ್ದು, ಒಟ್ಟಿನಲ್ಲಿ ಹಲವು ಬಗೆಗಳಲ್ಲಿ ಪರಿಸರಕ್ಕೆ ಮನುಷ್ಯ ಹಾನಿ ಮಾಡಿದ್ದೇ ಕಾರಣ ಎಂದು ಬಹುಪಾಲು ಜನರಿಗೆ ತಿಳಿಯುತ್ತಿದೆ.

ನಾವು ಕಳೆದುಕೊಂಡಿರುವ ಅರಣ್ಯ, ವನ್ಯಸಂಪತ್ತು, ಜೀವವೈವಿಧ್ಯ ಯಾವುದೂ ಇನ್ನು ವಾಪಾಸು ಪಡೆದುಕೊಳ್ಳಲು ಸಾಧ್ಯವಿಲ್ಲ. ಒಮ್ಮೆ ಕಣ್ಮರೆಯಾಗಿರುವ ಪರಿಸರದ ಸ್ವರೂಪಗಳನ್ನು ಪುನರ್ ಸೃಷ್ಟಿಸುವುದು ಎಂದಿಗೂ ಅಸಾಧ್ಯ. ಹಾಗಂತ ಇದಕ್ಕೆಲ್ಲಾ ಹಿಂದಿನವರೇ ಕಾರಣ ಎಂದು ಅವರನ್ನು ಹಳಿಯುತ್ತಾ ಕೂರುವುದು ಪರಿಹಾರವಲ್ಲ. ನಮಗೀಗ ಉಳಿದಿರುವ ಏಕೈಕ ದಾರಿಯೆಂದರೆ ಅಳಿದುಳಿದಿರುವುದನ್ನು ಸಂರಕ್ಷಿಸುವುದು‌. ಆ ಕುರಿತು ಎಳೆಯರಲ್ಲಿ, ಯುವಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು. ಪರಿಸರ ಪ್ರೀತಿ ಹುಟ್ಟಿಸಲು ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು.

ಅರಣ್ಯ ನಾಶ

ನಮ್ಮ ಪ್ರಾಥಮಿಕ ಶಾಲೆಗಳ ಪರಿಸರ ಅಧ್ಯಯನದ ಪಾಠಗಳು ಚೆನ್ನಾಗಿಯೇ ಇವೆ. ಆದರೆ ದುರಂತವೆಂದರೆ ಅದನ್ನು ವರ್ಷ ಪೂರ್ತಿ ನಾಲ್ಕು ಗೋಡೆಯ ಮಧ್ಯೆ, ಪರೀಕ್ಷೆಯ ಅಗತ್ಯಕ್ಕೆ ಬೇಕಾದಷ್ಟು ಮಾತ್ರ ಕಲಿಸಲಾಗುತ್ತಿದೆ. ಕೆಲವೆಡೆಯಂತೂ ಅದು ಕೇವಲ ನೋಟ್ಸ್ ಬರೆಸುವುದಕ್ಕಷ್ಟೇ ಸೀಮಿತವಾಗಿಬಿಟ್ಟಿದೆ. ಮಕ್ಕಳಲ್ಲಿ ಕುತೂಹಲ, ಬೆರಗು, ಅಚ್ಚರಿ ಹುಟ್ಟಿಸಬೇಕಾಗಿದ್ದ ಪರಿಸರ ವಿಜ್ಞಾನದ ಪಾಠಗಳು ‘ಮೂರರಲ್ಲಿ ಮತ್ತೊಂದಾಗಿ’ ಅವರಿಗೆ ನೀರಸವೆನ್ನಿಸುತ್ತಿವೆ. ವ್ಯವಸ್ಥೆಯಲ್ಲಿಯೇ ಹಲವು ದೋಷಗಳಿವೆ. ಅದರೊಂದಿಗೆ ಬೋಧಕರ ನಿರ್ಲಕ್ಷ್ಯ, ಅವಿವೇಕ ಕೂಡಾ ಸೇರಿಕೊಂಡಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗವು(UGC) ಬಹಳ ಹಿಂದೆಯೇ ಕಲೆ, ವಾಣಿಜ್ಯ, ವಿಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ಮಾದರಿಯ ತರಗತಿಗಳಲ್ಲಿ, ಯಾವುದಾದರೂ ಒಂದು ಸೆಮಿಸ್ಟರ್ ನಲ್ಲಿ, ‘ಪರಿಸರ ವಿಜ್ಞಾನ’ ವಿಷಯವನ್ನು ಬೋಧಿಸಬೇಕೆಂದು ಕಡ್ಡಾಯಗೊಳಿಸಿತು. ಒಂದು ಒಳ್ಳೆಯ ಉದ್ದೇಶದಿಂದ ಪ್ರಾರಂಭವಾದ ಈ ಕೆಲಸ ಇವತ್ತು ಕಾನೂನು ಪಾಲನೆಗಷ್ಟೇ ಸೀಮಿತವಾಗಿಬಿಟ್ಟಿದೆ. ಬಹುಪಾಲು ಕಾಲೇಜುಗಳು ಇದನ್ನು ಬೋಧಿಸುವ ಗೋಜಿಗೇ ಹೋಗುತ್ತಿಲ್ಲ! ಹೆಚ್ಚಿನ ಖಾಸಗಿ ಕಾಲೇಜುಗಳು ಇದಕ್ಕೆ ಉಪನ್ಯಾಸಕರನ್ನು ನೇಮಿಸುವುದೇ ಇಲ್ಲ! ಈಗ ಹೊಸ ಶೈಕ್ಷಣಿಕ ನೀತಿ ಬಂದ ಮೇಲೆ ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಕಾಲೇಜುಗಳಲ್ಲೂ ಇದಕ್ಕೆ ಉಪನ್ಯಾಸಕರೇ ಇಲ್ಲ! ಒಂದು ವೇಳೆ ಬೋಧಿಸಿದರೂ ಹೆಚ್ಚಿನೆಡೆ ದಿನದ ಕೊನೆಯ ಅವಧಿಯಲ್ಲಿ ಮಾತ್ರ ಇದಕ್ಕೆ ಅವಕಾಶ. ಇತರ ವಿಷಯಗಳಂತೆ ಇದಕ್ಕೂ ಪರೀಕ್ಷೆ ಇದ್ದರೂ, ಇದರಲ್ಲಿ ಬರುವ ಅಂಕಗಳು ಕೊನೆಗೆ ನೀಡುವ ಪರ್ಸೆಂಟೇಜ್ ಗೆ ಕೂಡಿಸುವುದಿಲ್ಲ, ಇದು ಕನಿಷ್ಠ ಉತ್ತೀರ್ಣವಾದರೆ ಸಾಕು ಎಂದಿರುವ ನಿಯಮವು ಇದರ ಎಲ್ಲಾ ಧ್ಯೆಯೋದ್ದೇಶಗಳನ್ನೇ ಹಿನ್ನಲೆಗೆ ಸರಿಯುವಂತೆ ಮಾಡಿಬಿಟ್ಟಿದೆ. ಇದರಿಂದಾಗಿ ಕಾಲೇಜುಗಳು ಮತ್ತು ವಿದ್ಯಾರ್ಥಿಗಳು ಪರಿಸರ ವಿಜ್ಞಾನವನ್ನು ಹಗುರವಾಗಿ ತೆಗೆದುಕೊಳ್ಳುವಂತಹ ಪರಿಸ್ಥಿತಿ ವ್ಯವಸ್ಥೆಯ ದೋಷಗಳಿಂದ ಆಗಿದೆ. ಇದು ಸರಿಗೊಳ್ಳಬೇಕಾದುದು ಇವತ್ತಿನ ಸಂದರ್ಭದಲ್ಲಿ ಅತೀ ಅಗತ್ಯ.

ನಮ್ಮಲ್ಲಿ ಪರಿಸರದ ಕುರಿತು ಜಾಗೃತಿ ತುಂಬಾ ಕಡಿಮೆಯಿದೆ. ನಮ್ಮ ಶಿಕ್ಷಣದ ಅವಧಿಯಲ್ಲಿ ಅದೊಂದು ಮುಖ್ಯ ವಿಚಾರ ಅಂತ ಯಾರು ಭಾವಿಸಿಯೇ ಇಲ್ಲ. ನನ್ನ ಉದಾಹರಣೆಯೇ ಹೇಳಬೇಕಾದರೆ, ನಾನು ಓದಿದ ಹೈಸ್ಕೂಲಿನ ಎದುರು ಕಾಣಿಸುವ ಒಂದಕ್ಕೊಂದು ತಾಗಿಕೊಂಡಂತಿರುವ ಸಾಲು ಸಾಲು ಗುಡ್ಡಗಳು ಪಶ್ಚಿಮ ಘಟ್ಟಗಳೆಂದು ನನ್ನ ಯಾವ ಶಿಕ್ಷಕರೂ ಹೇಳಲೇ ಇಲ್ಲ. ಇದೇ ಹೀಗಾದರೆ ಇನ್ನು ವನ್ಯಸಂಪತ್ತು, ಜೀವವೈವಿಧ್ಯ, ಪರಿಸರದ ಕುರಿತು ಅವರು ಅದಿನ್ನೆಷ್ಟು ಹೇಳಿರಬಹುದೆಂದು, ಕುತೂಹಲ ಹುಟ್ಟಿಸಿರಬಹುದೆಂದು ನೀವೇ ಊಹಿಸಿ… ಮುಂದೆ ಪದವಿ, ಸ್ನಾತಕೋತ್ತರ ಪದವಿ ದಿನಗಳಲ್ಲಿ ನನಗೆ ಯಾವುದೋ ಪ್ರೇರಣೆಯಿಂದ  ಆಕಸ್ಮಿಕವಾಗಿ ಪರಿಸರದ ಬಗ್ಗೆ ಕುತೂಹಲ ಹುಟ್ಟಿ ಅಲ್ಪಸ್ವಲ್ಪ ತಿಳಿದುಕೊಳ್ಳಲು ಸಾಧ್ಯವಾಯಿತು. ನಾನು ಓದಿದ ಹೈಸ್ಕೂಲಿನ ಹತ್ತಿರ ಇತ್ತೀಚೆಗೆ ಹೋದಾಗ ಶಾಲೆ ಎದುರಿನ ಗುಡ್ಡಗಳನ್ನು ಕಂಡು, ‘ಇದು ಪಶ್ಚಿಮ ಘಟ್ಟಗಳಲ್ಲವೇ!’ ಎಂದು ಅಚ್ಚರಿಯಾಯಿತು. ಜೊತೆ ಜೊತೆಗೆ ಕನಿಷ್ಠ ಅಷ್ಟೂ ತಿಳುವಳಿಕೆ ಹುಟ್ಟಿಸದ ಶಿಕ್ಷಕರ ಕುರಿತು ಅತೀವ ಬೇಸರವಾಯಿತು.

ಪರಿಸರ ವಿಸ್ಮಯಗಳ ಕುರಿತು ಆಸಕ್ತಿ ಇರುವ ಶಿಕ್ಷಕರು ನಮ್ಮಲ್ಲಿ ಸಾವಿರಕ್ಕೆ ಒಬ್ಬರಿರುವುದೂ ಕಷ್ಟವೇನೋ! ಎಂತಹ ಅವಿವೇಕಿಗಳು ನಮ್ಮಲ್ಲಿ ಪರಿಸರ ವಿಜ್ಞಾನ ಬೋಧಿಸುತ್ತಾರೆ ಎಂದರೆ ಅವರಿಗೆ ಕಾಡು, ಗುಡ್ಡ, ಪರಿಸರ ಅಂದರೆ ತಕ್ಷಣ ತಲೆಗೆ ಹೊಳೆಯುವುದು ಮಲೆನಾಡು ಮಾತ್ರ! ಬಯಲುನಾಡನ್ನು ಕುರಿತು ಹೆಚ್ಚಿನವರು ‘ಅಲ್ಲೇನುಂಟ್ರೀ?’ ಅಂತ ಆ ನೆಲವನ್ನೇ ನಿಷ್ಪ್ರಯೋಜಕ ಎಂದು ತೀರ್ಪು ಕೊಡುತ್ತಾರೆ. ಮರಳುಗಾಡು, ಬಯಲುನಾಡು, ಅವರ ಸುತ್ತಲಿನ ಎಲ್ಲದೂ ಕೂಡಾ ಒಂದು ವಿಶಿಷ್ಟ ಪರಿಸರ ಎಂಬ ಸಾಮಾನ್ಯ ಪ್ರಜ್ಞೆಯ ಕೊರತೆಯಿದೆ. ಪರಿಸರ ಎಂದರೆ ಹಸಿರೊಂದೇ ಎಂಬ ಪೂರ್ವಗ್ರಹ ಎಲ್ಲೆಡೆಯಿದೆ.

ಪರಿಸರ ಶಿಕ್ಷಣ

ಅತಿಮಾನವ ಯುಗದ ಹವಾಗುಣ ತುರ್ತು ಪರಿಸ್ಥಿತಿಯ ಈ ಕಠಿಣ ದಿನಗಳಲ್ಲಿ  ಸರ್ಕಾರ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಬೋಧಕ ವೃಂದದವರಿಗೆ ಆ ಕುರಿತು ಜಾಗೃತಿ ಹುಟ್ಟಿಸಲು ಅರಿವು ತುಂಬುವ ಪ್ರಯತ್ನ ಮಾಡಬೇಕು. ದೊಡ್ಡ ಸಮೂಹಕ್ಕೆ ಮಾರ್ಗದರ್ಶನ ಮಾಡುವವರಿಗೆ ಇದನ್ನು ಆದ್ಯತೆಯ ನೆಲೆಗಟ್ಟಿನಲ್ಲಿ ನೋಡಲು ತರಬೇತಿ ಅಗತ್ಯ. ನಾಡಿನಾದ್ಯಂತ ಹಲವು ನೆಲಮೂಲದ ಪರಿಸರ ತಜ್ಞರು, ವಿಜ್ಞಾನಿಗಳಿದ್ದಾರೆ. ಅವರನ್ನೆಲ್ಲಾ ಒಳಗೊಂಡು ಜಾಗೃತಿ ಮೂಡಿಸುವ ವಿವಿಧ ರೂಪದ ಕೆಲಸಗಳನ್ನು ಅಗತ್ಯವಾಗಿ ಮಾಡಬೇಕು.

ವ್ಯವಸ್ಥೆಯ ದೋಷಗಳು ನಿಧಾನಕ್ಕೆ ಸುಧಾರಣೆ ಕಾಣುತ್ತಾ ಸಾಗುವ ಪ್ರಕ್ರಿಯೆ ಒಂದೆಡೆಯಾದರೆ, ಇನ್ನೊಂದೆಡೆ ಪರಿಸರದ ಬಗ್ಗೆ ಆಸಕ್ತಿ ಇರುವವರು ತಿಂಗಳಿಗೆ ಒಂದೆರಡು ದಿನ ಬಿಡುವು ಮಾಡಿಕೊಂಡು, ತಮ್ಮ ತಮ್ಮಲ್ಲೇ ತಂಡಗಳನ್ನು ರಚಿಸಿಕೊಂಡು, ಅವರ ಸಮೀಪದ ಶಾಲಾ ಕಾಲೇಜುಗಳಿಗೆ ಹೋಗಿ ಮಕ್ಕಳಿಗೆ, ಯುವಜನರಿಗೆ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬಹುದು. ಮತ್ತಿದು ವೇದಿಕೆ ಕಾರ್ಯಕ್ರಮ, ಮೈಕು, ಶಾಲು, ಹಾರ, ತುರಾಯಿ ಸಮಾರಂಭಗಳಾಗದಂತೆ ಎಚ್ಚರವಹಿಸಬೇಕಾದ್ದು ತುಂಬಾ ಮುಖ್ಯ. ಇದು ಯಾರದೋ ಪ್ರತಿಷ್ಠೆ ಮೆರೆಸುವ ಸಮಾರಂಭವಾಗದಂತೆ ನಿಗಾ ವಹಿಸಬೇಕು. ಹೊಸ ತಲೆಮಾರನ್ನು ಹೆಚ್ಚು ಆಕರ್ಷಿಸುವ ಸಾಕ್ಷ್ಯಚಿತ್ರ ತೋರಿಸುವುದು, ಚಿತ್ರ ಪ್ರದರ್ಶಿಸುವುದು, ಪ್ರಾತ್ಯಕ್ಷಿಕೆ ನೀಡುವುದು, ಚಿತ್ರೋಪನ್ಯಾಸ ಮಾಡುವುದು ಹೀಗೆ ಚಟುವಟಿಕೆಗಳ ಮೂಲಕ ಮಾಡುವ ಭಿನ್ನ ಕೆಲಸಗಳು ಉತ್ತಮ. ಮಕ್ಕಳನ್ನು ಚಾರಣ ಕರೆದುಕೊಂಡು ಹೋಗಿ ಪರಿಸರ ಪ್ರೀತಿ ಹುಟ್ಟಿಸುವ ಅವಕಾಶವಿದ್ದರೆ, ಆಟ-ಹಾಡು-ನಾಟಕ ಮೊದಲಾದವುಗಳನ್ನು ಬಳಸಿಕೊಂಡು ತಿಳುವಳಿಕೆ ಹೆಚ್ಚಿಸಲು ಸಾಧ್ಯವಾದರೆ  ಅದು ಅತ್ಯುತ್ತಮ. ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಹುಟ್ಟಿಸುವುದು ತುಂಬಾ ಪರಿಣಾಮಕಾರಿಯಾಗಬಲ್ಲದು. ಇದಕ್ಕೆಲ್ಲಾ ಬಹುಪಾಲು ಶಾಲಾ ಕಾಲೇಜುಗಳಲ್ಲಿ ಭೋಧಕ ವೃಂದ ನಿರಾಸಕ್ತಿ ತೋರಿಸಿದರೂ ಇದನ್ನು ಬಿಟ್ಟು ಪರಿಸರ ಜಾಗೃತಿ, ಪ್ರೀತಿ ಹುಟ್ಟಿಸುವ ಬೇರೆ ದಾರಿಗಳು ಇಲ್ಲ. ತಂಡವಾಗಿ ಮಾಡುವ ಈ ಕೆಲಸಗಳಿಗೆ ದೂರದ ಮಹಾನಗರಗಳಲ್ಲಿ ಕೆಲಸ ಮಾಡುತ್ತಿರುವವರು ಅಲ್ಲಿಂದಲೇ ವಿವಿಧ ರೂಪಗಳಲ್ಲಿ ಒಳಗೊಳ್ಳಬಹುದು.

ಇವತ್ತು ರೈತರ ನಡುವೆ, ವಿವಿಧ ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವ ಜನರ ನಡುವೆ, ಸಮುದಾಯಗಳ ನಡುವೆ ತಮ್ಮ ಬದುಕನ್ನು ಇನ್ನಷ್ಟು ಪರಿಸರ ಸ್ನೇಹಿಯಾಗಿ ರೂಪಿಸಿಕೊಳ್ಳುವುದು ಹೇಗೆಂಬ ಚರ್ಚೆ, ಸಂವಾದಗಳನ್ನು ಹುಟ್ಟಿಸ ಬೇಕಾದುದು ಇವತ್ತಿನ ಅತೀ ಅಗತ್ಯ. ಹವಾಗುಣ ಬದಲಾವಣೆ ಎಲ್ಲೆಡೆ ಮನೆಮಾತಾದಾಗ ಮಾತ್ರ ಭೂಗ್ರಹದ ಮುಂದಿನ ಬದಲಾವಣೆಗಳಲ್ಲಿ ನಮ್ಮ ಬದುಕು ಉಳಿದೀತು.

ನಾಗರಾಜ ಕೂವೆ

ಶೃಂಗೇರಿಯ BEAS Centre ನ ಸಂಸ್ಥಾಪಕರಾದ ಇವರು ಈ ಸಂಸ್ಥೆಯ ಮೂಲಕ ಪರಿಸರ ಸಂರಕ್ಷಣೆಯ ಬಗೆಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಇದನ್ನೂ ಓದಿ- ಹಿಮಾಲಯದ ಭೂಕುಸಿತಗಳು ಹಾಗೂ ಪಶ್ಚಿಮ ಘಟ್ಟದ ಗುಡ್ಡಜರಿತಗಳು

More articles

Latest article