ಸ್ವಚ್ಛ ಗ್ರಾಮ ಸಂಕಲ್ಪ – ಹೀಗಿರಲಿ ಕಾರ್ಯಯೋಜನೆ ‌

Most read

ನಮ್ಮ ಮನೆ, ಮನಸ್ಸು, ಊರು, ಪಟ್ಟಣ, ಗ್ರಾಮ ಸ್ವಚ್ಛವಾಗಿರಬೇಕು ಎಂಬ ಅರಿವಿನ ನೆರವಿನ 

ದೀವಿಗೆಯನ್ನು ಹೊತ್ತು  ತಿರುಗುವಾಗ ಎಷ್ಟೋ ಸಲ ನನ್ನನ್ನು ಬಾಧಿಸುವುದಿದೆ- ಏನು ಬುದ್ಧಿಮಾತು ಹೇಳುವುದೇ ಚಾಳಿ ಆಯ್ತಾ ನಮಗೆ….ಸ್ವಚ್ಛ ಸ್ವಚ್ಛ ಅಂಥ ಬೊಬ್ಬೆ ಹೊಡಿಯುತ್ತೇವೆ, ಅಗತ್ಯ ಇರುವ ಒಂದು ಕಸದ ಬುಟ್ಟಿಯನ್ನು ಬಸ್ ನೊಳಗೆ, ಬಸ್ ಸ್ಟಾಂಡ್ ನಲ್ಲಿ, ಪಾರ್ಕ್ ನಲ್ಲಿ, ಬೀದಿ ಬದಿಯಲ್ಲಿ ಇಡೋದರ ಬಗ್ಗೆ ಯೋಚನೆಯೇ ಮಾಡಿಲ್ಲವಲ್ಲ…

ನಿಜ. ನಮ್ಮ ಬಾಲ್ಯದಲ್ಲಿ ಬಿಸಾಡೋ ಕಸವೇ ಇರಲಿಲ್ಲ. ಕಸ ತಿಪ್ಪೆಗೆ ಎಸೆದರೆ ಕರಗಿ ಮಣ್ಣಿನಲ್ಲಿ ಸೇರಿ ಹೋಗುತ್ತಿತ್ತು. ಹೆಚ್ಚೆಂದರೆ ಹಟ್ಟಿಗೆ ಗೊಬ್ಬರವಾಗುತ್ತಿತ್ತು..ಇಂದು ಹಳ್ಳಿ, ಪೇಟೆ ಎನ್ನುವ ಭೇದಭಾವ ಇಲ್ಲದೆ ರಸ್ತೆ, ಬೀದಿಗಳು ತುಂಬಿ ತುಳುಕುವ ಕಸದ ತೊಟ್ಟಿಗಳಾಗಿವೆ. ಎಲ್ಲಿಂದ ಪ್ರಾರಂಭಿಸೋದು ಈ ಸ್ವಚ್ಛತಾ ಆಂದೋಲನ?.

ಇತ್ತೀಚೆಗೆ ಬೆಂಗಳೂರು ಮಂಗಳೂರು ಬಸ್ಸಿನಲ್ಲಿ ಪಯಣಿಸುತ್ತಿದ್ದ ಆ ದಿನ ನಾನು ಸಕಲೇಶಪುರದಿಂದ ಮಂಗಳೂರು ತಲುಪಬೇಕಿತ್ತು. ಬಸ್ಸು ಪಯಣಿಗರಿಂದ ತುಂಬಿ ತುಳುಕುತ್ತಿತ್ತು. ದಂಪತಿಗಳು ಮತ್ತು ಅವರ ಪುಟ್ಟ ಮಕ್ಕಳಿಬ್ಬರು ಕುಳಿತಿದ್ದಲ್ಲಿ ನಾನು ಸೀಟು ಹಿಡಿದೆ. ಮೊಲೆ ಹಾಲು ಕುಡಿಯುವ ಮಗು ತಾಯಿಯ ಮಡಿಲಲ್ಲಿ ಇತ್ತು. ಕಿಟಕಿ ಸೈಡಿನಲ್ಲಿ ಕೂತಿದ್ದ  ತುಸು ದೊಡ್ಡ ಹೆಣ್ಣು ಮಗು ಅಪ್ಪನ ತೊಡೆಗೇರಿತು. ಮೊದಲೇ ತಾಯಿ ಮಗುವಿಗೆ ಮೊಲೆ ಹಾಲು ಕುಡಿಸುವಾಗ  ನಿಮಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದರಿಂದ ನಾನು ಮುದುರಿಕೊಂಡು ಬಸ್ ಸೀಟಿನ ಒಂದು ಕಡೆ ಸುಮ್ಮನೆ ಕಣ್ಣು ಮಚ್ಚಿ ಒರಗಿ ಕೊಂಡಿದ್ದೆ. ಅವಳಿಗೆ ನಾನು ಅಲ್ಲಿ ಕೂತದ್ದು ಹಿತವಾಗಿರಲಿಲ್ಲ ಎಂದು ಒಂದೆರಡು ಸಲ  ತಾಯಿ ಮಗುವಿಗೆ ಹಾಲು ಕುಡಿಸುವಾಗ ಕೊಸರಾಡಿದ್ದು ಕಂಡು ಅರ್ಥವಾಗಿತ್ತು. ಗಂಡ ಹೆಂಡತಿ ಅವಿರತ ಮಾತುಕತೆಯಲ್ಲಿ ತೊಡಗಿದ್ದರು. ನಾನು ಆಗಾಗ್ಗೆ ಬರುತ್ತಿದ್ದ ಫೋನ್ ಕರೆಗಳಿಗೆ ಉತ್ತರಿಸುತ್ತಾ ಕೂತಲ್ಲೇ  ನಿದ್ರಿಸಲು ಪ್ರಯತ್ನಿಸುತ್ತಿದ್ದೆ.

ಅಷ್ಟರಲ್ಲಿ ಬಸ್ ಹತ್ತಿದ ಒಬ್ಬ ಹೆಣ್ಣು ಮಗಳು ಆಕೆಯ ಮಣಬಾರದ ಬ್ಯಾಗನ್ನು ತಂದು ನನ್ನ ತೊಡೆಯಲ್ಲಿ ಕುಕ್ಕಿದಳು. ಉಸಿರಾಡಲು ಜಾಗವಿಲ್ಲದ ಆ ಬಸ್ಸಿನಲ್ಲಿ ಆಕೆ ನಿಂತು ಪಯಣಿಸ ಬೇಕೆಂದರೆ ನಾನು ಆಕೆಯ ಬ್ಯಾಗನ್ನು ನನ್ನ ತೊಡೆಯ ಮೇಲೆ ಇಟ್ಟುಕೊಳ್ಳುವ ಅನಿವಾರ್ಯತೆ ಇತ್ತು. ಆಧಾರ್ ಕಾರ್ಡ್ ಕೈಯಲ್ಲಿ ಹಿಡಿದು ಕೊಂಡು ನಿಂತ ಅಷ್ಟು ಹೆಣ್ಣು ಮಕ್ಕಳು ಉಚಿತ ಟಿಕೆಟ್ ಪಡೆಯಲು ಕಾದಿದ್ದರು. ಎಲ್ಲರಿಗೂ, ನಡುವೆ ನಿಂತ ಕೆಲವು ಗಂಡಸರಿಂದ ಹಣ ಪಡೆದು ಆ ನೂಕು ನುಗ್ಗುಲಿನಲ್ಲಿ ಬಸ್ ಕಂಡಕ್ಟರ್ ಟಿಕೆಟ್ ಹರಿದು ಕೊಟ್ಟು  ತನ್ನ ಸೀಟು ಸೇರಿ ಕೊಳ್ಳಲು ಕಸರತ್ತು ಮಾಡುತ್ತಿದ್ದ. ಬಸ್ಸಿನೊಳಗಿನ ವಿದ್ಯಮಾನಗಳನ್ನು ಗಮನಿಸುತ್ತಿದ್ದ ನನ್ನ ಕಣ್ಣು ಸಹಜವಾಗಿ ಹತ್ತಿರ ಕೂತಿದ್ದ ದಂಪತಿಗಳತ್ತ ಹರಿಯುತ್ತಿತ್ತು. ಅವರು ಮಾತನಾಡುತ್ತಿದ್ದ ಭಾಷೆ ನನಗೆ ಅಷ್ಟರ ಮಟ್ಟಿಗೆ ಅರ್ಥವಾಗದಿದ್ದರೂ ಬಸ್ಸು ನಿಂತ ಕಡೆಯೆಲ್ಲ ಗಂಡ, ಹೆಂಡತಿ ಪುಟ್ಟ ಮಕ್ಕಳಿಗೆ ವಸ್ತುಗಳನ್ನು ಮಾರಲು ಬಂದವರಿಂದ ಕಿಟಕಿಯಲ್ಲಿ ಪಡೆದುಕೊಂಡು ಹಣ ನೀಡುತ್ತಿದ್ದರು. ತಾವು ಕೊಂಡ ಆರೆಂಜ್ ಜ್ಯೂಸಿನಲ್ಲಿ ಅರ್ಧವನ್ನು ಮಗುವಿನ ಫೀಡಿಂಗ್ ಬಾಟ್ಲಿಗೆ ಬಗ್ಗಿಸಿ ಆ ಪುಟ್ಟ ಮಗುವಿಗೆ ಮಗುವಿನ ಅಮ್ಮ ಕುಡಿಯಲು ಕೊಟ್ಟದ್ದು ನೋಡಿ ಅದೇಕೋ ಸಂಕಟವಾಯಿತು. ಅಪ್ಪನ ತೊಡೆಯಲ್ಲಿದ್ದ ದೊಡ್ಡ ಮಗು ಉಳಿದ ಅರ್ಧ ಬಾಟ್ಲು ಆರೆಂಜ್ ಜ್ಯೂಸ್  ಆರಾಮವಾಗಿ ಕುಡಿಯುತ್ತಿತ್ತು. ಜ್ಯೂಸ್ ಕುಡಿದು ಮುಗಿಸಿದ ನಂತರ ಮಗು ಓಡುತ್ತಿರುವ ಬಸ್ಸಿನ ಕಿಟಕಿಯಿಂದ ಕೈಯಲ್ಲಿದ್ದ ಖಾಲಿ ಬಾಟ್ಲಿ ಯನ್ನು ಎತ್ತಿ ಬಿಸಾಡಿತು.  ಗಂಡ ಹೆಂಡತಿ ಕೂಡ ತಾವು ಚೀಪಿ ಮುಗಿಸಿದ ಐಸ್ ಕ್ಯಾಂಡಿಯ ಪ್ಲಾಸ್ಟಿಕ್ ತೊಟ್ಟೆಯನ್ನು ರಸ್ತೆಗೆ ಬಿಸಾಡಿದರು.

ನನಗೇಕೋ ಕೂತಲ್ಲೇ ಕಸಿವಿಸಿ ಆಗುತ್ತಿತ್ತು. ಬಸ್ ಮಂಗಳೂರು ತಲುಪಲು  ಇನ್ನು ಅರ್ಧ ಗಂಟೆ ಬಾಕಿ ಇತ್ತು. ಅಷ್ಟರಲ್ಲಿ ಗಂಡಸು ತನ್ನ ಕೈಯಲ್ಲಿದ್ದ ಬಿಸ್ಲೇರಿ ಬಾಟಲಿನಲ್ಲಿ ಉಳಿದ ನೀರನ್ನು  ಕುಡಿದು ಖಾಲಿಯಾದ ಬಾಟಲಿಯನ್ನು  ಬಸ್ಸಿನ ಕಿಟಕಿಯಿಂದ ಹೊರಗೆ ಎಸೆದು ಬಿಟ್ಟ. ಆಗ ಮಾತ್ರ ನನಗೆ ಸುಮ್ಮನಿರಲು ಸಾಧ್ಯವಾಗಲಿಲ್ಲ. , “ನೋಡಿ ಸರ್ ಖಾಲಿ ಬಾಟಲಿಯನ್ನು ರಸ್ತೆಗೆ ಎಸೆಯುವ ಬದಲು ನಿಮ್ಮ ಮನೆಗೆ ಕೊಂಡು ಹೋಗಿ ಕಸದ ಡಬ್ಬಿಗೆ ಹಾಕಬಹುದಿತ್ತಲ್ಲ‘’ ಎಂದೆ. ಪಾಪ ಆ ಗಂಡಸು ಮುಗ್ಧ “ಏನು ಆಗುವುದಿಲ್ಲ ಬಿಡಿ’ ಅಂದುಬಿಟ್ಟ.  ಆದರೆ ಆತನ ಪತ್ನಿ ನನಗೆ “ಓ ಹೌದಲ್ಲ ನಿಮಗೆ ಕೊಡಬಹುದಿತ್ತು ಮನೆಗೆ ಕೊಂಡು ಹೋಗುತ್ತಿದ್ದಿರಿ‘’ ಅಂದು ಬಿಟ್ಟಳು. ಆಗ ನನಗೆ ಆತಂಕವಾದದ್ದು ಎಲ್ಲಾ ವಿದ್ಯಮಾನಗಳನ್ನು ತಂದೆಯ ತೊಡೆಯಲ್ಲಿ ಕೂತಿದ್ದ ದೊಡ್ಡ ಮಗು ಗಮನಿಸುತ್ತಿತ್ತಲ್ಲ ಎಂದು. ಇಲ್ಲಿ ನನಗೆ ಅವಮಾನ ಆಗುವ ಪ್ರಶ್ನೆ ಇರಲಿಲ್ಲ.

ಪರಿಸರ ಅಂದರೆ ಏನು? ಅದಕ್ಕೆ ಹಾನಿಯಾಗುತ್ತಿದೆ ಎಂದರೆ ಯಾರಿಗೆ ಹಾನಿಯಾಗುತ್ತದೆ?. ಇದರ ಅಂತಿಮ ಹೊಣೆಗಾರಿಕೆ ಯಾರದು? ಎನ್ನುವ ಪ್ರಾಥಮಿಕ ಜ್ಞಾನವೂ ಇಲ್ಲದ ಈ ದಂಪತಿ ಹಾಗೂ ಮಗುವಿನ ಜೊತೆಗೆ ಪಯಣಿಸುತ್ತಿದ್ದ ನಾವೆಲ್ಲರೂ ಒಂದು ರೀತಿಯಲ್ಲಿ ಅಪರಾಧಿಗಳೇ ಅಲ್ಲವೇ? ಎನ್ನುವ ಪ್ರಶ್ನೆ ನನ್ನನ್ನು ಚುಚ್ಚುತೊಡಗಿತ್ತು.  ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಹೈರಾಣವಾಗಿದ್ದ ಪಯಣಿಗರು ತಮ್ಮ ತಮ್ಮ ತಂಗುದಾಣ ಬರುವುದನ್ನು ಕಾಯುತ್ತಿದ್ದರು. ಇಲ್ಲಿ ಪರಿಸರ ಪಾಠ ಹೇಳುವ ತುರ್ತು ನನ್ನದಾಗಬಾರದು  ನಿಜ. ಆದರೆ ಬಸ್ಸಿನಲ್ಲಿ ಕನಿಷ್ಠ ಒಂದೊಂದು ಹಸಿ ಕಸ ಒಣ ಕಸದ ಡಬ್ಬಿ ಇಡುವುದು ಸರಕಾರದ ಜವಾಬ್ದಾರಿಯಲ್ಲವೇ…? ಎನ್ನುವ ಪ್ರಶ್ನೆ ನನ್ನನ್ನು ಕಾಡ ತೊಡಗಿದ್ದು ಸುಳ್ಳಲ್ಲ.

ಮಗು ನೋಡಿ ಕಲಿಯುತ್ತದೆ. ಪರಿಸರ ಪ್ರಜ್ಞೆಯ ಪಾಠವಾದರೂ  ಮಗುವಿಗೆ ದಕ್ಕ ಬೇಕಾದದ್ದು ನೋಡಿ ಕಲಿಯುವುದರಿಂದ….ಮತ್ತು ಇದು ಮಗು ಭೂಮಿಗೆ ಬಿದ್ದು  ಕಣ್ಣು ಬಿಡುವಾಗಿನಿಂದ ಪ್ರಾರಂಭವಾಗ ಬೇಕಲ್ಲವೇ? ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವ  ಆಡು ಮಾತು ನಾವೆಲ್ಲ ಕೇಳಿ ಬೆಳೆದವರು. ಇಂದು 60 ರ ಹರೆಯದಲ್ಲಿರುವ ನಮಗೆ ಬಾಲ್ಯದ ಘಟನೆಗಳು ಅದೆಷ್ಟೋ ಆಪ್ತವಾಗಿ ಕಣ್ಣಿಗೆ ಕಟ್ಟುತ್ತವೆ.

ಶುದ್ಧವಾಗಿರುತ್ತಿದ್ದ ಪರಿಸರ ಪ್ಲಾಸ್ಟಿಕ್ ಗಳಿಲ್ಲದ ಹಿತ್ತಲು…. ಎಷ್ಟು ಚೆನ್ನಾಗಿತ್ತಲ್ಲ ಆ ದಿನಗಳು… ಇಷ್ಟು ಹೇಳಿದರೆ ಮುಗಿಯಿತೇ….ಇಲ್ಲ ಖಂಡಿತ ಇಲ್ಲ.

 ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿ ಎನ್ನುವ ಪ್ರಾಥಮಿಕ ಜ್ಞಾನವೂ ಇಲ್ಲದ ದಂಪತಿಗಳ ಜೊತೆ  ಇಡೀ ದಿನ ಕಳೆದಿದ್ದ  ನನಗೆ ಅರ್ಥವಾದದ್ದು ಪರಿಸರ ಪ್ರಜ್ಞೆಯನ್ನು ಜನಸಾಮಾನ್ಯರಲ್ಲಿ ವಿಸ್ತರಿಸುವುದಕ್ಕೆ ನಾವು ನಡೆಯಬೇಕಾದ ದೂರ ಮತ್ತು ಈ ಕೆಲಸವನ್ನು ಎಲ್ಲಿಂದ ಪ್ರಾರಂಭಿಸಬೇಕು ಎನ್ನುವ ಗೊಂದಲ.

ಒಬ್ಬ ವ್ಯಕ್ತಿ ತನ್ನ ಜೀವಮಾನದ ಉಸಿರಾಟದಲ್ಲಿ ಹೊರಗೆ ಹಾಕುವ ಇಂಗಾಲದ ಡೈಯಾಕ್ಸೈಡ್ ವಾತಾವರಣದಲ್ಲಿ ಕಡಿಮೆ ಆಗುವಂತೆ ನೋಡಿಕೊಳ್ಳಲು ಕನಿಷ್ಠ ತನ್ನ ಜೀವಮಾನದಲ್ಲಿ 165 ಗಿಡಗಳನ್ನು ನೆಟ್ಟು ಬೆಳೆಸಬೇಕು ಮತ್ತು  ಅದು ಮರವಾಗಬೇಕು… ಎಂದು ಒಂದು ಸಮೀಕ್ಷೆ ಹೇಳುತ್ತದೆ. ಅಪರೂಪದ ಕೆಲವು ಉದಾಹರಣೆಗಳನ್ನು ಬಿಟ್ಟರೆ ಈ ಹೇಳಿಕೆ  ವಾಸ್ತವ ದಲ್ಲಿ ನಿಜ ಆಗುವ ಪರಿಸ್ಥಿತಿ ಇಲ್ಲ ಎನ್ನುವ ಸ್ಥಿತಿಯನ್ನು ನಾವು ಇಂದು  ಕಾಣುತ್ತಿದ್ದೇವೆ. ಕಾಡು ನಾವು ಬೆಳೆಸಲಾಗುವುದಿಲ್ಲ ಇರುವ ಕಾಡು ಉಳಿಸಬೇಕು ಮತ್ತು ಅದು ನೈಸರ್ಗಿಕವಾಗಿರಬೇಕು ಎನ್ನುವುದನ್ನು ಒಪ್ಪಿಕೊಂಡರೂ ಈಗಾಗಲೇ ನಾಶ ಆಗಿರುವ  ಕಾಡಿನ ಮರು ಸೃಷ್ಟಿ ಹೇಗೆ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ರಸ್ತೆ ಅಗಲೀಕರಣ, ಕೈಗಾರಿಕೀಕರಣ ಹೀಗೆ ಅಭಿವೃದ್ಧಿಯ ಮಾನದಂಡಗಳನ್ನು  ತಿರುಚಿದ ಆಲೋಚನೆಗಳಿಂದಾಗಿ ಒಂದಷ್ಟು ಕಾಡನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ.  ಈ ಎಲ್ಲ ಲೋಪಗಳನ್ನು ಅರಿತುಕೊಂಡು ನಾವು ತುರ್ತಾಗಿ ಮಾಡಬೇಕಾದ ಬದಲಾವಣೆ ಎಂದರೆ ನಮ್ಮ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ.

1. ಅಂಗಡಿಗೆ ಹೋಗುವಾಗ ಬಟ್ಟೆಯ ಬ್ಯಾಗುಗಳನ್ನು ತಪ್ಪದೆ ತೆಗೆದುಕೊಂಡು ಹೋಗುವುದು 

2. ಮದುವೆ ಇತ್ಯಾದಿ ಸಮಾರಂಭಗಳಿಗೆ ಹೋಗುವಾಗ ತಟ್ಟೆ ಲೋಟ ತೆಗೆದುಕೊಂಡು ಹೋಗುವುದು.

3. ಸುತ್ತಮುತ್ತಲಿನ ಪರಿಸರ ಶುಚಿಯಾಗಿ ಇಡುವ ಬಗ್ಗೆ ನಾವು ಮುಖಾಮುಖಿಯಾಗುವ ಸಣ್ಣ ಸಣ್ಣ ಬಳಗಗಳಲ್ಲಿ ಮಾತನಾಡಿ ಪರಿಸರದ ಸ್ವಚ್ಛತೆಯ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡುವುದು.

 ʼಸ್ವಚ್ಛ ಪರಿಸರ ಸ್ವಚ್ಛ ಗ್ರಾಮʼ ಸಂಕಲ್ಪವನ್ನು ಮಂಗಳೂರು ಗ್ರಾಮಾಂತರ ಪ್ರದೇಶದ ಸ್ವಯಂಸೇವಾ ಸಂಸ್ಥೆ ಜನ ಶಿಕ್ಷಣ ಟ್ರಸ್ಟ್ ಪ್ರಾರಂಭಿಸಿದ್ದು 2005ನೇ ಇಸವಿಯಲ್ಲಿ. ಬಂಟ್ವಾಳ ತಾಲೂಕಿನ ಮುಡಿಪುವನ್ನು ತಮ್ಮ ಕಾರ್ಯ ಕ್ಷೇತ್ರವಾಗಿ ಅದು ಆರಿಸಿಕೊಂಡಿತು. ಈ  ಸಂಸ್ಥೆಯ ನಿರ್ದೇಶಕರುಗಳಾದ ಶೀನ ಶೆಟ್ಟಿ, ಕೃಷ್ಣ ಮೂಲ್ಯರು ಸ್ವಚ್ಛತೆಯನ್ನೇ ಮಂತ್ರವಾಗಿಸಿಕೊಂಡು ನಡೆದ ಈ ಮುಗಿಯದ ಹಾದಿಯಲ್ಲಿ ಇಂದಿಗೂ ಭರವಸೆಯನ್ನು ಇಟ್ಟುಕೊಂಡಿರುವುದು ಅವರ ಕರ್ತೃತ್ವ ಶಕ್ತಿಯ ದ್ಯೋತಕವಾಗಿದೆ. 

ಜನಶಿಕ್ಷಣ ಟ್ರಸ್ಟ್ ರಾಷ್ಟ್ರೀಯ ನಿರ್ಮಲ ಗ್ರಾಮ ಪುರಸ್ಕೃತ ಸಮಾಜ ಕಾರ್ಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸ್ವಚ್ಛ ಗ್ರಾಮ ಪರಿಕಲ್ಪನೆಯ ಈ ಯೋಜನೆಯಲ್ಲಿ ನಾಗರೀಕರನ್ನು ಅಧಿಕಾರಿಗಳನ್ನು ಜನಪ್ರತಿನಿಧಿಗಳನ್ನು ನ್ಯಾಯಾಂಗವನ್ನು ಮನವೊಲಿಸುವಿಕೆಯ ಮಾದರಿಯಲ್ಲಿ ಮುನ್ನಡೆಸುವಲ್ಲಿ ಇವರು ನಡೆಸಿದ ಪಯಣದಲ್ಲಿ 20 ವರ್ಷದ ಸುದೀರ್ಘ ಕಥನಗಳಿವೆ. ಮೊದಲು ಬಾಳೆ ಪುಣಿ ಗ್ರಾಮದಿಂದ ಪ್ರಾರಂಭವಾದ ಈ ನಡಿಗೆ ಬನ್ನೂರು ಲೈಲ ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸುತ್ತ ಸಾಗುತ್ತಿದೆ. ಇಲ್ಲಿ ಹಸಿ ಕಸ, ಒಣ ಕಸ, ಅಪಾಯಕಾರಿ ಕಸಗಳ ಪ್ರತ್ಯೇಕ ವಿಂಗಡಣೆಗಳು ನಿಯಮಿತವಾಗಿ ನಡೆಯುತ್ತಿವೆ. ಇದರ ಜೊತೆ ಜೊತೆಗೆ ಜನಸಾಮಾನ್ಯರಲ್ಲಿ ಸ್ವಚ್ಛ ಪರಿಸರಕ್ಕಾಗಿ ಎಚ್ಚರ ಮೂಡಿಸುತ್ತಿದೆ. ಸುಪ್ರೀಂ ಕೋರ್ಟು ಹೈಕೋರ್ಟ್ ಗಳು ತಂದಿರುವ ಕಾಯ್ದೆಗಳನ್ನು ಜನಸಾಮಾನ್ಯರಿಗೆ ಇವರು ಮನವರಿಕೆ ಮಾಡಿಕೊಡುವ ಕಾರ್ಯಕ್ರಮಗಳು ಸ್ವಾಗತಾರ್ಹ ವಾಗಿರುವಂತಹದ್ದು. ನಮ್ಮ ದೇಶದ ಸುಪ್ರೀಂಕೋರ್ಟು 2016ರಲ್ಲಿ ಕಸ ಬಿಸಾಡೋದು ಸುಡುವುದು ಕಾನೂನುಬಾಹಿರ ಶಿಕ್ಷಾರ್ಹ ಅಪರಾಧವೆಂದು ಆದೇಶ ನೀಡಿದೆ. ಕರ್ನಾಟಕ ಸರಕಾರವು  ಪ್ಲಾಸ್ಟಿಕ್ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ 2025ರಲ್ಲಿ  ಪರಿಸರ ಕಾಳಜಿಯಿಂದ ಮನೆ ಮನೆ ಅಭಿಯಾನವನ್ನು ಮುಂದುವರಿಸುವ ಜನ ಶಿಕ್ಷಣ ಟ್ರಸ್ಟಿನ ವ್ಯವಸ್ಥಿತ ಕಾರ್ಯ ಯೋಜನೆಯನ್ನು ಇತರರು ಅನುಸರಿಸಬೇಕಾದ ಅಗತ್ಯ ಇದೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಉಸಿರಾಡುವ ಗಾಳಿಯು ಅತ್ಯಂತ ಕಳಪೆ ಎಕ್ಯೂಐ ಮಟ್ಟ ತಲುಪಿದೆ. ದೇಶದ ಎ-1 ಶ್ರೇಯಾಂಕಿತ ನಗರವಾದ ದೆಹಲಿ ಯ ಗಾಳಿಯ ಗುಣಮಟ್ಟ ಸೂಚ್ಯಂಕ 400ರ ಗಡಿ ದಾಟಿರೋದು ಸುದ್ದಿಯಾಗುತ್ತಿದೆ. ಇದರಿಂದ ಇಲ್ಲಿನ ನಾಗರೀಕರು ಗಂಭೀರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ನಾವಿರುವ ಮಂಗಳೂರಿನ ಪರಿಸ್ಥಿತಿಯಾದರೂ ಇದಕ್ಕಿಂತ ಉತ್ತಮ ಇಲ್ಲ. ಬಿ -2 ಶ್ರೇಯಾಂಕಿತ ನಗರವಾದ ಇಲ್ಲಿ ಗಾಳಿಯ ಗುಣಮಟ್ಟ ದಿನೇ ದಿನೇ ಕುಸಿಯುತ್ತಿದೆ. ಬೆಂಗಳೂರು, ಮೈಸೂರು, ವಿಶಾಖಪಟ್ಟಣ, ವಿಜಯವಾಡ, ತೆಲಂಗಾಣಗಳಲ್ಲೂ ಇದೇ ಪರಿಸ್ಥಿತಿ ಇದೆ. ಇಲ್ಲಿ ಚಳಿಗಾಲವೇ ಇಲ್ಲವಾಗಿದೆ. ಒಂದು ಮರ ಕಡಿದರೆ 10 ಸಸಿ ನೆಡಲಾಗುವುದು ಎಂಬ ಘೋಷಣೆ ದಿನಪತ್ರಿಕೆಗಳಿಗಷ್ಟೇ ಸೀಮಿತವಾಗಿ ಉಳಿದಿದೆ.. ಸ್ವಚ್ಛ ಪರಿಸರ, ಕಸಮುಕ್ತ ಗ್ರಾಮ,                                                                                                                                                           ಸಂಪೂರ್ಣ ಸ್ವಚ್ಛ ಗ್ರಾಮ  ಪಟ್ಟಣಗಳಾಗಿ  ವಿಸ್ತರಣೆ  ಪಡೆಯಬೇಕಾದರೆ ಇದರಲ್ಲಿ ದೇಶದ ನಾಗರೀಕರೆಲ್ಲ ಸಮರೋಪಾದಿಯಲ್ಲಿ ಕೆಲಸ ಮಾಡುವ ಸಂಕಲ್ಪ ಮಾಡಬೇಕು. ನಗರ, ಗ್ರಾಮ ಪಂಚಾಯಿತಿ ಮಟ್ಟದ  ಸ್ವಚ್ಛತೆ ಮತ್ತು ನೈರ್ಮಲ್ಯ ಸಲಹಾ ಸಮಿತಿಗಳನ್ನು ಕ್ರಿಯಾಶೀಲ ಗೊಳಿಸುವುದು ಒಂದು ಬಹುದೊಡ್ಡ ಪ್ರಕ್ರಿಯೆ. ಜನಪ್ರತಿನಿಧಿಗಳು, ಇಲಾಖಾ  ಸಿಬ್ಬಂದಿಗಳು, ಸಂಘ ಸಂಸ್ಥೆಗಳು, ಸಂಜೀವಿನಿ ಒಕ್ಕೂಟ ಸ್ವಸಹಾಯ ಸಂಘಗಳ ಸದಸ್ಯರು ಜೊತೆಯಾಗಿ ಈ ಸಂಕಲ್ಪದ ಜೊತೆ ಹೆಜ್ಜೆ ಇಡಬೇಕು. ಎಲ್ಲದರ ಮೊದಲ ಹೆಜ್ಜೆಯಾಗಿ ಆಯಾ ವಾರ್ಡಿ ನ ಪ್ರತಿ ಮನೆಗೆ ಭೇಟಿ ನೀಡಿ ಸ್ವಚ್ಛತೆಯ ಮಹತ್ವ, ತ್ಯಾಜ್ಯ ನಿರ್ವಹಣೆಯ ವಿಧಾನಗಳ ಬಗ್ಗೆ  ಜನರಿಗೆ ಅರಿವು ನೀಡಬೇಕು. ಹಸಿ ಕಸ, ಒಣ ಕಸ, ಘನ ತ್ಯಾಜ್ಯಗಳ ವಿಲೇವಾರಿಗಾಗಿ ಬಕೆಟ್ಟುಗಳನ್ನು ಪ್ರತಿ ಗ್ರಾಮ ಪಂಚಾಯಿತಿಗಳಿಂದ ಮನೆ ಮನೆಗೆ ವಿತರಿಸಬೇಕು.

ಎರಡನೇ ಹಂತವಾಗಿ ವಾರ್ಡ್ ವ್ಯಾಪ್ತಿಗೆ ಸಂಬಂಧಿಸಿದಂತೆ ಇರುವ ಅಂಗಡಿಗೆ ಹೋಟೆಲ್ ಗಳಲ್ಲೂ  ತ್ಯಾಜ್ಯಗಳ ಸರಿಯಾದ ನಿರ್ವಹಣೆಯ ಬಗ್ಗೆ ಮಾಹಿತಿ ನೀಡುವುದು. ತಪ್ಪಿದಲ್ಲಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡುವುದು.

ಶ್ರಮದಾನ ದಿನ ನಿಗದಿಪಡಿಸಿ ಗ್ರಾಮದ ಪ್ರತಿ ಕುಟುಂಬದ ಒಬ್ಬ ಸದಸ್ಯರು ದಿನದ ಒಂದು ಗಂಟೆಯನ್ನು ಸಾಮೂಹಿಕ ಸ್ವಚ್ಛತೆಯ ಶ್ರಮದಾನದಲ್ಲಿ ಭಾಗವಹಿಸಿ ಹಳ್ಳಿಯ ವಸತಿ ಪ್ರದೇಶ ರಸ್ತೆ ತೋಡುಗಳಲ್ಲಿ ತ್ಯಾಜ್ಯ ಸಂಗ್ರಹಿಸಿ ವಿಂಗಡಿಸಿ ಸಮರ್ಪಕವಾಗಿ ನಿರ್ವಹಿಸುವುದು.

ಅಂಗನವಾಡಿ, ಶಾಲೆ, ಸಂಘ ಸಂಸ್ಥೆ, ಸ್ವಸಹಾಯ ಸಂಘಗಳ ಮೂಲಕ ಸ್ವಚ್ಛ ಗ್ರಾಮ ಸಂಕಲ್ಪ ಮಾಡಿ ಕಾರ್ಯ ಪ್ರವೃತ್ತ ವಾಗುವುದು.

ವಾರ್ಡ್ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವುದು, ಸುಡುವುದು, ತಡೆಯುವುದು ತಪ್ಪಿತಸ್ಥರನ್ನು ಪತ್ತೆಹಚ್ಚಲು ಸಿಸಿ ಕ್ಯಾಮೆರಾ ಅಳವಡಿಸುವುದು.

 ಸಂಪೂರ್ಣ ಸ್ವಚ್ಛ ಮನೆ, ಹಸಿರು ಮನೆ, ಅಂಗನವಾಡಿ, ಶಾಲೆ, ಅಂಗಡಿ, ಹೋಟೆಲುಗಳನ್ನು ಗುರುತಿಸಿ ಗೌರವಿಸುವುದು.

ದೇವಿಕಾ ನಾಗೇಶ್‌

ಲೇಖಕಿ, ಕವಯಿತ್ರಿ, ಸಾಮಾಜಿಕ ಕಾರ್ಯಕರ್ತೆ.


ಇದನ್ನೂ ಓದಿ- http://“ಮೆಟ್ರೋಸಿಟಿಯಲ್ಲೊಂದು ಇಳಿಸಂಜೆ” https://kannadaplanet.com/one-evening-in-in-the-metrocity/

More articles

Latest article