ನವದೆಹಲಿ : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮಗೆ ಒತ್ತಾಯಿಸಿ ಅಕ್ಟೋಬರ್ 10 ರಂದು ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ.
ಹಿಂದಿನ ಪ್ರತಿಭಟನೆಗಳಲ್ಲಿ ಸೂಚನೆಗಳನ್ನು ಪಾಲಿಸದಿರುವುದು ಹಾಗೂ ಸಾರ್ವಜನಿಕ ಸುರಕ್ಷತೆ, ಕಾನೂನು-ಸುವ್ಯವಸ್ಥೆ ಮತ್ತು ಸಂಚಾರ ನಿಯಂತ್ರಣಕ್ಕೆ ಸಂಬಂಧಿಸಿದ ಆತಂಕಗಳನ್ನು ಇದಕ್ಕೆ ಕಾರಣಗಳಾಗಿ ಉಲ್ಲೇಖಿಸಲಾಗಿದೆ. ಯೋಜಿತ ಪ್ರತಿಭಟನೆಯ ಕುರಿತು ಮಾಹಿತಿ ನೀಡುವ ಅರ್ಜಿಯನ್ನು ಅಕ್ಟೋಬರ್ 7 ರಂದು CJP ಸಹ-ಸಂಯೋಜಕ ಸೌರವ್ ದಾಸ್ ಅವರಿಂದ ಸ್ವೀಕರಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತರಾದ ನೂಪುರ್ ಪ್ರಸಾದ್ ತಿಳಿಸಿದ್ದಾರೆ.
ಈ ಮಧ್ಯೆ, ಶನಿವಾರ ನಡೆಯಲಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ರಾಷ್ಟ್ರ ರಾಜಧಾನಿಯಾದ್ಯಂತ ಇರುವ 57 ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚುವ ಹಾಗೂ ಈ ನಿಲ್ದಾಣಗಳಲ್ಲಿ ರೈಲುಗಳ ಸಂಚಾರದ ಆವರ್ತನವನ್ನು ಕಡಿಮೆ ಮಾಡುವ ಕುರಿತು ಪರಿಗಣಿಸುವಂತೆ ದೆಹಲಿ ಪೊಲೀಸರು ‘ದೆಹಲಿ ಮೆಟ್ರೋ ರೈಲು ನಿಗಮ’ಕ್ಕೆ ಮನವಿ ಮಾಡಿದ್ದಾರೆ ಎಂದು ಅಧಿಕೃತ ಮಾಹಿತಿಯೊಂದು ತಿಳಿಸಿದೆ.
ಗುರುವಾರ ಬರೆದ ಪತ್ರವೊಂದರಲ್ಲಿ, ಜಂತರ್ ಮಂತರ್ ಮತ್ತು ನವದೆಹಲಿ ಜಿಲ್ಲೆಯ ಇತರ ಸ್ಥಳಗಳಲ್ಲಿ ಪ್ರಸ್ತಾಪಿತ ಪ್ರತಿಭಟನೆಗಳು ಹಾಗೂ ಸೂಕ್ಷ್ಮ ಪ್ರದೇಶಗಳತ್ತ ಅನಿಯಂತ್ರಿತ ಗುಂಪುಗಳು ಚಲಿಸುವ ಸಾಧ್ಯತೆಯನ್ನು ಉಲ್ಲೇಖಿಸಿ, ಗುರುತಿಸಲಾದ ನಿಲ್ದಾಣಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಂಟಿ ಪೊಲೀಸ್ ಆಯುಕ್ತರು (ಸಾರಿಗೆ ವಿಭಾಗ) DMRCಗೆ ಸೂಚಿಸಿದ್ದಾರೆ.
ಏತನ್ಮಧ್ಯೆ, ಪ್ರಸ್ತಾಪಿತ ನಿರ್ಬಂಧಗಳು ಶುಕ್ರವಾರ ರಾತ್ರಿ 9 ಗಂಟೆಗೆ ಪ್ರಾರಂಭವಾಗಿ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ಅಕ್ಟೋಬರ್ 10 ರಂದು ಮುಂದುವರಿಯಲಿವೆ.
ಈ ಪತ್ರದಲ್ಲಿ ಗುರುತಿಸಲಾದ 57 ನಿಲ್ದಾಣಗಳಲ್ಲಿ ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಪಟೇಲ್ ಚೌಕ್, ಜನಪಥ್, ನವದೆಹಲಿ, ಮಂಡಿ ಹೌಸ್, ಐಟಿಒ (ITO), ಸುಪ್ರೀಂ ಕೋರ್ಟ್, ಇಂದ್ರಪ್ರಸ್ಥ, ಕಾಶ್ಮೀರಿ ಗೇಟ್, ಕರೋಲ್ ಬಾಗ್, ಐಎನ್‌ಎ (INA), ಹೌಜ್ ಖಾಸ್, ಲಜಪತ್ ನಗರ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಸೀಲಂಪುರ್, ವೆಲ್ಕಮ್, ಶಾಹ್ದಾರಾ, ರಿಥಾಲಾ, ರೋಹಿಣಿ ಈಸ್ಟ್ ಮತ್ತು ರೋಹಿಣಿ ವೆಸ್ಟ್ ಮುಂತಾದವು ಸೇರಿವೆ.

